ಬೆಂಗಳೂರು,ಫೆ.18- ವಿಧಾನಸಭೆ ಚುನಾವಣೆಗೆ ದಿನಗಣನೆಗಳು ಆರಂಭವಾಗಿವೆ. ರಾಜ್ಯ ಸರ್ಕಾರ ಬಜೆಟ್ ಮಂಡಿಸಿ ಆಗಿದೆ, ಅದರಲ್ಲಿ ಹೆಚ್ಚು ಅಗ್ಗದ ಪ್ರಚಾರ ಪಡೆಯುವ ಯೋಜನೆಗಳಿಲ್ಲದಿರುವ ಜೊತೆಗೆ, ಬಿಜೆಪಿ ನಾಯಕರ ವಿವಾದಿತ ಹೇಳಿಕೆಗಳು, ಕೇಸರಿ ಪಕ್ಷದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಅಭ್ಯರ್ಥಿಗಳ ಗೊಂದಲ ಕಾಂಗ್ರೆಸ್ ಪಾಳೆಯದಲ್ಲಿನ ಹುಮ್ಮಸ್ಸನ್ನು ಹೆಚ್ಚಿಸಿವೆ.
ಚುನಾವಣೆ ವರ್ಷವಾಗಿದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುವ ಬಜೆಟ್‍ನಲ್ಲಿ ಭಾರೀ ಅಗ್ಗದ ಪ್ರಚಾರ ಪಡೆಯುವ ಯೋಜನೆಗಳಿರುತ್ತವೆ ಎಂದು ಕಾಂಗ್ರೆಸ್ ನಿರೀಕ್ಷಿಸಿತ್ತು. ಕೈ ಪಾಳೇಯದ ಪ್ರಜಾಧ್ವನಿ ಯಾತ್ರೆಯಲ್ಲಿ ಈಗಾಗಲೇ ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಮನೆಯ ಯಜಮಾನಿಗೆ ತಲಾ ಮಾಸಿಕ ತಲಾ 2 ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮೀ ಯೋಜನೆಯನ್ನು ಮೀರುವ ಕಾರ್ಯಕ್ರಮಗಳನ್ನು ಬಜೆಟ್‍ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಬಹುದು ಎಂಬ ಆತಂಕ ಕಾಂಗ್ರೆಸ್‍ನಲ್ಲಿದ್ದವು.
ಆದರೆ ಬಿಜೆಪಿ ಹೈಕಮಾಂಡ್‍ನ ಸೂಚನೆಯ ಮೇರೆ ಮುಖ್ಯಮಂತ್ರಿಯವರು ಅಗ್ಗದ ಪ್ರಚಾರದ ಯೋಜನೆಗಳ ಬೆನ್ನು ಹತ್ತದೆ ಆರ್ಥಿಕವಾಗಿ ಸಾಧುವಾದ ಕಾರ್ಯಕ್ರಮಗಳಿಗಷ್ಟೆ ಒತ್ತು ನೀಡಿದ್ದಾರೆ. ಅಲ್ಲಲ್ಲಿ ಒಂದೆರಡು ಉಚಿತ ಕೊಡುಗಳಿವೆಯಾದರೂ ಬೊಕ್ಕಸಕ್ಕೆ ಭಾರಿ ಹೊರೆಯಾಗುವಂತ ಕಾರ್ಯಕ್ರಮಗಳಿಲ್ಲ. ಇದು ಕಾಂಗ್ರೆಸ್‍ನ ರಣೋತ್ಸಾಹವನ್ನು ಹೆಚ್ಚಿಸಿದೆ.
ಬಡವರ ಮನೆ ನಿರ್ಮಾಣದಲ್ಲಿ ಹಗರಣ : ಮಾಜಿ ಅಧಿಕಾರಿ ಅರೆಸ್ಟ್
ಬಜೆಟ್‍ನಲ್ಲಿ ಕೃಷಿ ಸಾಲ ಮನ್ನಾ, ನಿರುದ್ಯೋಗ ಭತ್ಯೆ, ಗ್ಯಾಸ್ ಸಬ್ಸಿಡಿ, ಎನ್‍ಪಿಎಸ್ ಬದಲಾಗಿ ಒಪಿಎಸ್ ಜಾರಿಯಂತಹ ಭಾರೀ ಯೋಜನೆಗಳನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಬಹುದು. ಒಂದು ವೇಳೆ ಆ ತರಹದ ಭರವಸೆಗಳು ಕಂಡು ಬಂದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯ ಮೂಲಕ ಯಾವ ರೀತಿ ಪ್ರತಿತಂತ್ರ ಎಣೆಯಬೇಕು ಎಂಬ ತಯಾರಿಯಲ್ಲಿತ್ತು.
ಅದಕ್ಕಾಗಿಯೇ ನಿನ್ನೆ ಕಿವಿಯ ಮೇಲೆ ಹೂವನ್ನಿಟ್ಟುಕೊಂಡು ಬಜೆಟ್ ಕಲಾಪದಲ್ಲಿ ಭಾಗವಹಿಸಿತ್ತು. ಮುಂದಿನ ದಿನಗಳಲ್ಲಿ ನಡೆಯುವ ಚರ್ಚೆಯಲ್ಲಿ ಹಣೆ ಮೂರು ನಾಮ ಹಾಕಿಕೊಳ್ಳುವುದು, ಬೂಟಾಟಿಕೆಯ ಬಜೆಟ್ ಎಂಬುದನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಅಗತ್ಯವಾದ ಎಲ್ಲಾ ಪ್ರಚಾರ ತಂತ್ರಗಳನ್ನು ಅನುಸರಿಸುವ ಕಾರ್ಯಯೋಜನೆ ಕೈ ಪಾಳೆಯದಲ್ಲಿ ನಡೆದಿತ್ತು.
ಆದರೆ ವಿಪಕ್ಷಗಳ ಯುದ್ಧೋತ್ಸಾಹಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಣ್ಣೀರು ಎರಚಿದ್ದಾರೆ. ಆರ್ಥಿಕ ಶಿಸ್ತಿಗೆ ಆದ್ಯತೆ ನೀಡಿ, ರೆವಿನ್ಯೂ ಸರ್‍ಪ್ಲಸ್ ಬಜೆಟ್ ಮಂಡನೆ ಮಾಡಿ ಆರ್ಥಿಕ ತಜ್ಞರಿಗೆ ಸಡ್ಡು ಹೊಡೆದಿದ್ದಾರೆ. ಈಗ ಚರ್ಚೆಯ ಮೇಲೆ ಬಜೆಟ್‍ನ ಲೋಪಗಳನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಲಿದೆ. ಸಾಧಾರಣ ಚರ್ಚೆಯಲ್ಲಿ ಬಜೆಟ್ ಕಲಾಪ ಮುಕ್ತಾಯಗೊಳ್ಳುವ ನಿರೀಕ್ಷೆಗಳಿವೆ.
ಮುಂದಿನ ಆರ್ಥಿಕ ವರ್ಷದಲ್ಲಿ 77 ಸಾವಿರ ಕೋಟಿ ರೂಪಾಯಿ ಸಾಲ ರೂಪದಲ್ಲಿ ಸಂಪನ್ಮೂಲ ಕ್ರೋಢಿಕರಿಸುವುದಾಗಿ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ. ಅದರಲ್ಲಿ ಕೇಂದ್ರ ಸರ್ಕಾರ ಜಿಎಸ್‍ಟಿ ಪರಿಹಾರದ ಬದಲಿಗೆ, ಬಡ್ಡಿ ರಹಿತ ಸಾಲ ಪಡೆಯಲು ಕಲ್ಪಿಸಲಾಗಿರುವ ಸೌಲಭ್ಯವೂ ಸೇರಿದೆ. ಹಾಗಾಗಿ ಸಾಲದಿಂದ ಮುಂದಿನ ದಿನದಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲ ಎಂಬ ಸಮರ್ಥನೆ ಬಿಜೆಪಿ ಪಾಳೇಯದಲ್ಲಿ ಸಿದ್ದಗೊಂಡಿದೆ.
ಮುಂದಿನ ಐದು ದಿನಗಳ ಕಾಲ ಬಜೆಟ್ ಮೇಲೆ ವಿಶ್ಲೇಷಣೆ ನಡೆಯಲಿದೆ. ಚುನಾವಣೆ ತಯಾರಿ, ಕ್ಷೇತ್ರ ಪ್ರವಾಸ ಬದಿಗಿಟ್ಟು ಶಾಸಕರು ಕಲಾಪದಲ್ಲಿ ಭಾಗವಹಿಸುವ ಶಾಸಕರಿಗೆ ಬಜೆಟ್ ನಿರೀಕ್ಷಿಸಿದಂತೆ ಬ್ರಹ್ಮಾಸ್ತ್ರವನ್ನೇನು ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಪಾಳೇಯ ತನ್ನ ಪ್ರಣಾಳಿಕೆ ಮೂಲಕ ಆಡಳಿತಾ ರೂಢ ಪಕ್ಷದ ಮೇಲೆ ಸವಾರಿ ಮಾಡಲು ತಯಾರಿ ನಡೆಸಿದೆ.
ಸರ್ಕಾರ ನಡೆಸುತ್ತಿರುವ ಬಿಜೆಪಿ ಬಜೆಟ್ ಮಂಡಿಸಿರುವುದರಿಂದ ತನ್ನ ಪ್ರಣಾಳಿಕೆಯಲ್ಲಿ ಹೊಸದಾಗಿ ಪ್ರಕಟಿಸುವ ಘೋಷಣೆಗಳು ಹೆಚ್ಚು ಪ್ರಚಲಿತವಾಗಿರುವುದಿಲ್ಲ. ಬಜೆಟ್‍ನಲ್ಲಿ ಮಾಡಲಾಗದಿದ್ದನ್ನು ಪ್ರಣಾಳಿಕೆಯಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡುವುದು ಅಷ್ಟೇನು ಪರಿಣಾಮಕಾರಿಯಾಗುವುದಿಲ್ಲ. ಪ್ರತಿಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್‍ಗೆ ಈಗ ಸಂಕ್ರಮಣದ ಕಾಲವಾಗಿದ್ದು, ಎತ್ತ ಬೇಕಾದರೂ ತಿರುಗಬಹುದು ಎಂಬಂತಹ ಪರಿಸ್ಥಿತಿ ಇದೆ.
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದಲ್ಲಿ ಬದಲಾಗುವ ರಾಜಕೀಯ ಸನ್ನಿವೇಶ ಹೊರತು ಪಡಿಸಿ, ಸದ್ಯಕ್ಕೆ ಕಾಂಗ್ರೆಸ್ ಗೆಲ್ಲುವಿನ ಉಮ್ಮಸ್ಸಿನಲ್ಲಿದೆ. ಅದಕ್ಕೆ ಪೂರಕವಾಗಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಗೊಳಿಸಿ ಹೈಕಮಾಂಡ್‍ಗೆ ರವಾನೆ ಮಾಡಿದೆ. ಇನ್ನೇನು ಶೀಘ್ರದಲ್ಲೇ ದೆಹಲಿಯಲ್ಲಿ ಸಭೆಗಳು ನಡೆದು ಅಭ್ಯರ್ಥಿಗಳ ಆಯ್ಕೆ ಅಖೈರುಗೊಳ್ಳಲಿದೆ.
ಏರ್ ಇಂಡಿಯಾ ಕಾರ್ಯವೈಖರಿಗೆ ದೇಬ್ ರಾಯ್ ಖಂಡನೆ
ಇತ್ತ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ವಿವಿಧ ತಂಡಗಳು ರಾಜ್ಯ ಪ್ರವಾಸದಲ್ಲಿದ್ದು ಪಕ್ಷವನ್ನು ಮರಳಿ ಅಕಾರಕ್ಕೆ ತರಲು ಬೆವರು ಹರಿಸುತ್ತಿವೆ. ಪಕ್ಷದ ಒಳಗಿನ ಬೇಗುದಿ, ಮುಖ್ಯಮಂತ್ರಿ ಕುರ್ಚಿಯ ಕಾಲೆಳೆಯುವ ಆಟ ಹೊರತು ಪಡಿಸಿ ಕಾಂಗ್ರೆಸ್ ಸದ್ಯಕ್ಕೆ ಅತಿಯಾದ ಆತ್ಮವಿಶ್ವಾಸದಲ್ಲಿ ತೇಲುತ್ತಿದೆ.
ಇದರ ಜೊತೆಗೆ ಇತ್ತೀಚೆಗೆ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಸೇರಿದಂತೆ ವಿವಾದಿತ ಹೇಳಿಕೆಗಳು ಜನ ಮಾನಸದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಬಹುತೇಕ ಇವು ಕಾಂಗ್ರೆಸ್‍ಗೆ ನೆರವಾಗಲಿವೆ ಎಂಬ ಲೆಕ್ಕಚಾರಗಳಿವೆ. ಇದೇ ಮೊದಲ ಬಾರಿಗೆ ಬಿಜೆಪಿಯಲ್ಲಿ ನಾಯಕತ್ವದ ಗೊಂದಲ ಸೃಷ್ಟಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಏಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತಿತ್ತು. ಯಡಿಯೂರಪ್ಪ ಚಾಲ್ತಿಯಲ್ಲಿರುವವರೆಗೂ ಬದಲಿ ನಾಯಕತ್ವದ ಪ್ರಶ್ನೆಯೇ ಉದ್ಭವಿಸಿರಲಿಲ್ಲ. ಅವರು ಪಕ್ಷ ಬಿಟ್ಟು ಹೊರ ಹೋಗಿದ್ದಾಗ ಮಾತ್ರ ಸಾಮೂಹಿಕ ನಾಯಕತ್ವದ ಚರ್ಚೆಯಾಗಿತ್ತು. ಈಗ ಮತ್ತದೇ ರೀತಿ ನಾಯಕತ್ವದ ಗೊಂದಲ ಸೃಷ್ಟಿಯಾಗಿದ್ದು ಕಾಂಗ್ರೆಸ್‍ಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.
ಈ ಮೊದಲೇಲ್ಲಾ ಬಿಜೆಪಿ ಕಾಂಗ್ರೆಸ್‍ನವರಿಗೆ ನಿಮ್ಮಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಪ್ರಶ್ನೆ ಮಾಡುತ್ತಿತ್ತು. ಅದಕ್ಕೆ ಉತ್ತರಿಸಲಾಗದೆ ಕಾಂಗ್ರೆಸ್ ತಡಬಡಾಯಿಸಿತ್ತು. ಈಗ ಬಿಜೆಪಿ ಅದೇ ರೀತಿ ಪ್ರಶ್ನೆಯನ್ನು ಎದುರಿಸುವಂತಾಗಿದೆ.
ಇದಕ್ಕೆ ಪೂರಕವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯಲ್ಲಿ ಪ್ರಹ್ಲಾದ್ ಜೋಷಿಯವರನ್ನು ಮುಖ್ಯಮಂತ್ರಿ ಮಾಡುವ ತಯಾರಿ ನಡೆದಿದೆ ಎಂದು ಹೇಳಿರುವುದು, ಅದನ್ನು ಒಪ್ಪಿಕೊಳ್ಳಲು ಆಗದೆ, ನಿರಾಕರಿಸಲು ಆಗದೆ ಬಿಜೆಪಿ ಅಡ್ಡಕತ್ತರಿಯಲ್ಲಿರುವುದು ಕಾಂಗ್ರೆಸ್‍ಗೆ ಆನೆ ಬಲ ತಂದುಕೊಟ್ಟಿದೆ.
CM Bommai, budget, congress, assembly election,