ಶುಕ್ರವಾರದ ಸೀಕ್ರೆಟ್ ಬಿಟ್ಟುಕೊಡದ ಸಿಎಂ, ಜನಪರ ತೀರ್ಮಾನದ ಸೂಚನೆ

Social Share

ಬೆಂಗಳೂರು,ಜ.19- ಶುಕ್ರವಾರ ನಡೆಯಲಿರುವ ಸಭೆಯಲ್ಲಿ ತಜ್ಞರು ನೀಡಿರುವ ಶಿಫಾರಸ್ಸುಗಳ ಬಗ್ಗೆ ಪರಾಮರ್ಶೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ.
ಈ ಎಲ್ಲ ಸಾಧಕಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ಜನಪರವಾದ ತೀರ್ಮಾನವನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.ಬೇರೆ ಬೇರೆ ರಾಜ್ಯಗಳಲ್ಲಿ ಬರುತ್ತಿರುವ ಕೋವಿಡ್ ಸ್ಥಿತಿಗತಿ ಕುರಿತು ಸರ್ಕಾರಕ್ಕೆ ತಜ್ಞರು ತಮ್ಮದೇ ಆದ ಸಲಹೆಗಳನ್ನು ನೀಡಿದ್ದಾರೆ.
ಇವುಗಳನ್ನು ಪರಾಮರ್ಶೆ ಮಾಡಲಾಗುವುದು. ಶುಕ್ರವಾರದಂದು ಬರಲಿರುವ ಕೋವಿಡ್ ಸೋಂಕು ಪ್ರಕರಣಗಳು ಹಾಗೂ ಪಾಸಿವಿಟಿ ದರ ನೋಡಿಕೊಂಡು ಸರ್ಕಾರ ಅಂತಿಮವಾದ ನಿರ್ಧಾರ ತೆಗೆದುಕೊಳ್ಳಲಿದೆ. ಅಲ್ಲಿಯವರೆಗೂ ಕಾದುನೋಡಿ ಎಂದರು.
ಜನರಿಗೆ ತೊಂದರೆ ಕೊಟ್ಟು ನಾವು ಲಾಕ್‍ಡೌನ್ ಇಲ್ಲವೇ ಕಫ್ರ್ಯೂ ವಿಸುತ್ತಿಲ್ಲ. ಸೋಂಕು ಒಬ್ಬರಿಂದ ಒಬ್ಬರಿಗೆ ಬೇಗನೆ ಹಬ್ಬುತ್ತಿರುವುದರಿಂದ ಕಡಿವಾಣ ಹಾಕಲು ಅಗತ್ಯ ಇರುವುದರಿಂದ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಸರ್ಕಾರದ ಕಳೆದ ಎರಡು ವಾರಗಳಿಂದ ವಾರಾಂತ್ಯದ ಲಾಕ್‍ಡೌನ್ ಮತ್ತು ರಾತ್ರಿ ಕಫ್ರ್ಯೂಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಮುಕ್ತವಾದ ಸ್ವಾತಂತ್ರ್ಯವಿದೆ. ಸರ್ಕಾರ ಒಬ್ಬರಿಗೆ ತೊಂದರೆ ಕೊಟ್ಟು ನಿಯಮಗಳನ್ನು ರೂಪಿಸುವುದಿಲ್ಲ. ಜನರ ಪ್ರಾಣ ರಕ್ಷಣೆಗಾಗಿ ಈ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಒಂದೆಡೆ ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ವೀಕೆಂಡ್ ಕಫ್ರ್ಯೂ, ನೈಟ್ ಕಫ್ರ್ಯೂ ಮುಂದುವರಿಸಬೇಕಾ ಅಥವಾ ರದ್ದುಪಡಿಸಬೇಕಾ ಎಂಬ ಗೊಂದಲದಲ್ಲಿ ಸರ್ಕಾರವಿದೆ.
ಹೀಗಿರುವಾಗ ಇನ್ನೆರಡು ದಿನಗಳಲ್ಲಿ ತಜ್ಞರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ, ನಮ್ಮ ರಾಜ್ಯದ ಜಿಲ್ಲೆಗಳಲ್ಲಿನ ಸ್ಥಿತಿಗತಿ ನೋಡಿಕೊಂಡು ವರದಿ ತಯಾರಿಸುತ್ತಿದ್ದಾರೆ. ಅವರು ಶುಕ್ರವಾರ ವರದಿ ನೀಡಲಿದ್ದು ಅದರ ಆಧಾರದ ಮೇಲೆ ಚರ್ಚೆ ಮಾಡಿ ಅಂದೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಎಲ್ಲರಿಗೂ ಅನ್ವಯ: ರಾಜ್ಯದಲ್ಲಿ ಸರ್ಕಾರ ಜಾರಿ ಮಾಡಿರುವ ಕೋವಿಡ್ ಮಾರ್ಗಸೂಚಿಗಳು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಜನಸಾಮಾನ್ಯರಿಗೊಂದು, ರಾಜಕಾರಣಿಗಳಿಗೊಂದು ಇಲ್ಲವೇ ಬೇರೊಬ್ಬರಿಗೆ ಪ್ರತ್ಯೇಕ ನಿಯಮಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ಪಕ್ಷದವರೇ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವುದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್‍ನವರು ದೂರು ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಈ ತಾಪತ್ರಯ ಬೇಡ ಎಂದು ನಾನೇ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ.
ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮಾರ್ಗಸೂಚಿಗಳನ್ನು ಯಾರ್ಯಾರು ಉಲಂಘನೆ ಮಾಡಿದ್ದಾರೋ ಅವರ ಮೇಲೆ ಕಾನೂನಿನ ಪ್ರಕಾರ ದೂರು ದಾಖಲಿಸಲು ನಾನೇ ಸೂಚಿಸಿದ್ದೇನೆ. ಕಾಂಗ್ರೆಸ್‍ನವರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಪ್ರತಿಯೊಬ್ಬರು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲನೆ ಮಾಡಲೇಬೇಕು. ತಪ್ಪಿತಸ್ಥರು ಯಾರೇ ಇದ್ದರೂ ಅವರ ಮೇಲೆ ಕಾನೂನು ಪ್ರಕಾರವೇ ಶಿಕ್ಷೆಯಾಗಲಿದೆ. ಯಾರನ್ನೂ ಕೂಡ ರಕ್ಷಣೆ ಮಾಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಕೋವಿಡ್ ನೆಗೆಟಿವ್ ವರದಿ ಬಂದಿದೆ. 10-12 ದಿನಗಳ ಕಾಲ ಕ್ವಾರಂಟೈನ್‍ನಲ್ಲಿದ್ದು ಇದೀಗ ಸಂಪೂರ್ಣ ಗುಣಮುಖನಾಗಿರುವುದರಿಂದ ದೈನಂದಿನ ಕೆಲಸ ಕಾರ್ಯಗಳನ್ನು ಕಚೇರಿಯಿಂದಲೇ ಮುಂದುವರಿಸುತ್ತೇನೆ ಎಂದು ಇಎಂ ಹೇಳಿದರು.
ನಿನ್ನೆ ಜಿಲ್ಲಾಕಾರಿಗಳ ಸಭೆಯನ್ನು ವರ್ಚುವಲ್ ಮಾಡಲಾಗಿದ್ದು, ಯಾವ ಜಿಲ್ಲೆಗಳಲ್ಲಿ ಕೋವಿಡ್ ಲಸಿಕೆಯ ಕೊರತೆಯಿದೆಯೋ ಅಲ್ಲಿ ಲಸಿಕೆ ಪ್ರಮಾಣ ಹೆಚ್ಚು ಮಾಡಬೇಕೆಂದು ವಿಶೇಷವಾಗಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದು, ಕೋವಿಡ್ ವಾರಿಯರ್ಸ್ ಗೆ ಇನ್ನಷ್ಟು ತೀವ್ರಗತಿಯಲ್ಲಿ ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.

Articles You Might Like

Share This Article