ಅವಕಾಶವಂಚಿತರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಗುರಿ : ಸಿಎಂಬೊಮ್ಮಾಯಿ

Spread the love

ಉಡುಪಿ,ಏ.12- ಧ್ವನಿ ಇಲ್ಲದವರು, ಅವಕಾಶ ವಂಚಿತರನ್ನು ಮುಖ್ಯ ವಾಹಿನಿಗೆ ತರುವುದು ನಮ್ಮ ಮುಖ್ಯ ಗುರಿ. ಸ್ವಾಭಿಮಾನದಿಂದ ಬದುಕಲು ಎಲ್ಲರಿಗೂ ಹಕ್ಕಿದೆ ಎನ್ನುವುದನ್ನು ಭಾಜಪ ನಮಗೆ ಸ್ಪಷ್ಟವಾಗಿ ಹೇಳಿಕೊಟ್ಟಿದೆ. ಅದನ್ನೆ ನಮ್ಮ ಕಾರ್ಯಕ್ರಮದಲ್ಲಿ ಅಳವಡಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಉಡುಪಿಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜ್ಯೋತಿಬಾ ಫುಲೆಯವರ ಜನ್ಮ ದಿನಾಚರಣೆ ಹಾಗೂ ವಿವಿಧ ಸಮುದಾಯಗಳ ಮುಖಂಡರ ಜತೆಗಿನ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

# ಹಿಂದುಳಿದ ವರ್ಗಗಳಿಗೆ ಕಾಯಕಲ್ಪ:
ಭಾರತ ದೇಶದಲ್ಲಿ ಸಮಾನತೆ ತರಲು ವಿವಿಧ ಯೋಜನೆಗಳನ್ನು ರೂಪಿಸಿದ್ದರೂ ಹಲವಾರು ವರ್ಷಗಳಿಂದ ಹಿಂದುಳಿದ ವರ್ಗಗಳಲ್ಲಿ ಇದಕ್ಕೆ ಕಾಯಕಲ್ಪ ಕೊಟ್ಟಿಲ್ಲ. ಹಿಂದುಳಿದ ವರ್ಗಗಳ ನಿಗಮಗಳಲ್ಲಿ ಇರುವ ನೂರಾರು ಕೋಟಿ ರೂ ಗಳ ಸಮರ್ಪಕ ಬಳಕೆಗೆ ಅವಕಾಶವಿರಲಿಲ್ಲ ಎಂದರು.
ಗಂಗಾ ಕಲ್ಯಾಣ ಯೋಜನೆ ಎಲ್ಲಾ ವರ್ಗದ ಜನರಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಪೂರಕ ಬಜೆಟ್ ನಲ್ಲಿ 200 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

208 ಸಮುದಾಯಗಳ ಭವನ ನಿರ್ಮಾಣಕ್ಕೆ ಕ್ರಮ ವಹಿಸಿದೆ. 112 ಕೋಟಿ ರೂ.ಗಳನ್ನು ಸಾಮಾಜಿಕ ಕೆಲಸ ಮಾಡುತ್ತಿರುವ ವಿವಿಧ ಹಿಂದುಳಿದ ವರ್ಗಗಳ ಮಠಗಳಿಗೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿಗೆ ಹಲವಾರು ಸಣ್ಣಪುಟ್ಟ ಸಮುದಾಯಗಳಿಗೆ ಹಣ ಒದಗಿಸುವ ಯೋಜನೆಗಳನ್ನು ರೂಪಿಸಿ ಎಲ್ಲರನ್ನು ಸಮನಾಗಿ ಕಾಣುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಹಿಂದುಳಿದವರಿಗೆ ವಿದ್ಯಾರ್ಥಿನಿಲಯ:
ಮಂಗಳೂರು, ಮೈಸೂರು, ಬೆಂಗಳೂರು,ಹುಬ್ಬಳ್ಳಿ, ಧಾರವಾಡ, ಕಲಬುರಗಿ ಜಿಲ್ಲಾಗಳಲ್ಲಿ ವಿದ್ಯಾರ್ಥಿನಿಲಯಗಳ ಕೊರತೆ ಇದೆ. ಈ ಬಾರಿ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ 1000 ವಿದ್ಯಾರ್ಥಿಗಳಿಗೆ ಒಂದು ವಸತಿ ನಿಲಯ ಸ್ಥಾಪನೆಗೆ ಅನುದಾನ ನೀಡಲಾಗಿದೆ. ಎಲ್ಲಾ ಜಿಲ್ಲಾಗಳಿಗೆ ಇದನ್ನು ವಿಸ್ತರಿಸಲಾಗುವುದು.

ಶಿಕ್ಷಣ, ಉದ್ಯೋಗ, ಸಬಲೀಕರಣದ ತಳಹದಿಯ ಮೇಲೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಕರಾವಳಿ ಪ್ರದೇಶದ ಸಾಮಾಜಿಕ ಸ್ಥಿತಿಗತಿ ಬಗ್ಗೆ ತಿಳಿದಿದೆ. ಕಾಯಕ ಆಧಾರಿತ ಸಮುದಾಯಗಳನ್ನು ವಿದ್ಯೆ, ಉದ್ಯೋಗದಲ್ಲಿ ತೊಡಗಿಕೊಂಡು ಅವಕಾಶ ನೀಡಲು ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ. ರಾಜ್ಯದ ತಲಾವಾರು ಆದಾಯವನ್ನು ಹೆಚ್ಚಿಸಲು ಎಲ್ಲಾ ವರ್ಗದವರನ್ನು ತೊಡಗಿಸಿಕೊಳ್ಳಬೇಕು.

ಆರ್ಥಿಕತೆಯನ್ನು ಜನರ ಶ್ರಮದಿಂದ ಅಳೆಯಬೇಕು. ಜನರನ್ನು ನೋಡಿ ಕೊಂಡರೆ ಅವರೂ ಮೇಲೆ ಬಂದು ರಾಜ್ಯದ ಆದಾಯ ಹೆಚ್ಚುತ್ತದೆ. ದುಡಿಮೆಯೇ ದೊಡ್ಡಪ್ಪ ಎನ್ನುವ ನೀತಿಯಿಂದ ಕೆಲಸ ಮಾಡುತ್ತಿದ್ದೇವೆ. ಕರಾವಳಿ ಭಾಗದಲ್ಲಿ ಜನರು ಭಾಜಪ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ ಎಂದರು.

ಜ್ಯೋತಿ ಬಾ ಫುಲೆಯವರ ಜನ್ಮ ದಿನಾಚರಣೆಯನ್ನು ಭಾಜಪದಿಂದ ಆಚರಿಸಲಾಗುತ್ತಿದೆ. ಭಾಜಪ ಸಮಾಜದ ಏಳಿಗೆ, ಪರಿವರ್ತನೆಗಾಗಿ ದುಡಿದವರನ್ನು ಗುರುತಿಸುತ್ತದೆ. ಇದುವರೆಗೂ ಜ್ಯೋತಿ ಬಾ ಫುಲೆಯವರ ಹೆಸರನ್ನು ಹಲವಾರು ಸಂಘಟನೆಗಳು ಹೇಳುತ್ತವೆ.

ಆದರೆ ಅವರ ಆದರ್ಶಗಳನ್ನು ಎಲ್ಲಿಯೂ ಪರಿಪಾಲನೆ ಮಾಡುವುದಿಲ್ಲ. ತ್ಯಾಗ ಜೀವಿ, ರಾಜಸತ್ವವನ್ನು ಬಿಟ್ಟು ಸಮಾಜದಲ್ಲಿ ನಿಜವಾಗಿಯೂ ಪರಿವರ್ತನೆ ಮಾಡಬೇಕೆಮದು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅಸ್ಪಶ್ಯತೆ ವಿರುದ್ಧ ಅತ್ಯಂತ ಯಶಸ್ವಿಯಾಗಿ ತಾತ್ವಿಕ ಹೋರಾಟ ಪ್ರಾರಂಭ ಮಾಡಿದ್ದೇ ಜ್ಯೋತಿ ಬಾ ಫುಲೆ ಎಂದು ಸ್ಮರಿಸಿದರು.

ಮಹಾರಾಷ್ಟ್ರ ದಲ್ಲಿ ಹುಟ್ಟಿದ್ದರೂ ದೇಶವ್ಯಾಪಿ ಯಾಗಿ ಅವರ ವಿಚಾರಧಾರೆ ಹಬ್ಬಿದೆ. ಕರ್ನಾಟಕದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಆಗಿದೆ. ಈ ವರ್ಷ ನಮ್ಮ ಬಜೆಟ್‍ನಲ್ಲಿ ಉತ್ತಮ ಶಿಕ್ಷಕ, ಶಿಕ್ಷಕಿಯರಿಗೆ ಜ್ಯೋತಿ ಬಾ ಫುಲೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದರು.

ಭಾಜಪ ಸರ್ವಸ್ಪರ್ಶಿ, ಸರ್ವವ್ಯಾಪಿ ಪಕ್ಷ. ಇಲ್ಲಿ ಜಾತಿ, ಮತ ಪಂಥಕ್ಕಿಂತ ಅವನ ಬದ್ದತೆ, ಕಾರ್ಯಕ್ಷಮತೆಯನ್ನು ಗುರುತಿಸಲಾಗುತ್ತದೆ. ಹಲವಾರು ಸಮುದಾಯಗಳಿರುವ, ಭಾಷೆಗಳಿರುವ ಈ ರಾಷ್ಟ್ರ ಇತರೆ ರಾಷ್ಟ್ರಗಳಿಗಿಂತ ವಿಭಿನ್ನ. ತನ್ನದೆಯಾದ ಸಂಸ್ಕøತಿ, ಸಂಸ್ಕಾರ ಹೊಂದಿರುವ ಈ ರಾಷ್ಟ್ರ ಸಮಸ್ಯೆಗಳನ್ನೂ ಹೊಂದಿದೆ. ಇವುಗಳನ್ನು ಪರಿಹರಿಸಲು ಸ್ಪಷ್ಟವಾದ ವಿಚಾರ, ದಿಟ್ಟ ನಾಯಕತ್ವದ ಅವಶ್ಯಕತೆ ಇದೆ. ಅದನ್ನು ನಮ್ಮ ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಧ್ಯೇಯ ಎಲ್ಲರ ಅಭಿವೃದ್ಧಿ ಯಲ್ಲಿ ದೇಶದ ಅಭಿವೃದ್ಧಿಇದೆ ಎಂಬುದನ್ನೇ ಧ್ವನಿಸುತ್ತದೆ ಎಂದರು.

ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಸಹ ಸೇರಿದೆ. ಹಂತ ಹಂತವಾಗಿ ಈ ಸಮುದಾಯವನ್ನು ದೇಶದ ಮುಖ್ಯವಾಹಿನಿಗೆ ತಂದು ಅವರ ಶ್ರಮಕ್ಕೆ ಯೋಗ್ಯ ಬೆಲೆ ಕೊಡುವ ಮೂಲಕ ಆಗುವ ದೊಡ್ಡ ಪರಿವರ್ತನೆ ಆರ್ಥಿಕ ಪರಿವರ್ತನೆಗೆ ನಾಂದಿಯಾಗಬೇಕು ಎನ್ನುವ ದೂರ ದೃಷ್ಟಿ ಪ್ರಧಾನಮಂತ್ರಿಯವರದ್ದು. ಅವರೂ ಹಿಂದುಳಿದ ವರ್ಗದಿಂದ ಬಂದು ಅಪಮಾನಕ್ಕೆ ಈಡಾದವರು. ಹಲವಾರು ಸಂದರ್ಭಗಳಲ್ಲಿ ನೋವನ್ನು ಉಂಡದವರು . ಈ ಎಲ್ಲಾ ನೋವನ್ನು ಸಮಾಜದ ಪರಿವರ್ತನೆಗಾಗಿ ಬಳಸುತ್ತಿದ್ದಾರೆ ಎಂದರು.

ಮನೆ ಮನೆಗೆ ಕುಡಿಯುವ ನೀರು ಒದಗಿಸುತ್ತೇವೆ ಎಂದು ಹೇಳುವ ಸಾಹಸ ಯಾವ ಪ್ರಧಾನ ಮಂತ್ರಿಯೂ ಮಾಡಲಿಲ್ಲ. ಏಕೆಂದರೆ ಅದು ಸುಲಭದ ಮಾತಲ್ಲ. ಆದರೆ ಪ್ರಥಮ ಬಾರಿಗೆ ನಮ್ಮ ಪ್ರಧಾನಿ ಅದನ್ನು ಘೋಷಿಸಿದರು. ಕುಡಿಯುವ ನೀರು ಮೂಲಭೂತ ಸೌಕರ್ಯ. ಸಾಮಾಜಿಕವಾಗಿ ಎಲ್ಲರನ್ನೂ ತೆಗೆದುಕೊಂಡು ಹೋಗುವ ದ್ಯೋತಕ. ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ತಳವರ್ಗದವರಿಗೆ ಮಾಡಲು ಸಾಧ್ಯವಾಗಿಲ್ಲ.

ಸಾಮಾಜಿಕ ವ್ಯವಸ್ಥೆ ಅದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಮನೆ ಮನೆಗೆ ನೀರು ನೀಡಿದರೆ ಸಾಮಾಜಿಕ ಪಿಡುಗು ದೂರವಾಗುತ್ತದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಭಾರತದಲ್ಲಿ ಸಮಾನತೆ ತರಲು ದೊಡ್ಡ ಯೋಜನೆಗಳನ್ನು ರೂಪಿಸಲಾಗಿದೆ. ಅವರ ಯೋಜನೆಗಳನ್ನು ರಾಜ್ಯದಲ್ಲಿ ಕಾರ್ಯಗತ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಿಗೆ ಯೋಜನೆಗಳನ್ನು ಫಲಪ್ರದಗೊಳಿಸುತ್ತಿದ್ದೇವೆ ಎಂದರು.

Facebook Comments