ಬೆಂಗಳೂರು,ಜು.24- ಹಲವು ಏಳುಬೀಳುಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಇದೇ 28ಕ್ಕೆ ಒಂದು ವರ್ಷ ಪೂರೈಸುತ್ತಿದ್ದಾರೆ. ಸರ್ಕಾರದ ಮೇಲೆ ಕೇಳಿಬಂದಿದ್ದ ಹಲವು ಗಂಭೀರ ಸ್ವರೂಪದ ಆರೋಪಗಳ ನಡುವೆಯೂ ಯಾವುದಕ್ಕೂ ಎದೆಗುಂದದೆ ಎಲ್ಲವನ್ನೂ ಎದುರಿಸಿಯೇ ಬೊಮ್ಮಾಯಿ ಅವರು ಒಂದು ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಿದಾಗ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಪ್ರಬಲ ಜಾತಿಯ ಬೆಂಬಲ, ರಾಜಕೀಯ ಚಾಣಾಕ್ಷತನ, ಆರೆಸ್‍ಎಸ್ ಹಿನ್ನಲೆ ಯಾವುದೂ ಕೂಡ ಇರಲಿಲ್ಲ. ಆದರೆ ತಂದೆ ದಿ.ಎಸ್.ಆರ್.ಬೊಮ್ಮಾಯಿ ಅವರು ಹೆಸರು ಹಾಗೂ ಕೈ , ಬಾಯಿ ಶುದ್ದವಾಗಿಟ್ಟುಕೊಂಡಿದ್ದಕ್ಕೆ ಸಿಎಂ ಸ್ಥಾನ ಒಲಿಯಿತು.
ಈಗಲೂ ಕೂಡ ಸರ್ಕಾರದ ಮೇಲೆ ಕೆಲವು ಭ್ರಷ್ಟಾಚಾರ ಆರೋಪಗಳನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಆದರೆ ಅವನ್ನು ಪುಷ್ಟೀಕರಿಸುವಂತಹ ದಾಖಲೆಗಳನ್ನು ಸಾಬೀತುಪಡಿಸಲು ವಿಫಲವಾಗಿರುವುದು ಬೊಮ್ಮಾಯಿ ಅವರ ಕುರ್ಚಿಯನ್ನು ಉಳಿಸಿದೆ.
ಇದೀಗ ಸರ್ಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದೇ 28ರಂದು ಬೆಂಗಳೂರಿಗೆ ಹೊಂದಿಕೊಂಡಿರುವ ದೊಡ್ಡಬಳ್ಳಾಪುರದಲ್ಲಿ ಪಕ್ಷದ ವತಿಯಿಂದ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರಮೋದಿ ಅವರನ್ನು ಆಹ್ವಾನಿಸಬೇಕೆಂಬ ಚಿಂತನೆ ಪಕ್ಷದ ವಲಯದಲ್ಲಿ ಇದೆ. ಆದರೆ ಇದು ಖಚಿತಪಟ್ಟಿಲ್ಲ.
ಬೊಮ್ಮಾಯಿ ಅವರ ಸರ್ಕಾರ ಒಂದು ವರ್ಷದಲ್ಲಿ ಕಂಡಿರುವ ಏಳುಬೀಳುಗಳ ವಿಸ್ತತ ವರದಿ ಇಲ್ಲಿದೆ. ಮುಖ್ಯಮಂತ್ರಿಯಾಗಿ ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ ಮೊದಲ ಸಂಪುಟ ಸಭೆ ನಡೆಸಿ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ನೀಡುವ ವಿದ್ಯಾನಿ ಘೋಷಿಸಿದರು. ಆರಂಭದಲ್ಲೇ ಅನ್ನದಾತರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಘೋಷಣೆಯೊಂದಿಗೆ ರೈತರ ಮನಗೆಲ್ಲುವ ಪ್ರಯತ್ನ ನಡೆಸಿದರು.
ಜತೆಗೆ ವಿವಿಧ ಸಾಮಾಜಿಕ ಪಿಂಚಣಿ ಮೊತ್ತವನ್ನು ಏರಿಕೆ ಮಾಡುವ ಮೂಲಕ ತಮ್ಮ ಆದ್ಯತೆಯನ್ನು ಪ್ರದರ್ಶಿಸಿದರು. ಕೋವಿಡ್ ಆತಂಕದ ನಡುವೆಯೂ ಕಳೆದ ಮೂರು ವರ್ಷಗಳಿಂದ ನಡೆಯದಿದ್ದ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸಿ, ಮಾರ್ಚ್‍ನಲ್ಲಿ ಚೊಚ್ಚಲ ಬಜೆಟ್ ಮಂಡಿಸುವ ಮೂಲಕ ಜನತೆಗೆ ಹಲವು ಯೋಜನೆ, ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ರೈತ ವಿದ್ಯಾನಿ ಯೋಜನೆ ಜಾರಿ ಮಾಡಿದ್ದು, 1,000 ಕೋಟಿ ರೂ. ಹಣವನ್ನು ಮೀಸಲಿರಿಸಿ 19 ಲಕ್ಷ ರೈತ ಮಕ್ಕಳಿಗೆ ಲಾಭವಾಗುವ ಯೋಜನೆ ಪ್ರಕಟ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ, ಬೊಮ್ಮಾಯಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಂಡು ಜಾರಿಗೆ ತಂದಿದೆ.
ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ 1,200 ರೂ.ಗಳಿಗೆ ಹೆಚ್ಚಳ, ವಿಧವಾ ವೇತನ 800 ರೂ. ಗಳಿಗೆ ಏರಿಕೆ, ದಿವ್ಯಾಂಗಿಗಳ ಮಾಸಿಕ ವೇತನ 800 ರೂ. ಗಳಿಗೆ ಹೆಚ್ಚಳ ಮಾಡಿ ಆದೇಶ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತ ಯೋಜನೆಗಳ ಘೋಷಣೆ, ಆಯ್ದ 750 ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು. ಅಮೃತ ಗ್ರಾಮೀಣ ವಸತಿ ಯೋಜನೆಯಡಿ ಆಯ್ದ 750 ಗ್ರಾಮ ಪಂಚಾಯಿತಿಗಳಲ್ಲಿ ವಸತಿ ಮತ್ತು ಆಶ್ರಯರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಗುರಿ, ಅಮೃತ ರೈತ ಉತ್ಪಾದಕ ಸಂಸ್ಥೆಗಳು ಯೋಜನೆಯಡಿ ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೊರೀತ್ಸಾಹ, 750 ಅಮೃತ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ.
ಪ್ರತಿ ಸಂಸ್ಥೆಗೆ 30 ಲಕ್ಷ ರೂ.ನಂತೆ ಮೂರು ವರ್ಷದ ಅವಗೆ 225 ಕೋಟಿ ರೂ. ಅನುದಾನ, ಅಮೃತ ನಿರ್ಮಲ ನಗರ ಯೋಜನೆಯಡಿ ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ರೂಪಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ.ನಂತೆ 75 ಕೋಟಿ ರೂ. ನೆರವು, ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ 75 ಕೋಟಿ ರೂ. ಅನುದಾನ.
ಅಮೃತ ಅಂಗನವಾಡಿ ಕೇಂದ್ರಗಳು ಯೋಜನೆಯಡಿ ಆಯ್ದ 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಪ್ರತಿ ಅಂಗನವಾಡಿಗೆ 1 ಲಕ್ಷ ರೂ.ನಂತೆ 7.5 ಕೋಟಿ ರೂ. ನೆರವು, ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಯೋಜನೆ ಪ್ರಾರಂಭ, ಅಮೃತ ಮಹೋತ್ಸವದ ನಿಮಿತ್ತ ಬೆಂಗಳೂರಿನ 75 ಕೊಳೆಗೇರಿ ಅಭಿವೃದ್ಧಿ, 75 ಕೆರೆ/ ಉದ್ಯಾನಗಳ ಅಭಿವೃದ್ಧಿ.
ನಗರದ ಸುಗಮ ಸಂಚಾರಕ್ಕೆ 12 ಹೈಡೆನ್ಸಿಟಿ ಕಾರಿಡಾರ್ ಅಭಿವೃದ್ಧಿ, ಫ್ಲೈಓವರ್, ರಿಂಗ್ ರಸ್ತೆ ಅಭಿವೃದ್ಧಿಗೆ ಕ್ರಮ, ಅಮೃತ ಸ್ವಸಹಾಯ ಕಿರು ಉದ್ದಿಮೆಗಳು ಯೋಜನೆಯಡಿ ಆಯ್ದ 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ ರೂಪಿಸಲು ತಲಾ 1 ಲಕ್ಷ ರಂತೆ 75 ಕೋಟಿ ರೂ. ಬೀಜ ಧನ ಸೌಲಭ್ಯ, ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಡಿ, ಆಯ್ದ 750 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಾಮುದಾಯಿಕ ಸೇವೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಣೆ,
ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆಯಡಿ ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ತಲಾ 20 ಲಕ್ಷ ರೂ.ಗಳಂತೆ 150 ಕೋಟಿ ರೂ. ವೆಚ್ಚ, ಅಮೃತ ಕೌಶಲ್ಯ ತರಬೇತಿ ಯೋಜನೆಯಡಿ ರಾಜ್ಯದ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಕ ಯುವತಿಯರ ಕೌಶಲ್ಯಾಭಿವೃದ್ಧಿಗೆ 2 ವರ್ಷಗಳ ತರಬೇತಿ ಯೋಜನೆಗೆ 112 ಕೋಟಿ ರೂ. ವೆಚ್ಚ, ಸ್ಟಾರ್ಟಪ್ ಉತ್ತೇಜನ ಯೋಜನೆಯಡಿ 75 ಸ್ಟಾರ್ಟ್ ಅಪ್ ಉದ್ಯಮಗಳಿಗೆ ಉತ್ತೇಜನ ನೀಡಲು ಕ್ರಮ,
ಮುಂದಿನ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಹಾಗೂ ಪದಕ ವಿಜೇತ ಸಾಮಥ್ರ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯವಾದ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಅಮೃತ ಕ್ರೀಡಾ ದತ್ತು ಯೋಜನೆ ಅನುಷ್ಠಾನ, ಸರ್ಕಾರದ ವತಿಯಿಂದ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ ಘೋಷಣೆ, ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಆನ್ ಲೈನ್ ಜೂಜು ಮತ್ತು ಬೆಟ್ಟಿಂಗ್ ಗಳನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲಾಗಿದೆ.
ನಾಗರಿಕರ ಸಮಯದ ಉಳಿತಾಯಕ್ಕೆ ಅನುಕೂಲವಾಗುವಂತೆ ಮತ್ತು ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ನೆರವಾಗಲು ಸರ್ಕಾರದ 56 ನಾಗರಿಕ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಒದಗಿಸಲು ಜನಸೇವಕ ಯೋಜನೆ ಜಾರಿ.
ಬೊಮ್ಮಾಯಿ ಘೋಷಿಸಿದ ಹೊಸ ಯೋಜನೆಗಳು:
ನೇಕಾರರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಯೋಜನೆ.ಹಳದಿ ಬೋರ್ಡ್ ಚಾಲಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾನಿ ಯೋಜನೆ, ಆರೋಗ್ಯ ಸೌಲಭ್ಯಕ್ಕೆ ವಿಶೇಷ ಯೋಜನೆ, ಗೋಶಾಲೆಗಳಲ್ಲಿನ ಗೋವುಗಳನ್ನು ಸಾರ್ವಜನಿಕರು, ಖಾಸಗಿ ಸಂಸ್ಥೆ ದತ್ತು ಪಡೆಯುವುದನ್ನು ಪ್ರೋತ್ಸಾಹಿಸಲು ಪುಣ್ಯಕೋಟಿ ದತ್ತು ಯೋಜನೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಎಂಬ ಹೊಸ ಯೋಜನೆ, ರಾಜ್ಯದಿಂದ ಕಾಶಿ ಯಾತ್ರೆಗೆ ತೆರಳುವವರಿಗೆ ರಾಜ್ಯ ಸರ್ಕಾರ ತಲಾ 5 ಸಾವಿರ ರೂಪಾಯಿ ಸಹಾಯಧನ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಒಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ ವರ್ಷ ಪೂರ್ಣಗೊಳಿಸುತ್ತಿದ್ದು, ಹತ್ತು ಹಲವು ಸಾಧನೆಗಳು, ಸವಾಲುಗಳ ನಡುವೆ ಮುನ್ನಡೆಯುತ್ತಿದೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಬಹುದೊಡ್ಡ ಸವಾಲಿನೊಂದಿಗೆ ಬೊಮ್ಮಾಯಿ ಸರ್ಕಾರ ಭವಿಷ್ಯದಲ್ಲಿ ಮತ್ತಷ್ಟು ಯೋಜನೆಗಳ ಕೊಡುಗೆ ಕೊಡುವ ನಿರೀಕ್ಷೆ ಇದೆ.