ಬೆಂಗಳೂರು, ಜ.22- ಜೀವನಾವಶ್ಯಕವಾದ ಹಾಲು, ನೀರು ಹಾಗೂ ವಿದ್ಯುತ್ ದರವನ್ನು ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಯಾವುದೇ ಕಾರಣಕ್ಕೂ ಅವಸರದ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನತೆಗೆ ಶುಭ ಸುದ್ದಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಹಾಲಿ ದರವನ್ನು ಪ್ರತಿ ಲೀಟರ್‍ಗೆ 3ರೂ., ವಿದ್ಯುತ್ ದರವನ್ನು ಯೂನಿಟ್‍ಗೆ 2 ರೂ. ಹಾಗೂ ನೀರಿನ ದರವನ್ನು ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ತೆರೆ ಎಳೆದಿರುವ ಸಿಎಂ, ದರ ಏರಿಕೆಗಳ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲಾ ಸರ್ಕಾರಗಳು ಅಕಾರದಲ್ಲಿದ್ದಾಗ ಇಂತಹ ಪ್ರಸ್ತಾವನೆ ಬರುವುದು ಸರ್ವೆ ಸಾಮಾನ್ಯ. ಹಾಲು, ನೀರು ಮತ್ತು ವಿದ್ಯುತ್ ದರ ಹೆಚ್ಚಳ ಮಾಡಲು ನನಗೆ ಪ್ರಸ್ತಾವನೆ ಸಲ್ಲಿಸಿರುವುದು ನಿಜ. ನಾವು ಎಲ್ಲಾ ಆಯಾಮಗಳಲ್ಲೂ ಚರ್ಚೆ ಮಾಡುತ್ತೇವೆ. ನಂತರವೇ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರದ ಮಟ್ಟದಲ್ಲಿ ಯಾವುದೂ ಕೂಡ ಈವರೆಗೂ ಚರ್ಚೆಯಾಗಿಲ್ಲ. ಇವೆಲ್ಲವೂ ಊಹಾಪೋಹಗಳು. ಅಂತಿಮವಾಗಿ ಸರ್ಕಾರ ಜನರ ಅಭಿಪ್ರಾಯದಂತೆಯೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಮುಂದೆ ನೋಡೋಣ ಎಂದು ಸೂಚ್ಯವಾಗಿ ಹೇಳಿದರು.
ನಾವು ಯಾವುದೇ ಒತ್ತಡಕ್ಕೆ ಮಣಿಯದೆ ವಾರಾಂತ್ಯದ ಲಾಕ್‍ಡೌನ್‍ನನ್ನು ತೆರವುಗೊಳಿಸಿದ್ದೇವೆ. ಕೂಲಿಕಾರ್ಮಿಕರು, ಗಾರ್ಮೆಂಟ್ಸ್ ನೌಕರರು, ಆಟೋರಿಕ್ಷಾ, ಓಲಾ, ಊಬರ್, ಸರಕು ಸಾಗಾಣಿಕೆ, ಬೀದಿ ಬದಿ ವ್ಯಾಪರಿಗಳು, ಗುಡಿ ಕೈಗಾರಿಕೆಗಳು ಸೇರಿದಂತೆ ಯಾರೊಬ್ಬರಿಗೂ ಹೊರೆಯಾಗಬಾರದೆಂಬ ಕಾರಣಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಸಮರ್ಥಿಸಿಕೊಂಡರು.
ನಮಗೆ ಲಾಕ್‍ಡೌನ್ ತೆರವುಗೊಳಿಸುವಂತೆ ಯಾವುದೇ ಒತ್ತಡವಿರಲಿಲ್ಲ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ತಜ್ಞರು, ವೈದ್ಯರು, ಸಚಿವರು ಸೇರಿದಂತೆ ಈ ವಲಯದಲ್ಲಿ ಅನುಭವ ಇರುವವರ ಅಭಿಪ್ರಾಯ ಪಡೆದೇ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಸರ್ಕಾರ ಒತ್ತಡಕ್ಕೆ ಮಣಿಯುವುದಿಲ್ಲ ಎಂದರು.
ಜೀವನವೂ ನಡೆಯಬೇಕು ಜೀವವೂ ಇರಬೇಕು. ಕೋವಿಡ್ ಸದ್ಯಕ್ಕೆ ಯಾರನ್ನೂ ಕೂಡ ಬಿಟ್ಟಿಲ್ಲ. ನಾವು ಎಚ್ಚರಿಕೆಯಿಂದ ಇದ್ದು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಅನಗತ್ಯವಾಗಿ ತಿರುಗಾಟ ನಡೆಸುವುದು, ಮಾಸ್ಕ್ ಹಾಕದೇ ಇರುವುದು. ದೈಹಿಕ ಅಂತರ ಕಾಪಾಡದೇ ಇರುವುದು ಬೇಡ. ನೀವು ಬದುಕಿ ಬೇರೆಯವರನ್ನೂ ಬದುಕಿಸಿ ಎಂದು ಸಿಎಂ ಮನವಿ ಮಾಡಿದರು.
ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಅದು ಸಾರ್ವಜನಿಕರ ಹಿತದೃಷ್ಟಿಗೆ ಒಳಪಟ್ಟಿರುತ್ತದೆ. ಒಂದು ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಕಹಿ ಅನುಭವಗಳಾಗಿವೆ. ಮೂರನೆ ಅಲೆಯಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆ ಇದೆ. ಐಸಿಯು, ಆಕ್ಸಿಜನ್ ಸಮಸ್ಯೆ ಇಲ್ಲ. ಕೋವಿಡ್ ಲಸಿಕೆ ಪಡೆದುಕೊಂಡಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕೊರೊನಾ ಪಾಸಿಟಿವ್ ಬಂದಿರುವ ಸುದ್ದಿ ನನ್ನ ಗಮನಕ್ಕೆ ಬಂದಿದೆ. ಪ್ರಸ್ತುತ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಅಷ್ಟೊಂದು ತೀವ್ರತೆ ಬೀರಿಲ್ಲ ಎಂಬ ನಂಬಿಕೆ ನನಗಿದೆ. ಅವರ ಕುಟುಂಬದವರು ಹಾಗೂ ವೈದ್ಯರ ಜತೆಯೂ ಮಾತನಾಡುತ್ತೇನೆ ಎಂದರು.
ಇಂದು ಅಂತರ್ ರಾಜ್ಯ ಜಲವಿವಾದಕ್ಕೆ ಸಂಬಂಸಿದಂತೆ ಹಿರಿಯ ವಕೀಲರು, ನೀರಾವರಿ ತಜ್ಞರ ಜತೆ ವಚ್ರ್ಯುವಲ್ ಮೂಲಕ ಸಭೆ ನಡೆಸಲಾಗುವುದು. ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ದೆಹಲಿಯಲ್ಲೇ ಎರಡು ಬಾರಿ ವಕೀಲರ ಜತೆ ಸಭೆ ನಡೆಸಿದ್ದೆ. ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಮದ ವಚ್ರ್ಯುವಲ್ ಮೂಲಕ ಸಭೆ ನಡೆಸಲಾಗುವುದು ಎಂದರು.
ಕಾವೇರಿ, ಕೃಷ್ಣ, ಮಹದಾಯಿ ಜಲ ವಿವಾದಕ್ಕೆ ಸಂಬಂಸಿದಂತೆ ವಕೀಲರ ಜತೆ ಕಾನೂನು ಹೋರಾಟಗಳ ಬಗ್ಗೆ ಮಾಹಿತಿ ಪಡೆಯಲಿದ್ದೇನೆ. ಕೃಷ್ಣ ಐತೀರ್ಪಿನ 1ನೇ ಮತ್ತು ಬಚಾವತ್ ತೀರ್ಪಿನಂತೆ ಕರ್ನಾಟಕಕ್ಕೆ ನಿಗದಿಯಾಗಿದ್ದ ನೀರಿನ ಬಳಕೆ ಮಾಡಿಕೊಳ್ಳಬೇಕು. ಆದರೆ, ನೆರೆಯ ರಾಜ್ಯಗಳು ಇದನ್ನು ಸಹ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿವೆ ಎಂದು ಹೇಳಿದರು.
ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಸಿದಂತೆ ನ್ಯಾಯೀಕರಣ ತೀರ್ಪು ನೀಡಿದ ಬಳಿಕ ಅಸೂಚನೆ ಹೊರಡಿಸಲಾಗಿತ್ತು. ಆದರೆ, ಇದನ್ನೂ ಸಹ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಲಾಗಿದೆ. ಇದೇ ರೀತಿ ಮೇಕೆದಾಟು ಯೋಜನೆಗೂ ಸಹ ತಮಿಳುನಾಡು ತಗಾದೆ ತೆಗೆದಿದೆ. ಈ ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
