ಸಮೃದ್ಧ ಕರ್ನಾಟಕ ನಿರ್ಮಾಣದತ್ತ ಹೆಜ್ಜೆ : ಸಿಎಂ ಬೊಮ್ಮಾಯಿ ಸ್ವಾತಂತ್ರ್ಯೋತ್ಸವ ಭಾಷಣ

Social Share

ಬೆಂಗಳೂರು,ಆ.15- ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಸಮೃದ್ಧ ಕರ್ನಾಟಕ ನಿರ್ಮಾಣದತ್ತ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಜನತೆಗೆ ವಿವಿಧ ಅಮೃತ ಯೋಜನೆಗಳನ್ನು ಘೋಷಿಸಿ, ನವಭಾರತಕ್ಕಾಗಿ ನವಕರ್ನಾಟಕ ನಿರ್ಮಾಣ ಮಾಡುವ ಶಪಥ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯಲ್ಲಿ ಕರ್ನಾಟಕದಿಂದಲೇ ಕನಿಷ್ಠ ಒಂದು ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಸಂಕಲ್ಪ ನಮ್ಮದು ಎಂದಿರುವ ಅವರು, ಈ ಮಹತ್ವಾಕಾಂಕ್ಷೆಯ ಗುರಿ ಸಾಧನೆಗೆ ಸರ್ಕಾರ ಎಲ್ಲ ರೀತಿಯ ಸರ್ವ ಪ್ರಯತ್ನ ಮಾಡಲಿದೆ ಎಂದು ಅಭಯ ನೀಡಿದರು.

ದೇಶದ 76ನೇ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ನಗರದ ಮಾಣಿಕ್ ಷಾ ಪರೇಡ್‍ನಲ್ಲಿ ರಾಜ್ಯದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರುವುದರೊಂದಿಗೆ ಬೊಮ್ಮಾಯಿ ಭಾಷಣ ಆರಂಭಿಸಿದ ಅವರು 28 ಪುಟಗಳ ಭಾಷಣದಲ್ಲಿ, ತಮ್ಮ ನೇತೃತ್ವದ ಸರ್ಕಾರ ಕೈಗೊಂಡಿರುವ ಯೋಜನೆಗಳು, ಮುಂದೆ ಮಾಡಲಿರುವ ಯೋಜನೆಗಳ ಘೋಷಣೆಗಳನ್ನು ಪ್ರಕಟಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯದ ಎಲ್ಲ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಶೇ.100ರಷ್ಟು ಶೌಚಾಲಯ ನಿರ್ಮಾಣಕ್ಕಾಗಿ 250 ಕೋಟಿ ರೂ. ವೆಚ್ಚ ಮಾಡಲಾಗುವುದು. ಇದರಿಂದ ಶಾಲಾ-ಕಾಲೇಜುಗಳಲ್ಲಿ ಸ್ವಚ್ಛ , ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಿಗ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯವವರು, ವಿಶ್ವಕರ್ಮರು, ಮಾದರು ಮತ್ತಿತ್ತರ ಕುಶಲಕರ್ಮಿಗಳಿಗೆ ತಲಾ 50 ಸಾವಿರ ರೂ.ವರೆಗೆ ಸಾಲ ಸಹಾಯಧನ ಯೋಜನೆ ಜಾರಿಗೊಳಿಸುವುದಾಗಿ ಪ್ರಕಟಿಸಿದರು.

ರೈತರ ಮಕ್ಕಳಿಗಾಗಿ ಜಾರಿಗೆ ಮಾಡಿರುವ ವಿದ್ಯಾನಿಧಿ ಯೋಜನೆಯನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಣೆ ಮಾಡಲಾಗುವುದು. ರಾಜ್ಯದಲ್ಲಿ ಹೊಸದಾಗಿ 4050 ಹೊಸ ಅಂಗನವಾಡಿಗಳ ಪ್ರಾರಂಭ ಮಾಡಲಾಗುವುದು. ಇದರಿಂದ 8100 ಮಹಿಳೆಯರಿಗೂ ಉದ್ಯೋಗ ಸಿಗಲಿದೆ ಎಂದು ಹೇಳಿದರು.

ಕರ್ತವ್ಯ ನಿರತ ಸೈನಿಕ ಮೃತಪಟ್ಟರೆ, ಆ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ, 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು. ಭಾರತ ದೇಶಕ್ಕೆ ಈಗ ಅಮೃತ ಗಳಿಗೆ ಬಂದಿದೆ. ಹಲವಾರು ಮಹನೀಯರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ ಬಲಿದಾನ ಮಾಡಿದ್ದಾರೆ. ರೈತರು ಕರ ನಿರಾಕರಣೆ ಚಳವಳಿ ಮಾಡಿದ್ದರು. ಸಿಪಾಯಿ ದಂಗೆಗೆ ರೈತರ ಚಳವಳಿಯು ಪೂರಕವಾಗಿ ನಿಂತಿತ್ತು. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೋಟ್ಯಂತರ ಜನರು ಪಾಲ್ಗೊಂಡಿದ್ದರು. ಬದ್ಧತೆ ಹೋರಾಟದಿಂದ ಅತಿಶಕ್ತ ಬ್ರಿಟಿಷ್ ಸಾಮ್ರಾಜ್ಯವನ್ನು ಮಣಿಸಬಹುದು ಎಂಬುದನ್ನು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸಾಧಿಸಿ ತೋರಿಸಿದರು. ಬಹುತೇಕ ಹೋರಾಟಗಾರರು ಅನಾಮಧೇಯರಾಗಿಯೇ ಉಳಿದರು. ಅಂಥ ಅನಾಮಧೇಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಮರ್ಪಿಸುತ್ತಿದ್ದೇನೆ ಎಂದು ಹೇಳಿದರು.

ಮೊದಲ ಪ್ರಧಾನಿ ಜವಾಹರ್‍ಲಾಲ್ ನೆಹರು ಸೇರಿದಂತೆ ಹಲವರ ಕೊಡುಗೆಗಳನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ನಿರ್ಧಾರಗಳನ್ನು ಶ್ಲಾಘಿಸಿದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಗಡಿಗೆ ಭೇಟಿ ಕೊಟ್ಟಿದ್ದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಧೈರ್ಯ ಮತ್ತು ಮಾನವೀಯ ನಿರ್ಧಾರಗಳನ್ನು ನೆನಪಿಸಿಕೊಂಡರು. ದೇಶದ ಸ್ವಾವಲಂಬನೆಗೆ ರೈತರ ಕೊಡುಗೆ ದೊಡ್ಡದು ಎಂದ ಅವರು ಗಡಿಯಲ್ಲಿ ಚಳಿಮಳೆಗಾಳಿಗೆ ಜಗ್ಗದೆ ಕಾಯುತ್ತಿರುವ ಯೋಧರ ಕರ್ತವ್ಯ ತತ್ಪರತೆಯನ್ನು ಸ್ಮರಿಸಿದರು.

ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆಯಬಹುದು ಎಂಬುದನ್ನು ಮಹಾತ್ಮಾ ಗಾಂಧೀಜಿ ಸಾಧಿಸಿ ತೋರಿಸಿದರು. ದೇಶದ ಆಂತರಿಕ ಭದ್ರತೆಗೆ ನಿಂತಿರುವ ಪೊಲೀಸರಿಗೆ ನಮನ. ದೇಶದ ಅಭಿವೃದ್ಧಿಗೆ ಅನೇಕರ ಕೊಡುಗೆ ಇದೆ. ವಿಜ್ಞಾನಿಗಳು, ರೈತರು, ಕೂಲಿಕಾರ್ಮಿಕರಿಗೆ ನನ್ನ ನಮನ ಎಂದು ಹೇಳಿದರು.

ಸ್ವಾತಂತ್ರ್ಯೋತ್ಸದ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಬೊಮ್ಮಾಯಿ ನೆನಪಿಸಿಕೊಂಡರು. ನಮ್ಮ ನಾಯಕರು, ಯಡಿಯೂರಪ್ಪನವರು. ಅವರ ದಕ್ಷ ನಾಯಕತ್ವ ಹಾಗೂ ಮಾರ್ಗದರ್ಶನದಲ್ಲಿ ಕೊವೀಡ್‍ನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ.

ಅಮೃತ ಮಹೋತ್ಸವದ ಯೋಜನೆಗಳನ್ನು ಹಿಂದಿನ ಸ್ವಾತಂತ್ರ್ಯ ಸಂದರ್ಭದಲ್ಲಿ ಇದೇ ವೇದಿಕೆ ಮೇಲೆ ನಿಂತು ಘೋಷಣೆ ಮಾಡಿದ್ದೆ. ಇವಾಗ ಅದೆಲ್ಲವನ್ನು ಮಾಡಿ ಮುಗಿಸಿದ್ದೇವೆ ಎಂದು ನುಡಿದರು.

ದೇಶಕ್ಕಾಗಿ ಯುವಕರು ಪ್ರಾಣ ಕೊಡುವ ಅವಶ್ಯಕತೆ ಇಲ್ಲ. ಬದಲಿಗೆ ನಿಮ್ಮ ಶ್ರಮ, ಜ್ಞಾನ, ಅಭಿಮಾನ, ಗೌರವ ಮತ್ತು ಶ್ರದ್ದೆ ಬಹಳ ಮುಖ್ಯ. ನಿಮ್ಮ ಬೆವರಿನ ಹನಿ ದೇಶ ಕಟ್ಟುವ ಕೆಲಸ ಮಾಡಬೇಕು. ನಾವೆಲ್ಲರೂ ಸ್ವಾವಲಂಬಿಗಳಾಗಬೇಕೆಂದು ಯುವಕರಿಗೆ ಕರೆ ಕೊಟ್ಟರು.

ದೇಶಕ್ಕೆ ಸ್ವತಂತ್ರವು ಸುಲಭವಾಗಿ ಬಂದಿಲ್ಲ. ಇದಕ್ಕಾಗಿ ಅನೇಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಸುಮಾರು 150 ವರ್ಷ ಸುದೀರ್ಘ ಇತಿಹಾಸ ಹೊಂದಿರುವ ಸ್ವತಂತ್ರ ಹೋರಾಟ ನಮ್ಮದು. ಸಾಕಷ್ಟು ತ್ಯಾಗ, ಬಲಿದಾನದೊಂದಿಗೆ ಆಸ್ತಿಪಾಸ್ತಿಯನ್ನು ಕಳೆದುಕೊಂಡು ಸ್ವತಂತ್ರ ಕೊಟ್ಟಿದ್ದಾರೆ. ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ ಇದು ನಮಗೆ ಅರ್ಥವಾಗುತ್ತದೆ ಎಂದು ಸಿಎಂ ನೆನಪಿಸಿದರು.

ದೇಶಕ್ಕೆ ಸ್ವತಂತ್ರ ಬಂದ ಬಳಿಕ ಎಲ್ಲರ ಹಸಿವನ್ನು ನೀಗಿಸಿದ ರೈತನಿಗೆ ನನ್ನ ಮೊದಲ ನಮಸ್ಕಾರ. ಪ್ರಾಣದ ಹಂಗನ್ನು ತೊರೆದು ದೇಶ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ನನ್ನ ಸಲಾಂ, ದೇಶದ ಆಂತರಿಕ ಸುರಕ್ಷತೆಯನ್ನು ಕಾಪಾಡುತ್ತಿರುವ ಪೊಲೀಸರು, ಶಿಕ್ಷಕರು, ಗುರುಗಳು, ವಿಜ್ಞಾನಿಗಳು, ಸಣ್ಣ ಮತ್ತು ಬೃಹತ್ ಕೈಗಾರಿಕೋದ್ಯಮಿಗಳಿಂದ ದೇಶ ಕಟ್ಟಲು ಸಾಧ್ಯವಾಗಿದೆ. ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ನಾವು ಚಿರ ಋಣಿ ಎಂದರು.

ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article