21ನೇ ಶತಮಾನದಲ್ಲಿ ಜ್ಞಾನ ಇದ್ದವನೇ ಜಗತ್ತು ಆಳುತ್ತಾರೆ : ಸಿಎಂ ಬೊಮ್ಮಾಯಿ

Spread the love

ತುಮಕೂರು:ಮೇ. 16 ಎರಡು ವರ್ಷದ ನಂತರ ಪೂರ್ಣ ಪ್ರಮಾಣದ ಶಾಲೆ ಪ್ರಾರಂಭವಾಗುತ್ತಿದ್ದು, ಶಿಕ್ಷಣ ಇಲಾಖೆ ವಿನೂತನವಾಗಿ ಕಲಿಕಾ ಚೇತರಿಕೆ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಎಂಪ್ರೆಸ್ ಶಾಲೆಯಲ್ಲಿ ನಡೆದ ಕಲಿಕಾ ಚೇತರಿಕೆ ಮತ್ತು ಶಾಲಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದ ಮಕ್ಕಳು ಸ್ಪರ್ಧಾತ್ಮಕವಾಗಿರುವ ಈ ಕಾಲದಲ್ಲಿ ಮೂಲಭೂತ ಶಿಕ್ಷಣದಿಂದ ವಂಚಿತವಾಗಬಾರದು, ಎರಡು ವರ್ಷದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ, ಇಂತಹ ಮಕ್ಕಳಿಗೆ ವಿಶೇಷ ಪಠ್ಯ ಕ್ರಮದ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಕಲಿಕಾ ಚೇತರಿಕೆ ಉದ್ದೇಶವಾಗಿದೆ ಎಂದರು.

ನಮ್ಮ ರಾಜ್ಯದ ಭವಿಷ್ಯಕ್ಕೆ ಅಡಿಪಾಯ ಕಲಿಕಾಚೇತರಿಕೆಯಾಗಿದ್ದು, ಶಿಕ್ಷಣಕ್ಕೆ ಅನುದಾನ ನೀಡಿದರೆ ಸಾಲದು, ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಧ್ಯೇಯ ಹೊಂದಲಾಗಿದೆ, ಶಿಕ್ಷಕರ ನೇಮಕ ಮತ್ತು ಕೊಠಡಿ ನಿರ್ಮಾಣದಿಂದ ಎಲ್ಲವು ಆಗುವುದಿಲ್ಲ, ಜ್ಞಾನದ ಶತಮಾನದಲ್ಲಿ ಶಿಕ್ಷಣಕ್ಕೆ ಒತ್ತು ನೀಡಬೇಕಿರುವುದು ಸರ್ಕಾರದ ಬದ್ಧತೆಯಾಗಬೇಕಿದೆ ಎಂದರು.

21ನೇ ಶತಮಾನದಲ್ಲಿ ಜ್ಞಾನಕ್ಕೆ ಬೆಲೆ ಇದೆ, ಜ್ಞಾನ ಇದ್ದವನೇ ಜಗತ್ತು ಆಳುತ್ತಾರೆ, ಪ್ರಪಂಚದಲ್ಲಿ ಇಂದು ಬೆಂಗಳೂರು ತಂತ್ರಜ್ಞಾನಕ್ಕೆ ಹೆಸರಾಗಿದೆ ಎಂದ ಅವರು, ವಿಶ್ವಮಟ್ಟದ ಜ್ಞಾನವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಒದಗಿಸಬೇಕಿದೆ, ನಮ್ಮ ಮಕ್ಕಳಿಗೆ ಸಂಖ್ಯೆಯ ಬಗ್ಗೆ ಅದ್ಭುತ ಕಲಿಕೆ ಇದೆ, ವಿದೇಶದ ಮಕ್ಕಳಿಗೆ ಹೋಲಿಕೆ ಮಾಡಿದರೆ ನಮ್ಮ ಮಕ್ಕಳು ಕ್ರಿಯಾಶೀಲರಾಗಿದ್ದು, ಅವರಿಗೆ ಉತ್ತೇಜನ ನೀಡಬೇಕಿದೆ ಎಂದರು.

ಪ್ರಧಾನಿ ಮೋದಿ ಅವರು ಆಡಳಿತದಲ್ಲಿ ಅನೇಕ ಸಾಹಸಗಳನ್ನು ಮಾಡುತ್ತಿದ್ದಾರೆ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲು ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ, ಶಿಶುವಿಹಾರದಿಂದ ಹೊಸ ಶಿಕ್ಷಣ ನೀತಿ ಜಾರಿಯಾಗಲಿದ್ದು, ಮಕ್ಕಳಲ್ಲಿ ಕಲಿಕೆಯ ಉತ್ತೇಜನ ನೀಡಲು ನಿಟ್ಟಿನಲ್ಲಿ ಪಠ್ಯಕ್ರಮವನ್ನು ರೂಪಿಸಲಾಗಿದೆ ಎಂದ ಅವರು ಮಕ್ಕಳಲ್ಲಿನ ಕುತೂಹಲವನ್ನು ತಣ್ಣಿಸುವ ವರೇ ನಿಜವಾದ ಗುರುಗಳು ಎಂದು ಹೇಳಿದರು.

ಮಕ್ಕಳ ವಿಚಾರಮಟ್ಟದಲ್ಲಿಯೇ ಶಿಕ್ಷಣದ ಪಠ್ಯವನ್ನು ಶಿಕ್ಷಣ ತಜ್ಞರು ರೂಪಿಸಿದ್ದಾರೆ, ಶಿಕ್ಷಕರಿಗೆ ಮಾತ್ರವಲ್ಲ ಮಕ್ಕಳಿಗೂ ಪ್ರಶ್ನೆ ಕೇಳುವ ಹಕ್ಕಿದೆ, ಮಕ್ಕಳ ಪ್ರಶ್ನೆಗಳಿಗೆ ತರ್ಕಬದ್ಧ ಚಿಂತನೆ ಇರುತ್ತದೆ ಅದಕ್ಕೆ ಪ್ರೋತ್ಸಾಹ ನೀಡಿ, ಮೊಟಕುಗೊಳಿಸಬೇಡಿ ಎಂದು ಶಿಕ್ಷಕರಿಗೆ ಸೂಚಿಸಿದ ಅವರು, ಜ್ಞಾನದ ಬಾಗಿಲನ್ನು ಸದಾ ತೆರದಿಟ್ಟು, ನಿರಂತರ ಕಲಿಕೆಯಿಂದ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಕೋವಿಡ್ ನಂತರ ಪರಿಣಾಮ ಮಕ್ಕಳ ಕಲಿಕೆಯ ಮೇಲಾಗಿದೆ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಳ ಮಾಡಲು ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಒಂದೂವರೆ ಎರಡು ವರ್ಷ ಕಲಿಕೆಯ ಗುಣಮಟ್ಟದಲ್ಲಿ ಆಗಿರುವ ಬದಲಾವಣೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಎಲ್ಲ ರೀತಿಯ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.

ಕಲಿಕಾ ಚೇತರಿಕೆ ಒಂದು ವರ್ಷದ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಒಂದನೇ ತರಗತಿಯಿಂದ ಮೂರನೇ ತರಗತಿವರೆಗೆ ವಿದ್ಯಾರ್ಥಿ ಪ್ರವೇಶ ಕಾರ್ಯಕ್ರಮದ ಮೂಲಕ ಮೂರು ತಿಂಗಳು ಅವರ ಕಲಿಕೆಗೆ ಉತ್ತೇಜನ ನೀಡಲಾಗುವುದು ಅದರಂತೆ ನಾಲ್ಕು ಮತ್ತು ಉಳಿದ ತರಗತಿಗಳಿಗೂ ಇದೇ ರೀತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಅಗತ್ಯ ಅನುದಾನ ಮತ್ತು ಪುಸ್ತಕವನ್ನು ರೂಪಿಸಲಾಗಿದ್ದು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ, ಎಸ್ಸಿಎಸ್ಟಿ ಮಕ್ಕಳ ಕಲಿಕೆಯನ್ನು ಉತ್ತೇಜಿಸಲಾಗುವುದು ಎಂದು ಹೇಳಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ, ವೈ.ಎ.ನಾರಾಯಣಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಜ್ಯೋತಿಗಣೇಧ್, ಚಿದಾನಂದಗೌಡ, ರಾಜೇಶ್ ಗೌಡ, ಎಸ್.ಆರ್.ಗೌಡ ಮೇಯರ್ ಕೃಷ್ಣಪ್ಪ, ಶಿಕ್ಷಣ ಇಲಾಖೆ ಆಯುಕ್ತ ವಿಶಾಲ್, ಕಾರ್ಯದರ್ಶಿ ಪಲ್ಲವಿ ಅಕುರಾತಿ, ಐಜಿಪಿ ಚಂದ್ರಶೇಖರ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ ಸೇರಿದಂತೆ ಇತರರಿದ್ದರು.

Facebook Comments