ಬೆಂಗಳೂರಲ್ಲಿ ಗುಂಡಿ ಗಂಡಾಂತರ : ಬಿಬಿಎಂಪಿಗೆ ಸಿಎಂ ತರಾಟೆ

Social Share

ಬೆಂಗಳೂರು, ನ.5- ನಗರದಲ್ಲಿ ದಿನೇ ದಿನೇ ಗುಂಡಿಗಳಿಂದ ಅಪಘಾತಗಳು ಹೆಚ್ಚುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ಸಿಂಗ್ ಅವರು ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಡಕ್ ಸೂಚನೆ ನೀಡಿದ್ದಾರೆ.

ಪ್ರತಿದಿನ ನಗರದಲ್ಲಿ ರಸ್ತೆ ಗುಂಡಿಗಳಿಂದ ಒಂದಲ್ಲ ಒಂದು ಅವಾಂತರಗಳು ಸಂಭವಿಸುತ್ತಲೇ ಇವೆ. ಇದರಿಂದ ಸಾರ್ವಜನಿಕರು ಸರ್ಕಾರ ಹಾಗೂ ಪಾಲಿಕೆ ವಿರುದ್ಧ ಹಿಡಿಶಾಪ ಹಾಕುತ್ತಲೇ ಇದ್ದಾರೆ. ನ್ಯಾಯಾಲಯ ಕೂಡ ಗುಂಡಿಗಳನ್ನು ಮುಚ್ಚುವಂತೆ ಆದೇಶದ ಮೇಲೆ ಆದೇಶ ನೀಡುತ್ತಲೇ ಇದೆ.

ಪಾಲಿಕೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದೀರ, ಕೂಡಲೇ ಎಚ್ಚೆತ್ತು ಹಗಲು-ರಾತ್ರಿ ಕೆಲಸ ಮಾಡಿ ರಸ್ತೆ ಗುಂಡಿಗಳನ್ನು ಮುಚ್ಚಿ ಸರ್ಕಾರದ ಗೌರವವನ್ನು ಉಳಿಸಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಸ್ತೆ ಗುಂಡಿಗಳಿಂದ ಈಗಾಗಲೇ ಹಲವರ ಪ್ರಾಣ ಹಾನಿಯಾಗಿದೆ. ಹಲವರು ಕೈ-ಕಾಲುಗಳನ್ನು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ನಿರಂತರ ಮಳೆಯಿಂದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುವುದು ಬೇಡ.

ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದ್ದಾರೆ.ಮುಖ್ಯಮಂತ್ರಿಗಳು ಸೂಚನೆ ನೀಡುತ್ತಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಾಲಿಕೆಯ ಆಡಳಿತಾಕಾರಿ ರಾಕೇಶ್ಸಿಂಗ್ ಅಧಿಕಾರಿಗಳಿಗೆ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ರಸ್ತೆ ಗುಂಡಿ ಮುಚ್ಚುವಂತೆ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ರಸ್ತೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ತೋರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೂಡಲೇ ಕಾರ್ಯೋನ್ಮುಖರಾಗಿ ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

ವಿವಿಧ ರಾಜ್ಯಗಳ 5 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ

ಒಟ್ಟಾರೆ ಬೆಂಗಳೂರು ಮಹಾನಗರ ಹಲವು ಕಾರಣಗಳಿಂದ ವಿಶ್ವವಿಖ್ಯಾತಿ ಗಳಿಸಿತ್ತು. ಆದರೆ, ಈಗ ಗುಂಡಿಗಳ ಅದ್ವಾನದಿಂದ ಅಪಖ್ಯಾತಿಗೆ ಕಾರಣವಾಗಿದೆ. ನಗರದ ಯಾವುದೇ ಭಾಗಕ್ಕೂ ಹೋದರೂ ಕೂಡ ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿವೆ.

ವಾಹನ ಸವಾರರಂತೂ ಬಿಬಿಎಂಪಿಗೆ ಶಪಿಸುತ್ತಲೇ ತಮ್ಮ ವಾಹನಗಳನ್ನು ಚಲಾಯಿಸುತ್ತಾರೆ. ಅನಿವಾರ್ಯವಾಗಿ ಗುಂಡಿಗಳಿರುವ ರಸ್ತೆಗಳಲ್ಲೇ ವಾಹನ ಚಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಸರ್ಕಾರ ಇನ್ನಾದರೂ ಎಚ್ಚೆತ್ತು ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುತ್ತದೆಯೇ ಕಾದು ನೋಡಬೇಕು.

ಕೆಲವೆಡೆ ಬೇಸತ್ತ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಗುಂಡಿಗಳನ್ನು ಮುಚ್ಚುವ ಕಾಯಕದಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದೆ.ಮೊನ್ನೆ ತಾನೆ ಮಲ್ಲೇಶ್ವರಂನ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿ ರಸ್ತೆ ಗುಂಡಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಕೂಡಲೇ ಕಲ್ಲು-ಮಣ್ಣು ತಂದು ರಸ್ತೆ ಗುಂಡಿ ಮುಚ್ಚಿದ್ದರು.

ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.ಬಿಬಿಎಂಪಿಯಲ್ಲಿ ಜನಪ್ರತಿನಿಗಳ ಆಡಳಿತವಿಲ್ಲದಿರುವುದು ಒಂದು ಕಾರಣ. ಅಧಿಕಾರಿಗಳ ಅಂಧ ದರ್ಬಾರ್ನಿಂದ ರಸ್ತೆಗಳ ಅಧ್ವಾನ ಹೇಳತೀರದಾಗಿದೆ. ಬೆಂಗಳೂರು ಉಸ್ತುವಾರಿಯ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ರಸ್ತೆಗಳನ್ನು ಸರಿಪಡಿಸದಿದ್ದರೆ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Articles You Might Like

Share This Article