ಕರ್ಫ್ಯೂ ಬೇಕಾ..ಬೇಡ್ವಾ..? ನಾಳೆ ಏನಾಗುತ್ತೆ..? ಅಡಕತ್ತರಿಯಲ್ಲಿ ಸಿಎಂ ಬೊಮ್ಮಾಯಿ

Social Share

ಬೆಂಗಳೂರು, ಜ.20- ಒಂದು ಕಡೆ ಹೆಚ್ಚುತ್ತಿರುವ ಕೋವಿಡ್ ಸೋಂಕು… ಮತ್ತೊಂದು ಕಡೆ ನಿರ್ಬಂಧಗಳಿಗೆ ಉದ್ಯಮ ವಲಯದಿಂದ ವಿರೋಧ… ಇನ್ನೊಂದೆಡೆ ಸ್ವಪಕ್ಷೀಯರಿಂದಲೇ ವಿರೋಧ- ಇದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸದ್ಯದ ಪರಿಸ್ಥಿತಿ..! ಹೀಗಾಗಿ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೆ ಅಕ್ಷರಶಃ ಅವರು ಅಡಕತ್ತರಿಗೆ ಸಿಲುಕಿದ್ದಾರೆ.
ಇವುಗಳ ಮಧ್ಯೆ ವೀಕೆಂಡ್ ಕಫ್ರ್ಯೂ ಸೇರಿದಂತೆ ಕೋವಿಡ್ ನಿರ್ಬಂಧಗಳನ್ನು ಹೇರಲು ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ. ಏಕೆಂದರೆ ವಾರಾಂತ್ಯ ಕರ್ಫ್ಯೂಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುತ್ತದೆ. ಬಿಜೆಪಿ ನಾಯಕರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರು ವಾರಾಂತ್ಯ ಕರ್ಫ್ಯೂ ಮಾಡಿದರೆ ಜನರಿಗೆ ಕಷ್ಟವಾಗುತ್ತದೆ. ವಾರಾಂತ್ಯ ಕಫ್ರ್ಯೂ ಮುಂದುವರಿಸಬಾರದು, ಉದ್ಯಮ ವಲಯಕ್ಕೆ ತೊಂದರೆಯಾಗುತ್ತದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಇದಕ್ಕೆ ದನಿಗೂಡಿಸಿರುವ ಮತ್ತಷ್ಟು ಮುಖಂಡರು ಸದ್ಯದ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಬೇಡವೇ ಬೇಡ ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಜನರಿಗೆ ತೊಂದರೆಯಾಗದಂತಹ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಜೀವನದ ಜೊತೆಗೆ ಜೀವವು ಮುಖ್ಯ. ಹಾಗಂತ ಲಾಕ್‍ಡೌನ್ ಸಮುದಾಯಕ್ಕೆ ಹರಡಲು ಸರ್ಕಾರ ಅವಕಾಶ ಕೊಡುವುದಿಲ್ಲ. ಜನರಿಗೆ ತೊಂದರೆಯಾಗದಂತಹ ನಿರ್ಧಾರ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಶಿಫಾರಸುಗಳನ್ನು ಪರಾಮರ್ಶೆಗೊಳಪಡಿಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ. ಆದರೆ, ಲಾಕ್‍ಡೌನ್ ಮತ್ತು ನೈಟ್‍ ಕರ್ಫ್ಯೂಗೆ ವಿನಾಯ್ತಿ ಕೊಡುತ್ತೀರ ಎಂಬ ಮಾಧ್ಯಮದವರ ಪ್ರಶ್ನೆಗೆ ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ. ಅಂತಿಮವಾಗಿ ಮತ್ತೊಂದು ಬಾರಿ ಅವರು ಚೆಂಡನ್ನು ತಜ್ಞರ ಮೇಲೆಯೇ ಎಸೆದಿದ್ದಾರೆ.
ಸಿಎಂ ಅವರ ಮಾತಿಗೆ ದನಿಗೂಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ಅವರು, ಜೀವ ರಕ್ಷಣೆಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ. ಜೀವ ಉಳಿಸುವುದರ ಜೊತೆಗೆ ಜೀವನವೂ ನಡೆಯಬೇಕು. ಅದರಾಚೆಗೆ ಕೋವಿಡ್ ಕೂಡ ಕಟ್ಟಿ ಹಾಕಬೇಕು ಎಂದು ಹೇಳಿದ್ದಾರೆ.
ಸರ್ಕಾರ ಜನರನ್ನು ಸಂಕಷ್ಟಕ್ಕೆ ದೂಡುವುದಿಲ್ಲ. ನಮಗೆ ಜನಸಾಮಾನ್ಯರ ಕಷ್ಟಗಳು ಗೊತ್ತಿವೆ. ನಾಳೆ ನಡೆಯುವ ಸಭೆಯಲ್ಲಿ ನಾವು ಜನಪರವಾದ ತೀರ್ಮಾನವನ್ನೇ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇನ್ನು ಸರ್ಕಾರದ ತೀರ್ಮಾನಕ್ಕೆ ಸಚಿವ ಅಶ್ವಥ್ ನಾರಾಯಣ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ನಾವು ವಾರಾಂತ್ಯದ ಲಾಕ್‍ಡೌನ್ ಇಲ್ಲವೇ ನೈಟ್ ಕರ್ಫ್ಯೂ ವಿಸುವುದರಿಂದ ಯಾವುದು ಪ್ರಯೋಜನವಾಗುತ್ತಿಲ್ಲ. ಲಾಕ್‍ಡೌನ್ ನಾಳೆಯೇ ನಿಂತು ಬಿಡುತ್ತದೆ ಎಂದು ವಿಶ್ವದ ಯಾವ ತಜ್ಞರೀ ಕೂಡ ಹೇಳಿಲ್ಲ. ಈಗಾಗಲೇ 1 ಮತ್ತು 2ನೆ ಅಲೆಯಲ್ಲಿ ಜನರು ಸಾಕಷ್ಟು ಕಷ್ಟ, ನೋವುಗಳನ್ನು ಅನುಭವಿಸಿದ್ದಾರೆ. ಪದೇ ಪದೇ ಅವರಿಗೆ ಹೊರೆ ಹೊರೆಸುವುದು ಸರಿಯಲ್ಲ ಎಂದು ಸರ್ಕಾರದ ಕ್ರಮವನ್ನೇ ಪ್ರಶ್ನಿಸಿದ್ದಾರೆ.
ಮುಂದುವರೆದ ರಾಷ್ಟ್ರಗಳಲ್ಲೇ ಲಾಕ್‍ಡೌನ್‍ಗೆ ಮೀನಾಮೇಷ ಎಣಿಸುತ್ತಿದ್ದಾರೆ. ನಮ್ಮಲ್ಲಿ ಮುಂದುವರೆದ ತಂತ್ರಜ್ಞಾನವಿದೆ. ಔಷಧೋಪಚಾರಗಳು, ವೈದ್ಯಕೀಯ ಉಪಕರಣಗಳಿವೆ. ಜನರನ್ನು ಕಷ್ಟಕ್ಕೆ ನೂಕುವುದು ಬೇಡ ಎಂಬ ಮನವಿಯನ್ನು ಮಾಡಿದ್ದಾರೆ. ಮೈಸೂರು, ಕೊಡುಗು ಸಂಸದ ಪ್ರತಾಪ್ ಸಿಂಹ ನೇರವಾಗಿಯೇ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೋವಿಡ್ ಸೋಂಕು ಬಂದರೂ ಜನರೇ ಆಸ್ಪತ್ರೆಗೆ ದಾಖಲಾಗುತ್ತಿಲ್ಲ. ಪ್ರತಿಯೊಬ್ಬರೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
1 ಮತ್ತು 2ನೇ ಅಲೆಯಲ್ಲಿ ಸಾಕಷ್ಟು ಕಹಿ ಅನುಭವಗಳು ಆಗಿರುವುದರಿಂದ ಯಾರೊಬ್ಬರೂ ಮನೆಯಿಂದ ಆಚೆ ಬರುತ್ತಿಲ್ಲ. ವಾಸ್ತವ ಹೀಗಿರುವಾಗ ಸರ್ಕಾರದ ಲಾಕ್‍ಡೌನ್, ಇಲ್ಲವೇ ನೈಟ್ ಕರ್ಫ್ಯೂಗೆ ಅರ್ಥವಿದೆಯೇ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೆಚ್ಚುತ್ತಿರುವ ಸೋಂಕು ತಡೆಗಟ್ಟಲು ವಾರಾಂತ್ಯ ಮತ್ತು ನ್ಯೆಟ್‍ಕರ್ಫ್ಯೂ ವಿಸುವುದು ಅನಿವಾರ್ಯ ಎನ್ನುತ್ತಿದ್ದಾರೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು.
ಆದರೆ, ಸರ್ಕಾರದ ನಿರ್ಧಾರಕ್ಕೆ ಉದ್ಯಮ ವಲಯ ಈ ಬಾರಿ ಸಿಡಿದೆದ್ದು ನಿಂತಿದೆ. ಯಾವುದೇ ಕಾರಣಕ್ಕೂ ನಾವು ವಾರಾಂತ್ಯದ ಲಾಕ್‍ಡೌನ್ ಮತ್ತು ನೈಟ್ ಕರ್ಫ್ಯೂ ಪಾಲನೆ ಮಾಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ.
ಇನ್ನು ಉದ್ಯಮ ವಲಯವಂತೂ ಈ ಬಾರಿ ಸರ್ಕಾರದ ವಿರುದ್ಧ ಸಮರವನ್ನೇ ಸಾರಿದೆ. ಹೋಟೆಲ್ ಮಾಲೀಕರ ಸಂಘ, ಬಾರ್-ರೆಸ್ಟೋರೆಂಟ್ ಮಾಲೀಕರ ಸಂಘ, ಬೀದಿಬದಿ ವ್ಯಾಪಾರಿಗಳು, ವರ್ತಕರು, ಉದ್ಯಮಿಗಳು ಸೇರಿದಂತೆ ಅನೇಕರು ನಮ್ಮನ್ನು ಜೈಲಿಗೆ ಹಾಕಿದರೂ ಸರಿಯೇ ಮಾರ್ಗಸೂಚಿ ಮಾತ್ರ ಪಾಲನೆ ಮಾಡುವುದಿಲ್ಲ ಎಂದು ಸವಾಲು ಎಸೆದಿದ್ದಾರೆ.
ಒಂದು ಕಡೆ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸರ್ಕಾರ ಬಿಗಿಯಾದ ನಿಲುವು ತೆಗೆದುಕೊಳ್ಳಲು ಮುಂದಾದರೆ ಸಾರ್ವಜನಿಕರು ಮತ್ತು ಉದ್ಯಮ ವಲಯದ ವಿರೋಧ ಕಟ್ಟಿಕೊಳ್ಳಬೇಕು. ಸ್ವಲ್ಪ ಸಡಿಲಿಕೆ ಕೊಟ್ಟು ನಾಳೆ ಹೆಚ್ಚುಕಮ್ಮಿಯಾದರೂ ಅದನ್ನು ಕೂಡ ಸರ್ಕಾರವೇ ಹೊರಬೇಕು.
# ತಜ್ಞರ ಮಧ್ಯೆ ಭಿನ್ನಮತ:
ವೀಕೆಂಡ್ ಕಫ್ರ್ಯೂ ಸೇರಿದಂತೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತರಬೇಕಾದ ನಿರ್ಬಂಧ ಕ್ರಮಗಳ ಬಗ್ಗೆ ನಿರ್ಧಾರ ಮಾಡಿ ಎಂದು ಸಿಎಂ ತಜ್ಞರ ಮೇಲೆ ಜವಾಬ್ದಾರಿ ಹೊರಿಸಿದ್ದರು. ಇದೀಗ ತಜ್ಞರ ಮಧ್ಯೆ ಭಿನ್ನಮತ ಇದ್ದು, ಕೆಲವು ತಜ್ಞರು ವೀಕೆಂಡ್ ಕರ್ಫ್ಯೂ ಮುಂದುವರಿಸಬೇಕು, ಕೊರೊನಾ ಹೆಚ್ಚಾಗುತ್ತಿದೆ. ತಿಂಗಳಾಂತ್ಯ, ಫೆಬ್ರವರಿಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವು ತಜ್ಞರು ಕೊರೊನಾ ಮೂರನೇ ಅಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವವರ, ಐಸಿಯುಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ವೀಕೆಂಡ್ ಕರ್ಫ್ಯೂ ಹೇರುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ನಾಳೆ ಬೆಳಗ್ಗೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಅಲ್ಲಿ ಏನು ನಿರ್ಧಾರ ಮಾಡಿ ಪ್ರಕಟಣೆ ಹೊರಡಿಸುತ್ತಾರೆ ಎಂಬುದು ಕುತೂಹಲವಾಗಿದೆ.
ಹೀಗೆ ಎಲ್ಲ ಕಡೆಯಿಂದಲೂ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದರಿಂದ ಸರ್ಕಾರಕ್ಕೆ ಉಗುಳಲು ಆಗದ, ನುಂಗಲು ಆಗದ ಬಿಸಿ ತುಪ್ಪವಾಗಿ ಕೋವಿಡ್ ಮಹಾಮಾರಿ ಕಾಡುತ್ತಿದೆ.

Articles You Might Like

Share This Article