ದಿಢೀರ್ ದೆಹಲಿಗೆ ಹೋರಾಟ ಸಿಎಂ ಬೊಮ್ಮಾಯಿ

ಬೆಂಗಳೂರು, ಮೇ 20- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಢೀರನೆ ದೆಹಲಿಗೆ ತೆರಳುತ್ತಿರುವುದು ಸಂಪುಟ ವಿಸ್ತರಣೆ/ಪುನಾರಚನೆ ವಿಷಯಕ್ಕೆ ಮತ್ತೆ ರೆಕ್ಕೆ-ಪುಕ್ಕ ಬಂದಿದೆ. ಇಂದು ಮಧ್ಯಾಹ್ನ ನವದೆಹಲಿಗೆ ತೆರಳಲಿರುವ ಅವರು ಸಂಜೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಮಧ್ಯಾಹ್ನದವರೆಗೂ ಸಿಎಂ ದೆಹಲಿಗೆ ತೆರಳುವ ಕಾರ್ಯಕ್ರಮ ಇರಲಿಲ್ಲ. ಅವರ ಇಂದಿನ ಪ್ರವಾಸ ಪಟ್ಟಿಯಲ್ಲೂ ಇದು ಇರಲಿಲ್ಲ.
ಮೂಲಗಳ ಪ್ರಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕಳೆದ ಬಾರಿ ದೆಹಲಿಗೆ ತೆರಳಿದ್ದ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆ/ ಪುನಾರಚನೆಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. ಪಕ್ಷದ ಪ್ರಮುಖರ ಜತೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಅಮಿತ್ ಶಾ ಹೇಳಿದ್ದರು. ಈಗಾಗಲೇ ಬೊಮ್ಮಾಯಿ ಅವರು ಇದೇ ಭಾನುವಾರ ಸ್ವಿಡ್ಜರ್‍ಲ್ಯಾಂಡ್‍ನಲ್ಲಿರುವ ದಾವೋಸ್‍ಗೆ ತೆರಳುವ ಪ್ರವಾಸಪಟ್ಟಿ ಸಿದ್ಧಗೊಂಡಿತ್ತು.

ಸಿಎಂ ಜತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಅಧಿಕಾರಿಗಳ ನಿಯೋಗ ನಾಲ್ಕು ದಿನಗಳ ಕಾಲ ಸ್ವಿಡ್ಜರ್‍ಲ್ಯಾಂಡ್‍ನಲ್ಲಿ ನಡೆಯುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಈಗ ಏಕಾಏಕಿ ದೆಹಲಿಗೆ ತೆರಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮತ್ತೊಂದು ಮೂಲದ ಪ್ರಕಾರ ನಿನ್ನೆ ರಾತ್ರಿ ಬೊಮ್ಮಾಯಿ ಅವರು ಬೆಂಗಳೂರು ಪ್ರತಿನಿಧಿಸುವ ಆಪ್ತ ಸಚಿವರೊಬ್ಬರ ನಿವಾಸದಲ್ಲಿ ಸಭೆ ನಡೆಸಿದ್ದರು ಎನ್ನಲಾಗಿದೆ. ಕಳೆದ ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈಗ ದೆಹಲಿಗೆ ತೆರಳುತ್ತಿರುವುದು ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಭಾನುವಾರ ಬೆಳಗ್ಗೆ ದಾವೋಸ್‍ಗೆ ತೆರಳುವ ಮುನ್ನ ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆಯ ಮುಹೂರ್ತ ನಿಗದಿಯಾಗುವ ಸಂಭವವಿದೆ.