ದೆಹಲಿ ಪ್ರವಾಸದಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವುದಿಲ್ಲ: CM ಬೊಮ್ಮಾಯಿ

ಬೆಂಗಳೂರು,ಏ.29- ಮೇ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಗರಕ್ಕೆ ಆಗಮಿಸಿದ ವೇಳೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತಂತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಪ್ರವಾಸದಲ್ಲಿ ಯಾವುದೇ ಕೇಂದ್ರ ಸಚಿವರು ಹಾಗೂ ಪಕ್ಷದ ನಾಯಕರನ್ನು ಭೇಟಿ ಮಾಡುವುದಿಲ್ಲ. ಆದರೆ ಅಮಿತ್ ಷಾ 3ಕ್ಕೆ ರಾಜ್ಯಕ್ಕೆ ಬರುತ್ತಾರೆ. ಅವಾಗ ಅವರಿಂದ ಸಮಯ ತಗೊಂಡು, ಸಂಪುಟದ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.

ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ನಡೆಯುವ ನ್ಯಾಯಾಧೀಶರು , ಮತ್ತು ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭಾಗಿಯಾಗಿ ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ವಾಪಾಸ್ಸಾಗುವುದಾಗಿ ತಿಳಿಸಿದರು.

ಈಗಾಗಲೇ ಖಾಲಿ ಇರುವ ಸಚಿವ ಸ್ಥಾನ ತುಂಬುವ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ. ಹೀಗಾಗಿ ಅಮಿತ್ ಷಾ ಅವರು ಬೆಂಗಳೂರಿಗೆ ಬಂದಾಗ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.