ಬೆಂಗಳೂರು,ಜ.24- ವರಿಷ್ಠರು ಯಾವಾಗ ಸೂಚನೆ ನೀಡುತ್ತಾರೋ ಆಗ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಬೆಳವಣಿಗೆ ಬಗ್ಗೆ ವರಿಷ್ಠರಿಗೆ ಮಾಹಿತಿ ಇದೆ. ಅವರು ಯಾವ ಸಂದರ್ಭದಲ್ಲಿ ಸೂಚನೆ ಕೊಡುತ್ತಾರೋ ಆ ವೇಳೆ ವಿಸ್ತರಣೆ ಮಾಡುವುದಾಗಿ ತಿಳಿಸಿದರು.
ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು, ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನನಗೆ ಮಾಹಿತಿ ಇಲ್ಲ. ಎಲ್ಲವೂ ವರಿಷ್ಠರು ತೆಗೆದುಕೊಳ್ಳುವ ನಿರ್ಣಯದ ಮೇಲೆ ಅವಲಂಬಿತವಾಗಿದೆ ಎಂದರು.
ದೆಹಲಿಗೆ ಬರುವಂತೆ ಈವರೆಗೂ ನನಗೆ ಹೈಕಮಾಂಡ್‍ನಿಂದ ಸೂಚನೆ ಬಂದಿಲ್ಲ. ಅವರು ಯಾವಾಗ ಕರೆಯುತ್ತಾರೋ ಆ ವೇಳೆ ನಾನು ದೆಹಲಿಗೆ ಹೋಗಿ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವೆ. ಸಂಪುಟ ವಿಸ್ತರಣೆ ಮಾಡಬೇಕೆಂದು ಸೂಚಿಸಿದರೂ ನನ್ನ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯಕ್ಕೆ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಶಾಸಕರು ಇವುಗಳನ್ನು ಭರ್ತಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಂಪುಟ ರಚನೆಯಾಗಬೇಕು ಎಂದು ಹೇಳುವುದು ತಪ್ಪಲ್ಲ. ಅದು ಶಾಸಕರ ಹಕ್ಕು ಕೂಡ ಎಂದು ಅಭಿಪ್ರಾಯಪಟ್ಟರು.
ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಪಕ್ಷದ ನಾಯಕರು ನನ್ನನ್ನು ಕರೆದರೆ ಇಲ್ಲವೇ ವಿಸ್ತರಣೆ ಮಾಡಬೇಕೆಂದು ಸ್ಥಳೀಯ ನಾಯಕರು ಸೂಚಿಸಿದರೂ ಅವರ ಬಳಿಯೂ ಮಾತುಕತೆ ನಡೆಸಿ ವಿಸ್ತರಣೆ ಮಾಡಲಾಗುವುದು. ಇದರಲ್ಲಿ ನನಗೆ ಯಾರಿಂದಲೂ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಗಮಮಂಡಳಿಗೆ ಅಧ್ಯಕ್ಷರ ನೇಮಕ ಮಾಡುವ ಬಗ್ಗೆ ಚರ್ಚೆಯಾಗಿಲ್ಲ. ಪಕ್ಷದ ವೇದಿಕೆಯಲ್ಲೂ ಈ ಬಗ್ಗೆ ಮಾತುಕತೆ ನಡೆದಿಲ್ಲ. ಒಂದು ವೇಳೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಂದ ನೇಮಕ ಮಾಡಬೇಕೆಂದು ಸೂಚಿಸಿದರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಬಜೆಟ್ ಮಂಡನೆ ಕುರಿತಂತೆ ಈಗಾಗಲೇ ಎಲ್ಲ ರೀತಿಯ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಹಿಂದೆಯೇ ನಾನು ಅಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದಿದ್ದೆನು. ರಾಜ್ಯದಲ್ಲಿ 3ನೇ ಕೋವಿಡ್ ಅಲೆ ಬಂದಿದ್ದರಿಂದ ಈ ಸಭೆ ನಡೆಯಲು ವಿಳಂಬವಾಗಿದೆ ಎಂದರು.
ಇದೇ ತಿಂಗಳ 25ರಂದು ಹಣಕಾಸು ಇಲಾಖೆ ಅಕಾರಿಗಳ ಸಭೆ ನಡೆಸಲಾಗುವುದು. ಬಜೆಟ್ ಪೂರ್ವ ಸಿದ್ದತೆ, ಹಣಕಾಸಿನ ಸ್ಥಿತಿಗತಿ, ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ಇಲಾಖೆಗಳ ಪರಾಮರ್ಶೆ ನಡೆಸಲಾಗುವುದು ಎಂದು ಹೇಳಿದರು. ಅಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಇಲಾಖಾವಾರು ಸಭೆ ನಡೆಸಿ ಯಾವ ಬೇಡಿಕೆಗಳನ್ನು ಸೇರ್ಪಡೆ ಮಾಡಬೇಕು, ಹಿಂದಿನ ವರ್ಷ ಆಗಿರುವ ಸಾಧನೆಗಳ ಬಗ್ಗೆಯೂ ಪರಾಮರ್ಶೆ ನಡೆಸಲಾಗುವುದು.
ನಾನು ಮುಖ್ಯಮಂತ್ರಿಯಾಗಿ ಜ.28ಕ್ಕೆ ಆರು ತಿಂಗಳು ಪೂರ್ಣಗೊಳ್ಳಲಿದೆ. ನನ್ನ ಅವಯಲ್ಲಿ ಜಾರಿಗೆ ತಂದಿರುವ ಹೊಸ ಕಾರ್ಯಕ್ರಮಗಳು, ಸರ್ಕಾರದ ಸಾಧನೆಗಳ ಕಿರುಹೊತ್ತಿಗೆಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದರು.
ವಿನಾಯ್ತಿ ಇಲ್ಲ:
ಜನತೆಯ ಹಿತದೃಷ್ಟಿಯಿಂದ ವಿಸಲಾಗಿದ್ದ, ವಾರಾಂತ್ಯದ ಲಾಕ್‍ಡೌನ್‍ನ್ನು ಹಿಂಪಡೆಯಲಾಗಿದೆ. ಯಾರಿಗೂ ಕೂಡ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ತಕ್ಷಣವೇ ನೈಟ್ ಕಫ್ರ್ಯೂ ತೆಗೆದು ಹಾಕಬೇಕೆಂದು ಕೆಲವರು ಒತ್ತಡ ಹಾಕಿದರೆ ಅದು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿದರು.
ವಾರಾಂತ್ಯದ ಲಾಕ್‍ಡೌನ್ ತೆಗೆದುಹಾಕಲು ತಜ್ಞರು, ತಾಂತ್ರಿಕ ಸಲಹಾ ಸಮಿತಿ ಹಾಗೂ ಬೇರೆ ಬೇರೆ ವಲಯದಿಂದಲೂ ಅಭಿಪ್ರಾಯ ಪಡೆದಿದ್ದೆವು. ಈಗ ನೈಟ್ ಕಫ್ರ್ಯೂ ತೆಗೆದು ಹಾಕಬೇಕೆಂದು ಹೇಳಿದರೆ ಅದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ಕೆಲವು ಸಚಿವರು ಮತ್ತು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಇದೆಲ್ಲ ಸಹಜ ಪ್ರಕ್ರಿಯೆ. ಒಂದು ಸಭೆ ನಡೆಸಿದ್ದಕ್ಕೆ ಇಷ್ಟು ಮಹತ್ವ ಕೊಡುವ ಅಗತ್ಯವಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲೂ ಪ್ರತ್ಯೇಕ ಸಭೆಗಳು ನಡೆಯುತ್ತವೆ. ಒಂದು ರಾಜಕೀಯ ಪಕ್ಷದಲ್ಲಿ ಇವೆಲ್ಲ ಸರ್ವೇ ಸಾಮಾನ್ಯ. ಇದಕ್ಕೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಬೊಮ್ಮಾಯಿ, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‍ನವರು ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
