ಪ್ರತಿ ಪಕ್ಷದಲ್ಲಿ ಮುಂದುವರೆಯಲು ಕಾಂಗ್ರೆಸ್’ಗೆ ನೈತಿಕತೆ ಇಲ್ಲ : ಸಿಎಂ ಕಿಡಿ

Social Share

ಬೆಂಗಳೂರು,ಫೆ.19- ಪ್ರತಿಪಕ್ಷವಾಗಿ ಕಾಂಗ್ರೆಸ್ ಕೆಲಸ ಮಾಡುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಅತ್ತ ಆಡಳಿತದಲ್ಲೂ ಇಲ್ಲ. ಇತ್ತ ಪ್ರತಿಪಕ್ಷವಾಗಿಯೂ ತನ್ನ ಜವಾಬ್ದಾರಿ ಏನೆಂಬುದನ್ನು ಅರಿಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಅವರಿಗೆ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಛತ್ರಪತಿ ಶಿವಾಜಿ ಮಹಾರಾಜ್ ಅವರ 395 ನೇ ಜಯಂತಿ ಉತ್ಸವದ ಅಂಗವಾಗಿ ಬೆಂಗಳೂರಿನ ಸದಾಶಿವನಗರ ಬಳಿಯಿರುವ ಶಿವಾಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಸ್ತುತ ಹಿಜಾಬ್ ಧರಿಸುವಿಕೆಯಿಂದ ಉಂಟಾಗಿರುವ ಗೊಂದಲದ ವಾತಾವರಣ ಶೀಘ್ರದಲ್ಲೇ ಇತ್ಯರ್ಥವಾಗಲಿದೆ. ಹೊರಗನಿಂದ ಬಂದು ಕೆಲವರು ಇಂತಹ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಒಂದೆಡೆ ಕುಳಿತು ಸೌಹಾರ್ದಯುತವಾಗಿ ಮಾತುಕತೆ ನಡೆಸಿದರೆ ಬಿಕ್ಕಟ್ಟು ಇತ್ಯರ್ಥವಾಗುತ್ತದೆ.
ಆದರೆ ಹೊರಗಿನವರ ಮಧ್ಯಪ್ರವೇಶದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಹೈಕೋರ್ಟ್‍ನ ತ್ರಿಸದಸ್ಯ ಪೀಠ ನೀಡಿರುವ ಮಧ್ಯಂತರ ಆದೇಶವನ್ನು ಪ್ರತಿಯೊಬ್ಬರು ಒಪ್ಪಲೇಬೇಕು. ಸರ್ಕಾರ ಅದನ್ನು ಪಾಲನೆ ಮಾಡುತ್ತಿದೆ ಎಂದು ಸಿಎಂ ಸಮರ್ಥಿಸಿಕೊಂಡರು.
ಅಧ್ಯಕ್ಷರ ನೇಮಕ: ಇದೇ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರು, ಮರಾಠ ಅಭಿವೃದ್ಧಿ ಮಂಡಳಿಗೆ ಸಮುದಾಯದ ಹಿರಿಯ ಮುತ್ಸದ್ದಿ ಮಾರುತಿ ರಾವ್ ಮುಳೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಇಂದೇ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು. ಸಮುದಾಯದ ಶ್ರೀಗಳು ಹಾಗೂ ಸಮಾಜದ ಮುಖಂಡರಾದ ಪಿ.ಜಿ.ಆರ್.ಸಿಂಧ್ಯಾ ಅವರ ನೇತೃತ್ವದಲ್ಲಿ ಈ ಸಮುದಾಯಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುವುದು. ಅಗತ್ಯಕಂಡುಬಂದರೆ ಮಂಡಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವುದಾಗಿ ಆಶ್ವಾಸನೆ ನೀಡಿದರು.
ಮೊಘಲರ ವಿರುದ್ದ ಹೋರಾಟ ನಡೆಸಿದ ಛತ್ರಪತಿ ಶಿವಾಜಿ ಮಹಾರಾಜರು ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯನಿಗೆ ಎಂದೆಂದಿಗೂ ಆದರ್ಶಪ್ರಾಯ. ಜಾತಿ, ಪ್ರದೇಶ ಮೀರಿ ಅಖಂಡ ಭಾರತಕ್ಕೆ ಅವರು ನಡೆಸಿದ ಹೋರಾಟ ನಮ್ಮೆಲ್ಲರಿಗೂ ಅನುಕರಣೀಯ ಎಂದು ಕೊಂಡಾಡಿದರು.
ಚಿಕ್ಕಂದಿನಿಂದಲೇ ದೇಶ ಪ್ರೇಮ, ಅಖಂಡ ಭಾರತ ಒಗ್ಗೂಡಿಕೆಗೆ ಹೋರಾಟ ನಡೆಸಿದ್ದ ಶಿವಾಜಿಯವರ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆ.
ರಾಜ್ಯ ಮತ್ತು ದೇಶದಲ್ಲಿ ಅವರು ಸಾರಿರುವ ದೇಶಭಕ್ತಿಯನ್ನು ಮುಂದಿನ ಯುವಜನಾಂಗಕ್ಕೆ ಕೊಂಡೊಯ್ಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್, ಮಾಜಿ ಶಾಸಕ ಎಂಜಿ ಮೂಳೆ, ಗೋಸಾಯಿ ಮಹಾಸಂಸ್ಥಾನಮಠದ ಮಂಜುನಾಥ ಭಾರತೀ ಶ್ರೀಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Articles You Might Like

Share This Article