ಬೆಂಗಳೂರು,ಫೆ.26- ರಾಜ್ಯ ವಿಧಾನಸಭೆ ಚುನಾವಣೆಗೆ 14 ತಿಂಗಳುಗಳು ಉಳಿದಿರುವ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದ ಮಧ್ಯೆ ಜನಸ್ನೇಹಿ ಬಜೆಟ್ ಮಂಡಿಸುವ ಅನಿವಾರ್ಯತೆಯಿದ್ದು, ಬಿಬಿಎಂಪಿ ಚುನಾವಣೆಯೂ ಹೊಸ್ತಿಲಲ್ಲಿರುವುದರಿಂದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಆಯವ್ಯಯದಲ್ಲಿ ರಾಜಧಾನಿ ಬೆಂಗಳೂರಿಗೆ ಹೆಚ್ಚಿನ ಕೊಡುಗೆ ನೀಡುವ ಲೆಕ್ಕಾಚಾರದಲ್ಲಿದ್ದಾರೆ.
2023ರ ವಿಧಾನಸಭೆ ಚುನಾವಣೆ ಹಿನ್ನೆಲೆ 2022-23ರ ಬಜೆಟ್ ಆಡಳಿತಾರೂಢ ಬಿಜೆಪಿಗೆ ನಿರ್ಣಾಯಕವಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಚುನಾವಣಾ ಕೇಂದ್ರೀಕೃತ ಆಯವ್ಯಯವಾಗುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ಈ ಬಾರಿ ಜನಸ್ನೇಹಿ, ಜನರಿಗೆ ಹೊರೆಯಾಗದ ,ಜನರಿಗೆ ಪ್ರಿಯವಾಗುವಂತಹ ಬಜೆಟ್ ಮಂಡಿಸುವ ಕಸರತ್ತಿನಲ್ಲಿ ಬೊಮ್ಮಾಯಿ ಇದ್ದಾರೆ.
# ಬೆಂಗಳೂರಿಗೆ ಹೆಚ್ಚಿನ ಕೊಡುಗೆ:
ಈ ಬಾರಿಯ ಬಜೆಟ್‍ನಲ್ಲಿ ಬೆಂಗಳೂರಿಗೆ ಹೊಸ ಯೋಜನೆಗಳನ್ನು ನೀಡುವ ಅನಿ ವಾರ್ಯತೆಯೂ ಇದೆ. ಬಿಜೆಪಿಗೆ ವಿಧಾನಸಭೆ ಚುನಾವಣಾ ಲೆಕ್ಕಾಚಾರದಲ್ಲಿ ಬೆಂಗಳೂರು ನಗರ ಅತಿ ಮುಖ್ಯ ಚುನಾವಣಾ ಕಣವಾಗಿದೆ. ಹೀಗಾಗಿ ಸಿಎಂ ಬೊಮ್ಮಾಯಿ ತಮ್ಮ ಬಜೆಟ್‍ನಲ್ಲಿ ಬೆಂಗಳೂರಿಗೆ ಹೆಚ್ಚಿನ ಕೊಡುಗೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಬೆಂಗಳೂರಿನ ಬಿಜೆಪಿ ಶಾಸಕರ ನಿಯೋಗ ಸಿಎಂರನ್ನು ಭೇಟಿಯಾಗಿ ಬಜೆಟ್‍ನಲ್ಲಿ ಬೆಂಗಳೂರಿಗೆ ಹೆಚ್ಚಿನ ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಿಗರಿಗೆ ಸಹಕಾರಿಯಾಗುವ ಕೆಲ ಮಹತ್ವದ ಯೋಜನೆಗಳನ್ನು ಘೋಷಿಸು ವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ, ಬೇಡಿಕೆಗಳ ಪಟ್ಟಿಯನ್ನೂ ಸಲ್ಲಿಕೆ ಮಾಡಿದ್ದಾರೆ.
ಬಿಬಿಎಂಪಿ ಚುನಾವಣೆ ಹಿನ್ನೆಲೆ ಬೆಂಗಳೂರಿನ ಬಹು ನಿರೀಕ್ಷಿತ ಯೋಜನೆಗಳನ್ನು ಘೋಷಿಸು ವಂತೆ ಶಾಸಕರು ಮನವಿ ಮಾಡಿದ್ದಾರೆ. ಸಿಎಂ ಅದಕ್ಕೆ ಸಕಾರಾತ್ಮಕವಾಗಿನೆ ಸ್ಪಂದಿಸಿದ್ದಾರೆ.
# ಬೆಂಗಳೂರು ಲೆಕ್ಕಾಚಾರ ಏನು?:
ಸಿಎಂ ಬೊಮ್ಮಾಯಿ ಬೆಂಗಳೂರಿಗೆ ಹೆಚ್ಚಿನ ಕೊಡುಗೆ ನೀಡುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಪ್ರಮುಖವಾಗಿ ಬೆಂಗಳೂರಿಗರ ಬಹು ವರ್ಷಗಳ ಬೇಡಿಕೆಯಾದ ಬಿ ಖಾತೆ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸುವ ಸಂಬಂಧ ಈಗಾಗಲೇ ಸರ್ಕಾರ ಮಟ್ಟದಲ್ಲಿ ಸಭೆ ನಡೆಸಿದ್ದು, ಬಜೆಟ್‍ನಲ್ಲಿ ಸಿಎಂ ಬೊಮ್ಮಾಯಿ ಈ ಬಗ್ಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಗರದಲ್ಲಿ 6 ಲಕ್ಷಕ್ಕೂ ಅಧಿಕ ಬಿ ಖಾತಾ ಹೊಂದಿರುವ ಆಸ್ತಿಗಳಿದ್ದು, ಅವುಗಳನ್ನು ಎ ಖಾತಾ ಮಾಡುವ ಚಿಂತನೆ ಇದೆ. ಇದರಿಂದ ಸರ್ಕಾರಕ್ಕೆ 2000 ಕೋಟಿ ರೂ. ಆದಾಯ ಸಂಗ್ರಹವಾಗುವುದರ ಜೊತೆಗೆ ಬಿ ಖಾತಾ ಆಸ್ತಿದಾರರನ್ನು ತನ್ನತ್ತ ಸೆಳೆಯುವ ಯೋಚನೆ ಬಿಜೆಪಿ ಸರ್ಕಾರದ್ದು, ಇದು ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚಿನ ರಾಜಕೀಯ ಲಾಭ ತರಲಿದೆ.
ಸಕ್ಷಮ ಪ್ರಾಧಿಕಾರಿಗಳಿಂದ ನಕ್ಷೆ ಮಂಜೂರಾತಿಗೆ ಅನುಮೋದನೆ ಪಡೆಯದೆ, ಭೂಪರಿವರ್ತನೆ ಮಾಡಿಸದೆಯೇ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಅವೈಜ್ಞಾನಿಕವಾಗಿ ಎಲ್ಲೆಡೆ ಅನಧಿಕೃತ ಬಡಾವಣೆಗಳು ತಲೆಯೆತ್ತಿದೆ. ಹಾಗಾಗಿಯೇ, ಅನುಮೋದನೆ ಪಡೆಯದ ಬಡಾವಣೆಗಳಲ್ಲಿನ ನಿವೇಶನಗಳು ಮತ್ತು ಕಟ್ಟಡ ನಿರ್ಮಿಸಿರುವ ನಿವೇಶನಗಳಿಗೆ ಎ ಖಾತಾ ನೀಡುವ ಬದಲಿ ಬಿ ಖಾತಾ ನೀಡಲಾಗುತ್ತಿದೆ. ಇವುಗಳಿಗೆ ಎ ಖಾತೆಯನ್ನಾಗಿ ಪರಿವರ್ತಿಸಲು ಸರ್ಕಾರ ಚಿಂತನೆ ನಡೆಸಿದೆ.
ಕಟ್ಟಡ ಬೈಲಾ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಪ್ರಕರಣಗಳು ಇದರ ವ್ಯಾಪ್ತಿಯಲ್ಲಿ ಬರಲ್ಲ. ಎ ಖಾತಾ ನಿವೇಶನದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದರೂ ಅದು ಅಕ್ರಮ ಕಟ್ಟಡ ಎನಿಸಿಕೊಳ್ಳುತ್ತದೆ. ಈ ಉಲ್ಲಂಘನೆಗಳನ್ನು ಅಕ್ರಮ ಸಕ್ರಮ ಮಾಡುವ ಯೋಜನೆ ಸುಪ್ರೀಂಕೋರ್ಟ್ ಅಂಗಳದಲ್ಲಿದೆ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೂ ಅಕ್ರಮ ಸಕ್ರಮಕ್ಕೂ ಸಂಬಂಧ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಟಿಡಿಆರ್ ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ರಸ್ತೆ ಅಗಲೀಕರಣಕ್ಕೆ ಮತ್ತು ಸಾರ್ವಜನಿಕ ಸ್ವತ್ತುಗಳು ಮೌಲ್ಯಕ್ಕೆ ತಕ್ಕುದಾದ ಟಿಡಿಆರ್ ಕೊಡುವ ನೀತಿಯನ್ನು ಬಜೆಟ್‍ನಲ್ಲಿ ಘೋಷಿಸುವ ಸಾಧ್ಯತೆ ಇದೆ.
ಈಗಾಗಲೇ ವೃದ್ಧರಿಗೆ ಮತ್ತು ಶಾಲೆ,ಕಾಲೇಜು ಮಕ್ಕಳಿಗೆ ಬಿಎಂಟಿಸಿ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿದ್ದು, ಅದೇ ರೀತಿ ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಪಾಸ್‍ಗಳನ್ನು ವಿತರಿಸುವ ಬಗ್ಗೆಯೂ ಚರ್ಚೆ ನಡೆದಿದೆ.
ಬೆಂಗಳೂರು ಉಪನಗರ ರೈಲು ಯೋಜನೆಗೆ ಹೆಚ್ಚಿನ ಅನುದಾನವನ್ನು ನೀಡುವ ಬಗ್ಗೆನೂ ಸಿಎಂ ಬಜೆಟ್‍ನಲ್ಲಿ ಘೋಷಿಸುವ ಸಾಧ್ಯತೆ ಇದೆ. ನಮ್ಮ ಮೆಟ್ರೋ ವಿಸ್ತರಣೆ, ಮೇಲ್ಸೇತುವೆ, ಅಂಡರ್ ಪಾಸ್‍ಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಸಿಎಂ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದರ ಜೊತೆಗೆ ಪೆರಿಫರಲ್ ರಿಂಗ್ ರಸ್ತೆಗೆ ಹೆಚ್ಚಿನ ಅನುದಾನ ನೀಡಿ ಯೋಜನೆ ಶೀಘ್ರ ಅನುಷ್ಠಾನದ ಘೋಷಣೆ ಮಾಡುವ ಸಾಧ್ಯತೆ ಇದೆ.
