ರಾಜ್ಯಾದ್ಯಂತ ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳು, ಪ್ರವೀಣ್‍ಸೂದ್ ಜೊತೆ ಸಿಎಂ ಮಾತುಕತೆ

Social Share

ಬೆಂಗಳೂರು,ಜು.30- ರಾಜ್ಯದಲ್ಲಿ ಸರ್ಕಾರದ ವಿರುದ್ಧ ಬಿಜೆಪಿಯ ಹಿಂದೂಪರ ಸಂಘಟನೆಗಳು ತಿರುಗಿಬಿದ್ದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್ ಜೊತೆ ಮಾತುಕತೆ ನಡೆಸಿದರು.

ಆರ್‍ಟಿನಗರ ನಿವಾಸಕ್ಕೆ ಪ್ರವೀಣ್ ಸೂದ್ ಅವರನ್ನು ಕರೆಸಿಕೊಂಡ ಬೊಮ್ಮಾಯಿ ಅವರು ಕಾನೂನು ಸುವ್ಯವಸ್ಥೆ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ದಾಂಧಲೆ ಎಬ್ಬಿಸಿದ್ದು ಪ್ರತಿಭಟನೆ ಕಾವು ರಾಜ್ಯಾದ್ಯಂತ ಹಬ್ಬಬಹುದೆಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ.

ವಿಶೇಷವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಬಿಜೆಪಿ ಪ್ರಾಬಲ್ಯವಿರುವ ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಜಿಲ್ಲೆಗಳಲ್ಲಿ ಬಿಗಿ ಭದ್ರತೆ ತೆಗೆದುಕೊಳ್ಳಬೇಕೆಂದು ಪ್ರವೀಣ್ ಸೂದ್‍ಗೆ ಸಿಎಂ ನಿರ್ದೇಶನ ನೀಡಿದ್ದಾರೆ.

ಅಗತ್ಯಬಿದ್ದರೆ ಕೇಂದ್ರದಿಂದ ಪ್ಯಾರಾ ಮಿಲಿಟರಿಯನ್ನು ಬಳಸಿಕೊಳ್ಳಬಹುದು. ನಾನು ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಬಳಿಯೂ ಮಾತುಕತೆ ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಪರಿಸ್ಥಿತಿ ಕೈ ಮೀರದಂತೆ ಕಟ್ಟೆಚ್ಚರ ವಹಿಸಬೇಕು.

ಒಂದು ವೇಳೆ ಭದ್ರತಾ ಲೋಪ ಕಂಡುಬಂದರೆ ಪೊಲೀಸರ ಮೇಲೆ ಶಿಸ್ತು ಕ್ರಮ ಜರುಗಿಸಲು ಹಿಂದುಮುಂದೆ ನೋಡುವುದಿಲ್ಲ ಎಂದು ಸಿಎಂ ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಎನ್ನಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‍ಕುಮಾರ್ ಸೇರಿದಂತೆ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದಾರೆ. ಗುಪ್ತಚರ ವಿಭಾಗವನ್ನು ಬಲಪಡಿಸಲಾಗಿದೆ.

ವಿಶೇಷವಾಗಿ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಕೇರಳ ಗಡಿಭಾಗದಲ್ಲಿರುವ ಮಂಗಳೂರು,ಕಾಸರಗೋಡು, ಸೇರಿದಂತೆ ಮತ್ತಿತರ ಕಡೆ ಚೆಕ್‍ ಪೋಸ್ಟ್ ಗಳನ್ನು ಹೆಚ್ಚಳ ಮಾಡಲಾಗಿದೆ. ಹೊರ ರಾಜ್ಯಗಳಿಂದ ಬರುತ್ತಿರುವ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಅಲ್ಲದೆ ಕೆಲವು ಸಂಘಟನೆಗಳ ಮುಖಂಡರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಕಾನೂನು ಸುವ್ಯವಸ್ಥೆಯಲ್ಲಿ ಭದ್ರತಾ ಲೋಪವಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಪ್ರವೀಣ್‍ಸೂದ್ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ.

Articles You Might Like

Share This Article