ಬೆಂಗಳೂರು, ಜ.29- ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಸೌಲಭ್ಯ ಒದಗಿಸುವುದು ಪ್ರತಿಯೊಂದು ಸರ್ಕಾರದ ಕರ್ತವ್ಯವೇ ಹೊರತು ಅದನ್ನು ಅಂತಃಕರಣದ ಸೇವೆ ಎಂದು ಭಾವಿಸಬೇಕಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಆರು ತಿಂಗಳ ಸಾಧನೆ ಕುರಿತು ವಿಶ್ಲೇಷಣೆ ನಡೆಸಿದರು.
ತಮ್ಮದು ಅಂತಃಕರಣದ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೊಂಡಿದ್ದಾರೆ. ಬಡವರ ವಿಷಯದಲ್ಲಿ ಕರುಣೆ ಅಥವಾ ಅಂತಃಕರಣ ತೋರಿಸಬೇಕಿಲ್ಲ. ಆರ್ಥಿಕ, ಸಾಮಾಜಿಕ ಅಸಮದಾನ ನಿವಾರಣೆ ಸರ್ಕಾರದ ಸಂವಿಧಾನ ಬದ್ಧ ಕರ್ತವ್ಯಗಳು. ರೈತರಿಗೆ, ಬಡವರಿಗೆ, ಮಹಿಳೆಯರಿಗೆ ಸೌಲಭ್ಯಗಳನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಅದನ್ನು ಕರುಣೆ ಎಂಬ ಭಾವನೆಯಿಂದ ಮಾಡಬೇಕಿಲ್ಲ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಆರು ತಿಂಗಳ ಸಾಧನೆ ಎಂದರೆ ಭ್ರಷ್ಟಾಚಾರ ಹೆಚ್ಚು ಮಾಡಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ಅವರಿಗೆ ಪತ್ರ ಬರೆದು ರಾಜ್ಯ ಸರ್ಕಾರ ಶೇ.40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ದೂರಿದ್ದಾರೆ. ನಾನು ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡಲ್ಲ ಎಂದು ಹೇಳಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ಭ್ರಷ್ಟಚಾರದ ವಿಷಯದಲ್ಲಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.
ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಎರಡುವರೆ ವರ್ಷಗಳ ಅವಧಿಯಲ್ಲೂ ಸಾಧನೆಗಳಾಗಿಲ್ಲ . ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಆರು ತಿಂಗಳ ಅವಧಿಯಲ್ಲೂ ಅಭಿವೃದ್ಧಿಯಾಗಿಲ್ಲ. ಭ್ರಷ್ಟಚಾರವೇ ಹೆಚ್ಚಾಗಿದೆ. ಬಿಟ್ ಕಾಯಿನ್ ಹಗರಣ ಕುರಿತು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವಾಗ ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್ ಕಾಲದಲ್ಲಿ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಚಿಕಿತ್ಸೆ, ಔಷಧಿಗಳಿಲ್ಲದೆ ಮೂರ್ನಾಲ್ಕು ಲಕ್ಷ ಜನ ಸತ್ತಿದ್ದಾರೆ. ಸರ್ಕಾರ 38 ಸಾವಿರ ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಲೆಕ್ಕ ಹೇಳಿದ್ದಾರೆ. ಸರ್ಕಾರ ಹೇಳಿದ ಲೆಕ್ಕದ ಪ್ರಕಾರವೂ ಪರಿಹಾರ ನೀಡಿಲ್ಲ. ಕೇಂದ್ರ 27 ಸಾವಿರ, ರಾಜ್ಯ ಸರ್ಕಾರ 13 ಸಾವಿರ ಕುಟುಂಬಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ ಎಂದು ವಿವರಿಸಿದರು.
ಕೊರೊನಾ ಕಾಲದಲ್ಲಿ ಬಹಳಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014-15ನೇ ಸಾಲಿಗಿಂತಲೂ ಈ ವರ್ಷ ದುಪ್ಪಟ್ಟು ಆತ್ಮಹತ್ಯೆಗಳಾಗಿವೆ. ಎನ್‍ಸಿಆರ್‍ಬಿ ಮಾಹಿತಿ ಪ್ರಕಾರ 1.53 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಉದ್ಯೋಗ ನಷ್ಟ, ಜೀವನ ನಿರ್ವಹಣೆ ಕಷ್ಟವೇ ಕಾರಣ. ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗುತ್ತಿವೆ. ಸರ್ಕಾರ ಯಾರ ನೆರವಿಗೂ ಬರುತ್ತಿಲ್ಲ. ಕೊರೊನಾ ಕಾಲದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸರಿಯಾಗಿ ಮಾಡಲು ಈ ಸರ್ಕಾರದಿಂದ ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.
ಬೋಮ್ಮಾಯಿ ಸರ್ಕಾರ ಕೃಷಿಕರ ಮಕ್ಕಳಿಗೆ ಶಿಷ್ಯವೇತನ ನೀಡಲು ರೈತ ನಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ನಮ್ಮ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾಸಿರಿ ಯೋಜನೆಯನ್ನು ನಿಲ್ಲಿಸಿದ್ದಾರೆ. ಒಂದು ಕಾರ್ಯಕ್ರಮ ನಿಲ್ಲಿಸಿ, ಮತ್ತೊಂದು ಯೋಜನೆ ಘೋಷಣೆ ಮಾಡುತ್ತಿದ್ದಾರೆ. ಪರಿಶಿಷ್ಠ ಸಮುದಾಯದ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಕಾಲಕ್ಕೆ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ಕಾರ್ಮಿಕ ಇಲಾಖೆಯಿಂದ 11 ಲಕ್ಷ ಕಾರ್ಮಿಕರಿಗೆ 237 ಕೋಟಿ ರೂಪಾಯಿ ಪರಿಹಾರ ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅದು ಸರ್ಕಾರದ ಹಣವಲ್ಲ. ಕಾರ್ಮಿಕರಿಂದ ಸಂಗ್ರಹಿಸಿದ ಹಣ ಅದು, ಅದನ್ನು ಖರ್ಚು ಮಾಡಿ ಸರ್ಕಾರದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕೃಷಿ ಸನ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ ಪ್ರತಿ ರೈತರಿಗೆ ಆರು ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅದಕ್ಕೆ ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ಸೇರಿಸಿಕೊಡುವುದಾಗಿ ಹೇಳಿದ್ದರು. ಈವರೆಗೂ ಕೇವಲ 2 ಸಾವಿರ ರೂಪಾಯಿ ಕಂತನ್ನು ಮಾತ್ರ ನೀಡಿದ್ದಾರೆ. ರಾಜ್ಯದಲ್ಲಿ 87 ಲಕ್ಷ ರೈತ ಕುಟುಂಬಗಳಿವೆ ಎಂದು ಕೃಷಿ ಇಲಾಖೆ ಸಮೀಕ್ಷೆಯೇ ಸ್ಪಷ್ಟ ಪಡಿಸಿದೆ. ಕೃಷಿ ಸನ್ಮಾನ್ ಯೋಜನೆಯಡಿ 50 ಲಕ್ಷ ಕುಟುಂಬಗಳನ್ನು ಮಾತ್ರ ಗುರುತಿಸಲಾಗಿದೆ. ಉಳಿದ 37 ಲಕ್ಷ ರೈತರನ್ನು ಕೈಬಿಟ್ಟಿದ್ದೇಕೆ ಎಂದು ಪ್ರಶ್ನಿಸಿದರು.
ಎನ್‍ಡಿಆರ್‍ಎಫ್ ಮಾರ್ಗಸೂಚಿಗಳನ್ನು ಮೀರಿ ಬೆಳೆ ನಷ್ಟಕ್ಕೆ ದುಪ್ಪಟ್ಟು ಪರಿಹಾರ ಕೊಟ್ಟಿರುವುದಾಗಿ ಹೇಳಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ನಾನು ಮಾತನಾಡುವಾಗ ಮೂರು ಪಟ್ಟು ಪರಿಹಾರ ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ. ಅದನ್ನು ಆಧರಿಸಿ ದುಪ್ಪಟ್ಟು ಹೆಚ್ಚಿಸಿದ್ದಾರೆ. ಆದರೆ ಅದರ ಬಾಬ್ತು ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ಎನ್‍ಡಿಆರ್‍ಎಫ್ ಮಾರ್ಗಸೂಚಿಗಳನ್ನು ಮೀರಿ ಪರಿಹಾರ ನೀಡಬಾರದು ಎಂದು ಯಾವ ನಿಯಮವೂ ಇಲ್ಲ. ನಮ್ಮ ಸರ್ಕಾರವಿದ್ದಾಗ ಭತ್ತದ ಬೆಳೆ ನಷ್ಟಕ್ಕೆ 78 ಸಾವಿರ ರೂಪಾಯಿ ಪರಿಹಾರ ನೀಡಿದ್ದೇವು ಎಂದು ಸ್ಮರಿಸಿಕೊಂಡರು.
ರೈತರ ಆದಾಯ ದುಪ್ಪಟ್ಟು ಮಾಡುವ ಪ್ರಧಾನಿ ಅವರ ಭರವಸೆ ಈಡೇರಿಸಿಲ್ಲ. ಮೋದಿ ಕೃಷಿಕರ ವಿಷಯದಲ್ಲಿ ಮೊಸಳೆ ಕಣ್ಣಿರು ಸುರಿಸಿದರು, ಮತ್ತೊಂದು ಕಡೆ ರೈತ ವಿರೋಧ ಕಾನೂನು ಜಾರಿಗೆ ತಂದರು. ಪ್ರತಿಭಟನೆಗೆ ಹೆದರಿ ಅದನ್ನು ವಾಪಾಸ್ ಪಡೆದರು. ರಾಜ್ಯದಲ್ಲೂ ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಅದನ್ನು ವಾಪಾಸ್ ಪಡೆದಿಲ್ಲ. ಎಪಿಎಂಸಿಗಳಿಗೆ ನಿಧಾನ ವಿಷ ನೀಡಿ ಕೊಲ್ಲಲಾಗುತ್ತಿದೆ. ಅಗತ್ಯ ಸೇವೆಗಳ ಕಾಯ್ದೆಗೆ ತಿದ್ದುಪಡಿ ತಂದು ದಲ್ಲಾಳಿಗಳು ಎಷ್ಟು ಬೇಕಾದರು ದಾಸ್ತಾನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಭತ್ತ, ರಾಗಿ ಖರೀದಿಗೆ ಕಠಿಣ ನಿರ್ಬಂಧಗಳನ್ನು ಹಾಕಿ ತೊಂದರೆ ನೀಡಲಾಗುತ್ತಿದೆ. ಕೃಷಿ ಉತ್ಪನ್ನಗಳ ಖರೀದಿಗೆ ಸ್ಪಷ್ಟ ಕಾನೂನು ಮಾಡಬೇಕು, ಬೆಂಬಲ ಬೆಲೆ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ಮೇಕ್ ಇನ್ ಇಂಡಿಯಾ ಎಂದು ಹೇಳಿಕೊಳ್ಳುತ್ತಿರುವ ಪ್ರಧಾನ ಮಂತ್ರಿ ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಪ್ರಸಕ್ತ ವರ್ಷ 7.5 ಲಕ್ಷ ಕೋಟಿ ರೂಪಾಯಿಗಳ ಪದಾರ್ಥಗಳು ಚೀನಾದಿಂದ ಆಮದಾಗಿವೆ, ನಮ್ಮಿಂದ ವಿದೇಶಗಳಿಗೆ ಒಂದುವರೆ ಲಕ್ಷ ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ರಫ್ತು ಮಾಡಲಾಗಿದೆ ಎಂದು ಅಂಕಿ ಅಂಶಗಳನ್ನು ನೀಡಿದರು.
ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗಿದೆ. ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿ ಕಡಿತ ಮಾಡಲಾಗಿದೆ. ಶ್ರೀಮಂತರಿಗೆ ಹೆಚ್ಚು ತೆರಿಗೆ ಹಾಕಿ, ಬಡವರಿಗೆ ಕಡಿಮೆ ತೆರಿಗೆ ಹಾಕಿ ಎಂಬ ನಿಯಮವನ್ನು ಮೋದಿ ಅವರ ಸರ್ಕಾರ ತಿರುವುಮುರವು ಮಾಡಿದೆ ಎಂದು ಅಸಮದಾನ ವ್ಯಕ್ತ ಪಡಿಸಿದರು.
ಕೇಂದ್ರ ಮತ್ತು ರಾಜ್ಯ ಎರಡು ಕಡೆ ಬಿಜೆಪಿ ಸರ್ಕಾರವೇ ಅಕಾರದಲ್ಲಿದೆ, ಕೃಷ್ಣ ನ್ಯಾಯಾೀಕರಣದ ತೀರ್ಪು ಪ್ರಕಟವಾಗಿ ಎಷ್ಟು ದಿನವಾಗಿದೆ. ಈವರೆಗೂ ಯಾಕೆ ತೀರ್ಪಿನ ಅಸೂಚನೆ ಜಾರಿಯಾಗಿಲ್ಲ. ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಉಪ ಯೋಜನೆಗಳ ಮೂಲಕ ಹೆಚ್ಚಿನ ಅನುದಾನ ನೀಡಲಾಗಿತ್ತು. ಈ ಸರ್ಕಾರ ಹಣವನ್ನು ನೀಡಿಲ್ಲ, ನಿಗದಿ ಮಾಡಿರುವ ಹಣವನ್ನು ಖರ್ಚು ಮಾಡದೆ ದಲಿತರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.
ಪಂಜಾಬ್ ಮಾದರಿಯಲ್ಲಿ ಕರ್ನಾಟಕದ ನಾಯಕತ್ವ ಕುರಿತು ಚರ್ಚೆ ಮಾಡುವ ಅಗತ್ಯ ಇಲ್ಲ. ಇಲ್ಲಿ ಚುನಾವಣೆಗೆ ಇನ್ನೂ ಸಮಯ ಇದೆ. ಸದ್ಯಕ್ಕೆ ರಾಜ್ಯ ನಾಯಕತ್ವದ ಬಗ್ಗೆ ಚರ್ಚೆ ಅನಗತ್ಯ ಎಂದರು.
