ಹುಬ್ಬಳ್ಳಿ, ಮಾ.6- ಪ್ರಸಕ್ತ ಬಜೆಟ್ನಲ್ಲಿ ನೀಡಲಾದ ಯೋಜನೆಗಳನ್ನು ನಿಗದಿತ ಅವಧಿಯಲ್ಲಿಯೇ ಪೂರ್ಣಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ನಗರದ ಗೋಕಲ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರವು ಬದ್ಧವಾಗಿದೆ ಎಂದು ಅವರು ನುಡಿದರು. ಧಾರವಾಡ-ಬೆಳಗಾವಿ ರೈಲ್ವೆ ಕಾಮಗಾರಿಯನ್ನು ಆದಷ್ಟು ಬೇಗನೆ ಆರಂಭಿಸಲಾಗುತ್ತದೆ, ಜಯದೇವ ಹೃದ್ರೋಗ ಸಂಸ್ಥೆಯನ್ನು ಹುಬ್ಬಳ್ಳಿಗೆ ತಂದಿದ್ದೇವೆ. ಇದು ಈ ಭಾಗದ ಜನರಿಗೆ ಉತ್ತಮ ಸೌಲಭ್ಯ ನೀಡಲಿದೆ. ಯುವಕರಿಗೆ ಉದ್ಯೋಗಾವಕಾಶ ನೀಡಿಕೆಗಾಗಿ ಎಫ್ ಎಮ್ಸಿ ಕ್ಲಸ್ಟರ್ ಕೂಡ ಬೇಗನೇ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ಅಪರಾಧ ಶೋಧನೆಯಲ್ಲಿ ಎಫ್ಎಸ್ಎಲ್ ಮಹತ್ವದ ಪಾತ್ರವಹಿಸುತ್ತದೆ. ನ್ಯಾಯಾಲಯಗಳಲ್ಲಿ ಮಾನ್ಯತೆ ಬೇಕಾದರೆ ಎಫ್ಎಸ್ಎಲ್ ವರದಿ ಬೇಕೆ ಬೇಕು. ಇದುವರೆಗೆ ಈ ಕೇಂದ್ರ ಬೆಂಗಳೂರಿನಲ್ಲಿ ಮಾತ್ರ ಇತ್ತು, ವರದಿ ಬರಲು ತಿಂಗಳುಗಟ್ಟಲೆ ಕಾಯುವುದು ಅನಿವಾರ್ಯವಾಗಿತ್ತು ಹೀಗಾಗಿ ಹುಬ್ಬಳ್ಳಿಯಲ್ಲಿ ಆರಂಭಿಸಲಾಗಿರುವ ಪ್ರಾದೇಶಿಕ ಎಫ್ಎಸ್ಎಲ್ ಕೇಂದ್ರಹೆಚ್ಚು ಅನುಕೂಲಕರವಾಗಲಿದೆ ಎಂದು ಅವರು ಹೇಳಿದರು.
ಜಾರ್ಖಂಡ್ ನ ಒಂದು ಹಳ್ಳಿ ಸೈಬರ್ ಅಪರಾಧಗಳಿಗೆ ಹೆಸರುವಾಸಿಯಾಗಿದ್ದು ಅಲ್ಲಿನವರು ಕ್ಷಣ ಮಾತ್ರದಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಮಾಡುತ್ತಾರೆ, ಎಂದ ಅವರು ನಮ್ಮ ಪೊಲೀಸರು ಅತೀಹೆಚ್ಚು ಅಪರಾಧಗಳನ್ನು ಶೋಸುವ ಕೆಲಸಮಾಡುತ್ತಿದ್ದು ಅದಕ್ಕಾಗಿ ಅಭಿನಂದಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹಲ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್, ಉಪ ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರು ಉಪಸ್ಥಿತರಿದ್ದರು.
