ಮಂಡ್ಯ, ಜು.19- ಕೃಷ್ಣರಾಜಸಾಗರ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಬಾಗಿನ ಸಮರ್ಪಿಸಲಿದ್ದಾರೆ.
2009 ಹಾಗೂ 2018ರ ಬಳಿಕ 2022ರ ಜುಲೈ ತಿಂಗಳಿನಲ್ಲೇ ಕೆಆರ್‌ಎಸ್ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದೆ. ಕಳೆದ ವರ್ಷ ಅಕ್ಟೋಬರ್ 29ರಂದು ಜಲಾಶಯ ಭರ್ತಿಯಾಗಿತ್ತು. ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಅಬ್ಬರದಿಂದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
2009ರಲ್ಲಿ ಜು.24ರಂದು ಜಲಾಶಯ ಭರ್ತಿಯಾದರೆ, 2018ರ ಜು.20ರಂದು ಅಣೆಕಟ್ಟು ಭರ್ತಿಯ ಹಂತ ತಲುಪಿತ್ತು. ನಾಳೆ ಬೆಳಗ್ಗೆ 11 ಗಂಟೆಗೆ ಹೆಚ್‍ಎ ಎಲ್ ವಿಮಾನ ನಿಲ್ದಾಣದಿಂದ ಮೈಸೂರಿಗೆ ಆಗಮಿಸುವ ಸಿಎಂ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಬಳಿಕ ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಲಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲೆಯ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಮಂಡ್ಯ ಸಂಸದರಾದ ಸುಮಲತಾ ಅಂಬರೀಷ್, ಪ್ರತಾಪ್ ಸಿಂಹ ಸೇರಿದಂತೆ ಮಂಡ್ಯ ಜಲಾಶಯಕ್ಕೆ ತೆರಳಿ ಮುಖ್ಯಮಂತ್ರಿಗಳು ಬಾಗಿನ ಅರ್ಪಣೆ ಮಾಡಲಿದ್ದಾರೆ. ಸತತ ಎರಡನೇ ಬಾರಿಗೆ ಸಿಎಂ ಬೊಮ್ಮಾಯಿ ಕೆಆರ್‍ಎಸ್‍ಗೆ ಬಾಗಿನ ಸಮರ್ಪಿಸುತ್ತಿರುವುದು ವಿಶೇಷವಾಗಿದೆ.