ನಾಳೆ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ, ಕೆಲವು ಸಚಿವರಿಗೆ ಶುರುವಾಯ್ತು ಢವಢವ..!

Social Share

ಬೆಂಗಳೂರು,ಫೆ.2-ಸಂಪುಟ ವಿಸ್ತರಣೆಗೆ ಶಾಸಕರಿಂದ ನಿರಂತರ ಒತ್ತಡಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವರಿಷ್ಠರ ಜೊತೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ದೆಹಲಿಗೆ ತೆರಳುವ ಸಾಧ್ಯತೆ ಇದೆ.ಎರಡು ದಿನಗಳ ಕಾಲ ದೆಹಲಿಯಲ್ಲೆ ವಾಸ್ತವ್ಯ ಹೂಡಲಿರುವ ಸಿಎಂ ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಪ್ರಮುಖರನ್ನು ಭೇಟಿಯಾಗಲಿದ್ದಾರೆ.ಸಚಿವ ಸಂಪುಟ ಪುನಾರಚನೆ/ವಿಸ್ತರಣೆ, ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ, ಕಳೆದ ಆರು ತಿಂಗಳ ಅವಧಿಯಲ್ಲಿ ಸರ್ಕಾರದ ಸಾಧನೆ, ಕೋವಿಡ್ ನಿರ್ವಹಣೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಸಿಎಂ ದೆಹಲಿ ಪ್ರವಾಸದ ಬಗ್ಗೆ ಈ ಕ್ಷಣದವರೆಗೂ ಅಕೃತಗೊಂಡಿಲ್ಲ. ಮೂಲಗಳ ಪ್ರಕಾರ ದೆಹಲಿ ನಾಯಕರ ಭೇಟಿಗೆ ಹಸಿರು ನಿಶಾನೆ ಸಿಕ್ಕರೆ ನಾಳೆ ತೆರಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.ಪಂಚರಾಜ್ಯಗಳ ವಿಧಾನಸಭೆ ಚುನಾವಣೆ, ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಹಾಗೂ ಸಂಸತ್‍ನ ಉಭಯ ಸದನಗಳ ಬಜೆಟ್ ಅವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವರಿಷ್ಠರ ಭೇಟಿಗೆ ಸಮಯ ಅವಕಾಶ ನಿಗದಿಯಾಗಿದೆಯೋ ಇಲ್ಲವೋ ಎಂಬುದು ಕೂಡ ಖಚಿತವಾಗಿಲ್ಲ.
ಇತ್ತೀಚೆಗೆ ಮಾಜಿ ಸಚಿವರಾದ ಬಸನಗೌಡ ಪಾಟೀಲ್, ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಅಪ್ಪಚ್ಚರಂಜನ್, ಕೆ.ಜಿ.ಬೋಪಯ್ಯ, ಎಸ್.ಎ.ರಾಮದಾಸ್, ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಶಿವರಾಜ್ ಪಾಟೀಲ್, ಪೂರ್ಣಿಮಾ ಶ್ರೀನಿವಾಸ್, ಉಪಸಭಾಪತಿ ಆನಂದ್ ಮಾಮನಿ, ಮಹೇಶ್ ಕುಮಟಹಳ್ಳಿ ಸೇರಿದಂತೆ ಅನೇಕರು ಸಂಪುಟ ವಿಸ್ತರಣೆಯಾಗಲೇಬೇಕೆಂದು ಒತ್ತಾಯಿಸಿದ್ದರು.
ಅಲ್ಲದೆ ಕೆಲವು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿ ಕೆಲವು ಅಧ್ಯಕ್ಷ ಸಚಿವರನ್ನು ಕೈಬಿಟ್ಟು ಕಡೆ ಪಕ್ಷ ಚುನಾವಣಾ ವರ್ಷದಲ್ಲಾದರೂ ಪಕ್ಷ ನಿಷ್ಠರಿಗೆ ಈ ಬಾರಿಯಾದರೂ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು.ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಬೊಮ್ಮಾಯಿ ಅವರು ಕೇಂದ್ರ ನಾಯಕರ ಜೊತೆ ಚರ್ಚಿಸಿ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳ ಜೊತೆಗೆ ಹಾಲಿ ಕೆಲವು ಸಚಿವರಿಗೆ ಕೋಕ್ ನೀಡಿ ಪುನಾರಚನೆ ಮಾಡುವ ಇಂಗಿತವನ್ನು ತಮ್ಮ ಆಪ್ತರ ಬಳಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
# ಡವಢವ:
ಸಿಎಂ ಬೊಮ್ಮಾಯಿ ಅವರು ದೆಹಲಿಗೆ ತೆರಳುತ್ತಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಕೆಲವು ಸಚಿವರಲ್ಲಿ ಎದೆಬಡಿತ ಜೋರಾಗಿದೆ.
ಈ ಬಾರಿ ವಿಸ್ತರಣೆ ಮಾತ್ರವಲ್ಲದೆ ಪುನಾರಚನೆಯಾಗುವುದು ಬಹುತೇಕ ಖಚಿತವಾಗಿರುವುದರಿಂದ ತಮ್ಮನ್ನು ಎಲ್ಲಿ ಕೈ ಬಿಡಲಿದ್ದಾರೋ ಎಂಬ ಆತಂಕ ಕೆಲವರನ್ನು ಕಾಡುತ್ತಿದೆ.
ಮೂಲಗಳ ಪ್ರಕಾರ ಈ ಬಾರಿ ಪುನಾರಚನೆಯಾದರೆ ಹಾಲಿ ಬೊಮ್ಮಾಯಿ ಸಂಪುಟದಲ್ಲಿರುವ ಕನಿಷ್ಟ 8ಕ್ಕೂ ಹೆಚ್ಚು ಸಚಿವರು ಸಂಪುಟದಿಂದ ಗೇಟ್‍ಪಾಸ್ ಪಡೆಯಲಿದ್ದು, ಪಕ್ಷ ನಿಷ್ಠರಿಗೆ ಮಣೆ ಹಾಕುವ ಸಂಭವವಿದೆ.ಈ ಹಿಂದೆ 2006, 2008ರಿಂದ 2013 ಹಾಗೂ ಮಾಜಿ ಸಿಎಂ ಯಡಿಯೂರಪ್ಪ , ಹಾಲಿ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿರುವ ಅನೇಕರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜನೆ ಮಾಡುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.
ಮುಂದಿನ ವರ್ಷ ಮೇನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಕೆಲವು ಹಿರಿಯರನ್ನು ಪಕ್ಷ ಸಂಘಟನೆಗೆ ನಿಯೋಜಿಸುವುದು, ಸಂಘ ಪರಿವಾರದ ಹಿನ್ನೆಲೆ ಹೊಂದಿರುವವರನ್ನೇ ಸಂಪುಟಕ್ಕೆ ತೆಗೆದುಕೊಳ್ಳಲು ಚಿಂತನಮಂಥನ ನಡೆದಿದೆ.ಒಂದು ವೇಳೆ ಇದಕ್ಕೆ ವರಿಷ್ಠರು ಗ್ರೀನ್ ಸಿಗ್ನಲ್ ಕೊಟ್ಟರೆ ಕನಿಷ್ಟ 8ರಿಂದ 10 ಸಚಿವರು ಸಂಪುಟದಿಂದ ಹೊರಗುಳಿಯುವ ಸಂಭವವೇ ಹೆಚ್ಚಾಗಿದೆ.
# ಯಾರ್ಯಾರಿಗೆ ಕೋಕ್:
ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಸಾಸಬೇಕೆಂಬ ಬೇಡಿಕೆ ಕೂಡ ಇದೆ. ಕೆಲವು ಸಚಿವರು ಶಾಸಕರ ಕೆಲಸಕಾರ್ಯಗಳನ್ನು ಮಾಡಿಕೊಡುತ್ತಿಲ್ಲ ಎಂಬ ಆರೋಪವೂ ಪದೇ ಪದೇ ಕೇಳಿಬರುತ್ತಿದೆ.ಶಾಸಕಾಂಗ ಸಭೆಯಲ್ಲೂ ಕೆಲವು ಸಚಿವರ ವಿರುದ್ಧ ಶಾಸಕರು ಬಹಿರಂಗವಾಗಿಯೇ ಕಿಡಿಕಾಡಿದ್ದರು. ನಮ್ಮ ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ತಾಂತ್ರಿಕ ಕಾರಣಗಳು ಇಲ್ಲವೇ ಕುಂಟು ನೆಪ ಹೇಳುತ್ತಿದ್ದಾರೆ.
ಮಧ್ಯವರ್ತಿಗಳಿಂದ ಕೆಲಸಕಾರ್ಯಗಳು ಸುಲಭವಾಗಿ ನಡೆಯುತ್ತದೆ ಎಂಬುದು ಬಹುತೇಕ ಶಾಸಕರ ಆರೋಪವಾಗಿತ್ತು. ಹೀಗಾಗಿ ಅದಕ್ಷ ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಬಹುದು.ಇದರಂತೆ ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ, ಕೆ.ಸಿ.ನಾರಾಯಣಗೌಡ, ಮುರುಗೇಶ್ ನಿರಾಣಿ ಸೇರಿದಂತೆ ಕನಿಷ್ಠ ಪಕ್ಷ 8-10 ಸಚಿವರು ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಬಿಬಿಎಂಪಿ ಚುನಾವಣೆ ಕಾರಣಕ್ಕಾಗಿ ಕಂದಾಯ ಸಚಿವ ಆರ್.ಅಶೋಕ್ ತಲೆದಂಡವಾಗುವ ಭೀತಿಯಿಂದ ಪಾರಾಗಿದ್ದರೆ, ಸದನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಕಾರಣಕ್ಕಾಗಿ ಮಾಧುಸ್ವಾಮಿ ಕೂಡ ಮುಂದುವರೆಯಲಿದ್ದಾರೆ.

Articles You Might Like

Share This Article