ಎಸಿಬಿ ರದ್ದು, ಎಜೆ ವರದಿ ನಂತರ ಕ್ರಮ

Social Share

ಬೆಂಗಳೂರು, ಆ.12- ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯನ್ನು ರದ್ದುಪಡಿಸಿ ಲೋಕಾಯುಕ್ತಕ್ಕೆ ಶಕ್ತಿ ತುಂಬುವ ವಿಚಾರವಾಗಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ಕಾನೂನು ಇಲಾಖೆ, ಅಡ್ವೊಕೇಟ್ ಜನರಲ್ ಅವರು ಅಧ್ಯಯನ ಮಾಡಿ ನೀಡುವ ವರದಿ ಆಧರಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ, ರಾಜ್ಯ ಭಾಷಾ ಆಯೋಗ ಹಾಗೂ ಭಾಷಾಂತರ
ನಿರ್ದೇಶನಾಲಯದ ವತಿಯಿಂದ ಭಾರತ ದಂಡ ಸಂಹಿತೆ (ಐಪಿಸಿ), ದಂಡ ಪ್ರಕ್ರಿಯಾ ಸಂಹಿತೆ (ಸಿಸಿಪಿ) ಮತ್ತು ಭಾರತ ಸಾಕ್ಷ್ಯ ಅಧಿನಿಯಮ (ಐಇಎ), ದ್ವಿಭಾಷಾ ಕನ್ನಡ ಆವೃತ್ತಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿ ಮಾತನಾಡಿದರು.

ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚೆಯಾಗಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗೆ ಬದ್ಧವಾಗಿದ್ದೇವೆ. ತೀರ್ಪನ್ನು ಕಾನೂನು ಇಲಾಖೆ, ಅಡ್ವೊಕೇಟ್ ಜನರಲ್ ಅವರು ಅಧ್ಯಯನ ಮಾಡಿ ನೀಡುವ ಸಲಹೆ-ಸೂಚನೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಕಾನೂನು ಇಲಾಖೆ ಮೂಲಕ ಎಲ್ಲ ಕಾನೂನನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ಕನ್ನಡ ಭಾಷೆಗೆ ತರ್ಜುಮೆ ಮಾಡಿಸಲಾಗುವುದು. ಸರ್ಕಾರದ ತಾಲ್ಲೂಕು ಮಟ್ಟದ ಗ್ರಂಥಾಲಯಗಳು, ಪೊಲೀಸ್ ಠಾಣೆಗಳಲ್ಲಿ ಇಂದು ಬಿಡುಗಡೆಯಾದ ಕೃತಿಗಳು ದೊರೆಯುವಂತಾಗಬೇಕು. ವೆಬ್‍ಸೈಟ್‍ನಲ್ಲೂ ಪ್ರಕಟಿಸಬೇಕು ಹಾಗೂ ರಿಯಾಯಿತಿ ದರದಲ್ಲಿ ಕೃತಿಗಳನ್ನು ಮಾರಾಟ ಮಾಡುವಂತೆ ಸೂಚಿಸಿದರು.

ಕಾನೂನು, ಸಿಆರ್‍ಪಿಸಿ ಮತ್ತು ಐಪಿಸಿಯನ್ನು ಕನ್ನಡದಲ್ಲಿ ತರ್ಜುಮೆ ಮಾಡಿಸುವ ಮೂಲಕ ಮಹತ್ವದ ಕಾರ್ಯ ಮಾಡಲಾಗಿದೆ. ಗ್ರಾಮೀಣ ಭಾಗದ ಜನರು ಕಾನೂನನ್ನು ಅರ್ಥಮಾಡಿಕೊಳ್ಳಲು ಇದು ಸಹಕಾರಿಯಾಗಲಿದೆ. ಅವಶ್ಯವಿದ್ದಾಗ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾನೂನು ಇಲಾಖೆಯು ಕಾವೇರಿ, ಕೃಷ್ಣ ನ್ಯಾಯಾೀಧಿಕರಣಗಳ ಆದೇಶಗಳನ್ನೂ ಕನ್ನಡದಲ್ಲಿ ತರ್ಜುಮೆ ಮಾಡಿಸಿದೆ ಎಂದರು.
ಕಾನೂನಿನ ಜ್ಞಾನ ಮತ್ತು ಅರಿವು ಬಹಳ ಮುಖ್ಯ. ಐಪಿಸಿ ಮತ್ತು ಸಿಆರ್‍ಪಿಸಿ ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ಕಾನೂನುಗಳ ಬಹುತೇಕ ಇಂಗ್ಲಿಷ್‍ನಲ್ಲಿವೆ. ಕಳೆದ 15 ವರ್ಷಗಳಿಂದ ಕನ್ನಡಕ್ಕೆ ತರ್ಜುಮೆ ಮಾಡಿಸಲಾಗುತ್ತಿದೆ ಎಂದು ವಿವರಿಸಿದರು.

ಸಚಿವರಾದ ಜೆ.ಸಿ.ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಸುನಿಲ್‍ಕುಮಾರ್, ನಾರಾಯಣಗೌಡ, ಭಾಷಾಂತರ ಇಲಾಖೆ ನಿರ್ದೇಶಕ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Articles You Might Like

Share This Article