ಬೊಮ್ಮಾಯಿ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆ ಸಾಧ್ಯತೆ..!

Social Share

ಬೆಂಗಳೂರು,ಫೆ.5- ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತೆ ಸಚಿವ ಸಂಪುಟ ಪುನಾರಚನೆಯ ಗದ್ದಲ ಎದ್ದಿದೆ. ಖಾಲಿಯಿರುವ 4 ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದ್ದು, ಹೊಸ ಮುಖಗಳಿಗೆ ಅವಕಾಶ ನೀಡಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಬೊಮ್ಮಾಯಿ ಅವರ ಸಂಪುಟದಲ್ಲಿ ಹಲವು ಜಿಲ್ಲೆಗಳಿಗೆ ಪ್ರಾತಿನಿಧ್ಯವಿಲ್ಲದ ಕಾರಣ, ಪ್ರಾದೇಶಿಕ ಸಮತೋಲನವನ್ನು ಸಾಧಿಸಲು ಹೊಸ ಮುಖಗಳ ಸೇರ್ಪಡೆಗೆ ಕೇಂದ್ರ ನಾಯಕರು ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.
ಐದು ಬಾರಿ ಶಾಸಕರಾಗಿರುವ ಜಿ.ಎಚ್.ತಿಪ್ಪಾರೆಡ್ಡಿ (ಚಿತ್ರದುರ್ಗ), ಪೂರ್ಣಿಮಾ ಶ್ರೀನಿವಾಸ್ (ಹಿರಿಯೂರು), ದತ್ತಾತ್ರೇಯ ರೇವೂರ್ (ಗುಲ್ಬರ್ಗ ದಕ್ಷಿಣ), ಎಂ.ಪಿ.ರೇಣುಕಾಚಾರ್ಯ (ಹೊನ್ನಾಳಿ), ಬಸನಗೌಡ ಪಾಟೀಲ್ (ವಿಜಯಪುರ) ಮತ್ತು ಎನ್.ಮಹೇಶ್ (ಕೊಳ್ಳೇಗಾಲ) ಅವರ ಹೆಸರುಗಳು ಪಟ್ಟಿಯಲ್ಲಿವೆ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಮಹೇಶ್ ಅವರು ಈ ಹಿಂದೆ ಬಿಎಸ್‍ಪಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಏತನ್ಮಧ್ಯೆ ಸಚಿವ ಸ್ಥಾನಕ್ಕೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಎಂಎಲ್‍ಸಿ ಎನ್.ರವಿಕುಮಾರ್ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರುಗಳೂ ಕೂಡ ಕೇಳಿ ಬರುತ್ತಿವೆ.
ಈ ಬಾರಿ ಸಚಿವ ಸಂಪುಟದಿಂದ ಹಿರಿಯ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಜೆ.ಸಿ.ಮಾಧುಸ್ವಾಮಿ ಅವರನ್ನು ಕೈಬಿಡುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸದನದಲ್ಲಿ ಹಲವು ವಿಚಾರಗಳಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಸದನದಲ್ಲಿ ಹಿರಿಯ ಸದಸ್ಯರ ಅಗತ್ಯವಿರುವುದರಿಂದ ಕೆಲ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸೇರ್ಪಡೆಗೊಳಿಸಿದರೆ, ಶಶಿಕಲಾ ಜೊಲ್ಲೆ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಮಾರ್ಚ್ ಎರಡನೇ ವಾರದಲ್ಲಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮಾರ್ಚ್ 10ರ ಬಳಿಕ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆ ಸೋಮವಾರ ದೆಹಲಿಗೆ ಭೇಟಿ ನೀಡುವುದಾಗಿ ಬೊಮ್ಮಾಯಿ ಹೇಳಿದ್ದರು. ಬೊಮ್ಮಾಯಿಯವರ ಈ ಹೇಳಿಕೆ ಬಳಿಕ ಸಚಿವಾಕಾಂಕ್ಷಿಗಳು ದೆಹಲಿಗೆ ಭೇಟಿ ನೀಡುತ್ತಿದ್ದು, ಕೇಂದ್ರೀಯ ನಾಯಕರನ್ನು ಭೇಟಿಯಾಗುವುದರಲ್ಲಿ ಬಿಝಿಯಾಗಿದ್ದಾರೆ. ಈಗಾಗಲೇ ಸಚಿವ ಬಿ.ಶ್ರೀರಾಮುಲು ಅವರು ದೆಹಲಿಗೆ ಭೇಟಿ ನೀಡಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಶೀಘ್ರದಲ್ಲಿಯೇ ದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಲಾಭಿ ಆರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಸಚಿವಾಕಾಂಕ್ಷಿಗಳಲ್ಲಿ ಸಂಪುಟ ಸೇರುವ ಆಸೆ ಗರಿಗೆದರಿದ್ದು, ಮತ್ತೆ ತೆರೆ ಮರೆಯಲ್ಲಿ ಲಾಬಿ ಆರಂಭಿಸಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯದ ಸಂಸದರ ಜೊತೆ ಸಭೆ ನಡೆಸಲು ದೆಹಲಿಗೆ ತೆರಳುತ್ತಿದ್ದು, ಜೊತೆಗೆ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಪ್ರವಾಸದ ಬೆನ್ನಲ್ಲೇ ಅಂದರೆ ವಿಧಾನಸಭೆಯ ಜಂಟಿ ಅಧಿವೇಶನಕ್ಕೂ ಮುನ್ನವೇ ಸಂಪುಟ ಪುನಾರಚನೆಯಾಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿರುವ ಆಕಾಂಕ್ಷಿಗಳು ನಾಯಕರುಗಳ ಮೂಲಕ ಒತ್ತಡ ಹೇರುವ ಪ್ರಯತ್ನ ಆರಂಭಿಸಿದ್ದಾರೆ.
ಈ ಮಧ್ಯೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತದೆಯೋ ಇಲ್ಲವೋ ಎನ್ನುವ ಚರ್ಚೆಯೂ ಜೋರಾಗಿ ನಡೆದಿದೆ.
ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ಸ್ವತಃ ಯಡಿಯೂರಪ್ಪ ಅವರೇ ಸಿಎಂ ಬೊಮ್ಮಾಯಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದ್ದು, ಸಿಎಂ ದೆಹಲಿ ಭೇಟಿ ಸಂದರ್ಭದಲ್ಲಿ ವಿಜಯೇಂದ್ರಗೆ ಅವಕಾಶ ಕಲ್ಪಿಸುವ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿಎಂ ಬೊಮ್ಮಾಯಿ ಕೂಡ ವಿಜಯೇಂದ್ರ ಅವರ ಪರವಾಗಿದ್ದಾರೆ ಎನ್ನಲಾಗಿದ್ದು, ಈ ಬಾರಿ ಸಂಪುಟ ವಿಸ್ತರಣೆಯಾದರೆ ಪಕ್ಷದ ಹೈಕಮಾಂಡ್ ತಮ್ಮ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂಬ ನಿರೀಕ್ಷೆಯಲ್ಲಿ ವಿಜಯೇಂದ್ರ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪುನಾರಚನೆಯ ನಿರೀಕ್ಷೆ:
ಬಹುತೇಕ ಸಚಿವಾಕಾಂಕ್ಷಿಗಳು ಸಂಪುಟ ಪುನಾರಚನೆಯಾಗಬೇಕೆಂದು ಒತ್ತಡ ಹೇರುತ್ತಿದ್ದು, ಜಿಲ್ಲೆ, ಜಾತಿ ಹಾಗೂ ಪ್ರಾದೇಶಿಕತೆ ಲೆಕ್ಕಾಚಾರದಲ್ಲಿ ಈ ಬಾರಿ ಅವಕಾಶ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ಅನೇಕ ಸಚಿವಾಕಾಂಕ್ಷಿಗಳಿದ್ದಾರೆ.
ಈಗಿರುವ ಲೆಕ್ಕಾಚಾರದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದ್ದು, ಕನಿಷ್ಟ 10-12 ಹಾಲಿ ಸಚಿವರನ್ನು ಕೈ ಬಿಡಬೇಕೆಂಬ ಒತ್ತಡವನ್ನು ಸಚಿವಾಕಾಂಕ್ಷಿಗಳು ಹೊಂದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಸಂಪುಟದ ಅರ್ಧದಷ್ಟು ಸಚಿವರು ನಿಷ್ಕ್ರೀಯರಾಗಿದ್ದು, ಶಾಸಕರ ಅಹವಾಲುಗಳಿಗೆ ಸ್ಪಂದಿಸುವುದಿಲ್ಲ ಎಂದು ಹೈಕಮಾಂಡ್ ನಾಯಕರಿಗೆ ದೂರು ಸಲ್ಲಿಸಿದ್ದಾರೆ.
ಅವರ ದೂರಿಗೆ ಪ್ರತಿಯಾಗಿ ಅನೇಕ ಸಚಿವರು ರೇಣುಕಾಚಾರ್ಯ ವಿರುದ್ಧವೂ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಪಕ್ಷದ ಹೈಕಮಾಂಡ್ ರೇಣುಕಾಚಾರ್ಯಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
 

Articles You Might Like

Share This Article