ಬೆಂಗಳೂರು,ಸೆ.15- ಬಿಬಿಎಂಪಿಯ ಜಂಟಿ ಆಯುಕ್ತರ ಹುದ್ದೆಯಲ್ಲಿ ಎರವಲು ಸೇವೆ ಮೇಲೆ ಕೆಲಸ ಮಾಡುತ್ತಿರುವವರನ್ನು ವಾಪಾಸ್ ಕಳುಹಿಸಿ, ಕೆಎಎಸ್ ಮತ್ತು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರು ಪ್ರಶ್ನೆ ಕೇಳಿ, ಬೆಂಗಳೂರು ನಗರ
ಜಿಲ್ಲಾ ದಕ್ಷಿಣ ತಾಲೂಕು ಪುಟ್ಟೇನಹಳ್ಳಿಯಲ್ಲಿ ಏಕ ನಿವೇಶನಕ್ಕೆ ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದಲ್ಲಿ ನಿಯಮ ಬಾಹಿರವಾಗಿ ಅಕ್ರಮ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಈ ಹಿಂದೆ ಪ್ರಶ್ನೆ ಕೇಳಿದಾಗ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಹೇಳಿದ್ದರು.
ನಾನು ಆರೋಪ ಮಾಡಿದಾಗ ಆ ಅಧಿಕಾರಿಗಳು ಸೇವೆಯಲ್ಲಿದ್ದರು. ಈಗ ನಿವೃತ್ತರಾಗಿದ್ದಾರೆ. ಈಗ ನೀಡಿರುವ ಉತ್ತರದಲ್ಲಿ ಅಧಿಕಾರಿಗಳಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದೆ. ಈ ಗೊಂದಲ ಏಕೆ, ತಪ್ಪಿತಸ್ಥರನ್ನು ಅಮಾನತುಗೊಳಿಸುವಂತೆ ಶಿಫಾರಸ್ಸು ಮಾಡಿ ಎಂದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು, ಜಂಟಿ ಆಯುಕ್ತರು ಸೇರಿದಂತೆ ಇತರರು ತಪ್ಪು ಮಾಡಿರುವುದು ಆಂತರಿಕ ತನಿಖೆಯಲ್ಲಿ ಸಾಬೀತಾಗಿದೆ. ಜಂಟಿ ಆಯುಕ್ತರು ಸೇರಿ ಹಲವರು ತಪ್ಪು ಮಾಡಿದ್ದಾರೆ ಎಂದು ಗುರುತಿಸಲಾಗಿದೆ. ನಿವೃತ್ತರಾಗಿದ್ದರೂ ಅವರನ್ನು ಬಿಡುವುದಿಲ್ಲ, ಕ್ರಮ ತೆಗೆದುಕೊಳ್ಳಲು ಎರಡು ವರ್ಷ ಕಾಲಾವಕಾಶ ಇದೆ. ಅಷ್ಟರಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.
ಜೆಡಿಎಸ್ನ ಕೆ.ಎ.ತಿಪ್ಪೇಸ್ವಾಮಿ, ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿ ಹತ್ತು ವರ್ಷದಿಂದ ನಡೆಯುತ್ತಿದೆ. ಜಮೀನು ಕಳೆದುಕೊಂಡವರು ಅಭಿವೃದ್ಧಿ ಪಡಿಸಿದ ನಿವೇಶನಕ್ಕಾಗಿ 10 ವರ್ಷದಿಂದ ಕಾಯುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾದ ಜವರೇಗೌಡರಿಗೆ ಈವರೆಗೂ ನಿವೇಶನ ನೀಡಿಲ್ಲ. ಇನ್ನೂ ಜನ ಸಾಮಾನ್ಯರ ಕತೆ ಏನು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ನಾಡ ಪ್ರಭು ಕೆಂಪೇಗೌಡ ಬಡಾವಣೆಯನ್ನು ಸಂಪೂರ್ಣ ಅಭಿವೃದ್ಧಿ ಪಡಿಸಿ, ವಸತಿ ಯೋಜನೆಗಾಗಿ ಜಮೀನು ಕಳೆದುಕೊಂಡ ಸ್ಥಳೀಯರಿಗೆ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ನೀಡುವುದಾಗಿ ತಿಳಿಸಿದರು.
2010ರಿಂದ ಬಡಾವಣೆ ಕೆಲಸ ನಡೆಯುತ್ತಿದೆ. ಯಾರ ಕಾಲದಲ್ಲಿ ವಿಳಂಭವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಬಡಾವಣೆ ಸಮಗ್ರ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಚರ್ಚೆಸಿ ಕ್ರಮ ಕೈಗೊಳ್ಳಲಾಗುವುದು. ಜವರೇಗೌಡರಿಗೆ ನಿವೇಶನ ನೀಡಬೇಕಿದ್ದ ಸರ್ವೇ ನಂಬರ್8ರ ಸೂಳೆಕೆರೆ ಜಾಗ ತಗಾದೆ ನ್ಯಾಯಾಲಯದಲ್ಲಿದೆ. ರೈತರು ಒಪ್ಪಿಕೊಂಡರೆ ಸರ್ವೇ ನಂಬರ್ 63ರಲ್ಲಿ ನಿವೇಶನ ನೀಡಲು ಸರ್ಕಾರ ಸಿದ್ಧವಿದೆ ಎಂದರು.
ಬಿಜೆಪಿಯ ಡಿ.ಎಸ್.ಅರುಣ್ ಪ್ರಶ್ನೆ ಕೇಳಿ, ಪಂಚಾಯತ್ ಗಳಿಗೆ 20ತಿಂಗಳಿನಿಂದ ಚುನಾವಣೆಯಾಗಿಲ್ಲ, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಕ್ರೀಡೆಗೆ ಸ್ಥಳೀಯ ಸಂಸ್ಥೆಗಳ ಆದಾಯದಲ್ಲಿ ಶೇ.2ರಷ್ಟನ್ನು ಮೀಸಲಿಡಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಉತ್ತರಿಸಿದ ಮುಖ್ಯಮಂತ್ರಿಯವರು, ಕರ್ನಾಟಕ ಸೀಮಾ ನಿಗದಿ ಆಯೋಗ ವರದಿ ಬಳಿಕ ಪಂಚಾಯತ್ ಚುನಾವಣೆಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಕ್ರೀಡೆಗೆ ಸರ್ಕಾರ ಬೆಂಬಲ ನೀಡಲಿದೆ. ಕಬಡ್ಡಿ, ಖೋ ಖೋ, ಕುಸ್ತಿ, ಮಲ್ಲಕಂಬ, ಕಂಬಳದಂತಹ ಕ್ರೀಡೆಗಳನ್ನು ಗ್ರಾಪಂ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನಡೆಸಲಾಗುವುದು. ಈ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಕ್ರೀಡೆಗಳನ್ನು ಇದೇ ತಿಂಗಳು ಆರಂಭಿಸಬೇಕಿತ್ತು. ಮಳೆಯಿಂದ ವಿಳಂಬವಾಗಿದೆ. ಇನ್ನೆರಡು ತಿಂಗಳಲ್ಲಿ ಗ್ರಾಮೀಣ ಕ್ರೀಡೆಗಳು ನಡೆಯಲಿವೆ ಎಂದರು.
ನಾಗರಾಜ್ ಯಾದವ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು, ಯಲಹಂಕ – ಕೋಗಿಲು ಲಿಂಕ್ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.