ಕಾಂಗ್ರೆಸ್‍ನ ಜನವಿರೋಧಿ ನೀತಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ : ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ಫೆ.18- ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಇದೇ ರೀತಿ ಜನ ವಿರೋಧಿ, ರಾಜ್ಯ ವಿರೋಧಿ, ಹಾಗೂ ಮಕ್ಕಳ ವಿರೋಧಿ ನೀತಿ ಧೋರಣೆ ಅನುಸರಿಸಿದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇತ್ತೀಚೆಗೆ ತಾನು ಒಂದು ಜವಾಬ್ದಾರಿಯುತ ಪ್ರತಿಪಕ್ಷ ಎಂಬುದನ್ನೇ ಮರೆತುಬಿಟ್ಟಿದೆ. ನಿಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳದಿದ್ದರೆ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸದನದಲ್ಲಿ ಹಲವಾರು ವಿಷಯಗಳನ್ನು ಚರ್ಚೆ ಮಾಡಬೇಕಿದೆ.
ಅದರಲ್ಲೂ ಪ್ರಮುಖವಾಗಿ ಮಕ್ಕಳ ಸಮವಸ್ತ್ರ ಕುರಿತು ನಾವು ಇಲ್ಲಿಂದ ಸಂದೇಶ ನೀಡಬೇಕು. ಸರ್ಕಾರ ಏನು ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಜನತೆ ಕಾತುರದಿಂದ ಎದುರು ಓಡುತ್ತಿದ್ದಾರೆ. ಹೈಕೋರ್ಟ್ ಮಧ್ಯಂತರ ತೀರ್ಪನ್ನು ನಾವು ಪಾಲನೆ ಮಾಡಬೇಕು. ಆದರೆ ನಿಮ್ಮ ವರ್ತನೆ ಯಾರಿಗೂ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದಾನಸಭೆಯಲ್ಲಿ ಅನೇಕ ವೇಳೆ ಧರಣಿಗಳು ನಡೆದಿವೆ. ಅದು ರೈತರ, ಕೂಲಿಕಾರ್ಮಿಕರ, ಜನತೆಯ ಪರವಾಗಿ ಆಗಿವೆ. ಆದರೆ ಕಾಂಗ್ರೆಸ್ ನಡೆಸುತ್ತಿರುವ ಇಂದಿನ ಧರಣಿಯಲ್ಲಿ ಯಾವುದೇ ಜನಹಿತವಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಈ ರೀತಿ ನಡೆದುಕೊಳ್ಳುತ್ತಿರುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ರಾಜ್ಯದ ಶಾಲಾಕಾಲೇಜುಗಳಲ್ಲಿ ಗೊಂದಲ ನಡೆಯುತ್ತಿದೆ. ನಾವು ಅವರಲ್ಲಿರುವ ಗೊಂದಲವನ್ನು ದೂರ ಮಾಡಿ ಮಕ್ಕಳ ಭವಿಷ್ಯ ರೂಪಿಸಬೇಕು. ಮುಂಬರುವ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಅವರಲ್ಲಿ ಉಂಟಾಗಿರುವ ಗೊಂದಲ ಆತಂಕವನ್ನು ದೂರ ಮಾಡಿ ಆತ್ಯಸ್ಥೈರ್ಯ ತುಂಬಬೇಕು. ಈ ಕಾಂಗ್ರೆಸಿಗರು ಕ್ಷುಲ್ಲಕ ವಿಷಯವನ್ನು ಮುಂದಿಟ್ಟು ಕೊಂಡು ಮಕ್ಕಳ ಭವಿಷ್ಯಕ್ಕೆ ಮಾರಕವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.
ಕರ್ನಾಟಕದಲ್ಲಿ ನಡೆಯುತ್ತಿರು ವುದನ್ನು ಇಡೀ ದೇಶವನ್ನು ನೋಡುತ್ತಿದೆ. ಇಲ್ಲಿಂದ ನಾವು ಒಂದು ಸ್ಪಷ್ಟವಾದ ಸಂದೇಶವನ್ನು ನೀಡಬೇಕಿತ್ತು. ಒಂದು ಕಡೆ ಸಭಾಧ್ಯಕ್ಷರಿಗೂ ಗೌರವ ಕೊಡು ವುದಿಲ್ಲ. ಅವರ ಪೀಠಕ್ಕೂ ಅಗೌರವ ತೋರುತ್ತಾರೆ, ಸಂವಿಧಾನಕ್ಕೂ ಅಗೌರವ ತೋರಿದ್ದಾರೆ. ಕಾಂಗ್ರೆಸ್‍ನವರು ರಾಜದ್ರೋಹಿಗಳು ಎಂದು ತರಾಟೆಗೆ ತೆಗೆದುಕೊಂಡರು.
ಶಾಲಾಕಾಲೇಜುಗಳಲ್ಲಿ ಗೊಂದಲ ಪರಿಹಾರವಾಗಿ ನಾವು ವಿದ್ಯಾರ್ಥಿಗಳಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಬೇಕು. ವಿರೋಧ ಪಕ್ಷದವರ ಈ ವರ್ತನೆ ಮಕ್ಕಳ ಭವಿಷ್ಯವನ್ನು ಹಾಳು ಮಾಡುವಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಸಭೆ ಇತಿಹಾಸದಲ್ಲಿ ನಾನು ಒಂದು ಬಾರಿ ಸಭಾಧ್ಯಕ್ಷರು ತೀರ್ಪು ನೀಡಿದ ಮೇಲೆ ಪುನಃ ಅದನ್ನು ವಿರೋಸಿ ಪ್ರತಿಭಟನೆ ನಡೆಸಿದ ಪ್ರಸಂಗವನ್ನು ಎಲ್ಲಿಯೂ ನೋಡಿಲ್ಲ. ನೀವು ಎಲ್ಲವನ್ನು ವಿಸ್ತೃತವಾಗಿ ನೋಡಿ ನಿಲುವಳಿ ಸೂಚನೆಯನ್ನು ತಿರಸ್ಕರಿಸಿ ತೀರ್ಪು ನೀಡಿದ್ದೀರಿ. ಆದರೂ ಅದೇ ವಿಷಯವನ್ನು ಮುಂದಿಕೊಂಟು ಪುನಃ ಧರಣಿ ಮಾಡಿದರೆ ಇದು ಅವರ ದಿವಾಳಿತನ ತೋರುತ್ತದೆ ಎಂದು ಕಿಡಿಕಾರಿದರು.
ಇವರು ನಡೆಸುತ್ತಿರುವ ಹೋರಾಟದಲ್ಲಿ ರಾಜ್ಯದ ಹಿತವಿದಯೇ? ಇಲ್ಲವೇ ಜನಹಿತವಿದೆಯೇ? ರಾಜಕೀಯ ಲಾಭಕ್ಕಾಗಿ ಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಇದು ಕೂಡ ಅವರಿಗೆ ಲಾಭ ತರುವುದಿಲ್ಲ. ಕೆಲವು ಸದಸ್ಯರು ವರ್ತನೆಗಳಿಂದ ಅನೇಕ ಸದಸ್ಯರ ಹಕ್ಕುಗಳು ಮೊಟಕಾಗುತ್ತವೆ ಎಂದರು.
ಜೆಡಿಎಸ್ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡಲು ಸಿದ್ದರಿದ್ದಾರೆ. ಆದರೆ ಹಠಕ್ಕೆ ಬಿದ್ದವರಂತೆ ಕಲಾಪವನ್ನು ಅಡ್ಡಿಗೊಳಿಸುತ್ತಿದ್ದಾರೆ. ಸದಸ್ಯರ ಹಕ್ಕನ್ನುಮೊಟಕುಗೊಳಿಸಲು ಯಾರು ಅಕಾರ ಕೊಟ್ಟವರು ಎಂದು ಪ್ರಶ್ನಿಸಿದರು.
ಈಗಲೂ ನಾನು ವಿರೋಧ ಪಕ್ಷದ ಸದಸ್ಯರಲ್ಲಿ ಮನವಿ ಮಾಡುತ್ತೇನೆ. ನೀವು ನಿಮ್ಮ ನಿಮ್ಮ ಆಸ್ಥಾನಗಳಿಗೆ ಮರಳಿ ಚರ್ಚೆಯಲ್ಲಿ ಭಾಗಿಯಾಗಿ. ನಿಮ್ಮ ಸಮಸ್ಯೆ ಏನೇ ಇದ್ದರೂ ಚರ್ಚೆ ಮಾಡಿ ಸರ್ಕಾರ ಉತ್ತರ ಕೊಡಲು ಸಿದ್ದವಿದೆ. ಆದರೆ ಅನಗತ್ಯವಾಗಿ ಕಲಾಪವನ್ನು ಹಾಳು ಮಾಡಬೇಡಿ. ಪ್ರತಿಭಟನೆ ನಡೆಸಲು ನಿಮಗೆ ಅವಕಾಶವಿದೆ. ಸದನದೊಳಗೆ ಪ್ರತಿಭಟನೆ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

Articles You Might Like

Share This Article