ಬೆಂಗಳೂರು,ಫೆ.3- ಸಿ.ಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲೇಬೇಕೆಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಡಕತ್ತರಿಗೆ ಸಿಲುಕಿಸಿದೆ.
ಪ್ರಕರಣವನ್ನು ಸಿಬಿಐಗೆ ವಹಿಸಬೇಕೆ ಇಲ್ಲವೇ ವರಿಷ್ಠರ ನಿರ್ದೇಶನದಂತೆ ನಡೆದುಕೊಳ್ಳಬೇಕೆ ಎಂಬ ಜಿಜ್ಞಾಸೆ ಎದುರಾಗಿದ್ದು, ಅಕ್ಷರಸಃ ಏನೂ ತೋಚದೆ ಇಕ್ಕಟ್ಟಿಗೆ ಸಿಲುಕಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ರಮೇಶ್ ಜಾರಕಿಹೊಳಿ ಒತ್ತಡಕ್ಕೆ ಮಣಿದು ಸಿಬಿಐ ತನಿಖೆಗೆ ಸೂಚಿಸಿದರೆ ಭವಿಷ್ಯದಲ್ಲಿ ತಮಗಾಗಬಹುದಾದ ಆಪ್ಪತ್ತಿನ ಬಗ್ಗೆಯೂ ಚಿಂತೆ ಕಾಡುತ್ತಿದೆ. ಪ್ರಕರಣವನ್ನು ಸಿಬಿಐಗೆ ಕೊಡದಿದ್ದರೆ ಸ್ವಪಕ್ಷೀಯ ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ ಎಂಬ ಅಳುಕಿನಲ್ಲಿದ್ದಾರೆ.
ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮ್ಮ ಸರ್ಕಾರದ ಅವಧಿಯಲ್ಲಿ ಕೇಳಿಬಂದಿರುವ ಕೆಲವು ಭ್ರಷ್ಟಾಚಾರ ಪ್ರಕರಣಗಳನ್ನು ಯಾವುದಾದರೂ ಸಂಸ್ಥೆಯಿಂದ ತನಿಖೆ ನಡೆಸಿದರೆ ಕಾನೂನು ಸಂಕಷ್ಟ ತಮಗೂ ಎದುರಾಗಬಹುದೆಂದು ಬೊಮ್ಮಾಯಿ ಅವರಿಗೆ ಚೆನ್ನಾಗಿ ತಿಳಿದಿದೆ.
ಹುಟ್ಟುವ ಪ್ರತಿ ಮಗುವಿಗೆ 100 ಗಿಡ ನೆಡುವ ಅಭಿಯಾನಕ್ಕೆ ಚಾಲನೆ
ಹೀಗಾಗಿ ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮತೆಯಿಂದ ನಿಭಾಯಿಸುತ್ತಿದ್ದಾರೆ. ಅಂತಿಮವಾಗಿ ವರಿಷ್ಠರು ಯಾವ ನಿರ್ದೇಶನ ನೀಡುತ್ತಾರೊ ಅದರಂತೆ ನಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಅಮಿತ್ ಷಾ ಭೇಟಿಯಾದ ಜಾರಕಿಹೊಳಿ:
ಈ ಬೆಳವಣಿಗೆಗಳ ನಡುವೆಯೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿ.ಡಿ ಪ್ರಕರಣವು ರಾಜಕೀಯ ಷಡ್ಯಂತ್ರವಾಗಿದ್ದು, ಇದರಲ್ಲಿ ಹನಿಟ್ರಾಪ್ ನಡೆದಿದೆ. ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಸೂಚನೆ ನೀಡಲು ಸಿಎಂಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಅಮಿತ್ ಷಾ ಅವರ ಕೈಗೆ ತಮ್ಮ ಬಳಿ ಇದ್ದ ಕೆಲವು ಸಾಕ್ಷ್ಯಾಧಾರಗಳು ಎನ್ನಬಹುದಾದ ಸಿ.ಡಿ.ಗಳನ್ನು ನೀಡಿರುವ ಜಾರಕಿಹೊಳಿ, ಈ ಷಡ್ಯಂತ್ರದ ಹಿಂದೆ ಕರ್ನಾಟಕದ ಪ್ರಮುಖ ರಾಜಕಾರಣಿ ಒಬ್ಬರ ಕೈವಾಡವಿದೆ ಎಂದು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಎರಡು ದಿನಗಳಿಂದ ಬೆಂಗಳೂರಿನಲ್ಲಿಯೇ ಇದ್ದ ರಮೇಶ ಜಾರಕಿಹೊಳಿ ಗುರುವಾರ ಮಧ್ಯಾಹ್ನ ದಿಢೀರ್ ದೆಹಲಿಗೆ ಆಗಮಿಸಿದ್ದರು. ಅಮಿತ್ ಶಾ ಭೇಟಿಗೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನೂ ರಮೇಶ ಜಾರಕಿಹೊಳಿ ಭೇಟಿ ಮಾಡಿದ್ದರು.
ಜನಪ್ರಿಯ ಬಜೆಟ್ ಮಂಡನೆಗೆ ತಲೆನೋವಾದ ಬಂಡವಾಳ ವೆಚ್ಚ ಇಳಿಕೆ
ಸಿ.ಡಿ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತವರ ಗ್ಯಾಂಗ್‍ನ ಕೈವಾಡವಿದೆ. ಅಲ್ಲದೆ, ಡಿಕೆಶಿಗೆ ಸಂಬಂಸಿದ ಸಿಡಿ, ಸಾಕ್ಷ್ಯಗಳು ತಮ್ಮ ಬಳಿಯೂ ಇದೆ. ಇವೆಲ್ಲದರ ಬಗ್ಗೆ ಸಿಬಿಐನಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು.
ಈ ಸಂಬಂಧ ಮಾತುಕತೆ ನಡೆಸಲು ದೆಹಲಿಗೆ ಆಗಮಿಸುವಂತೆ ಶಾ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಮುಂಬೈನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ ಮಾಡಿ ಅಮಿತ್ ಷಾ ಭೇಟಿಗೆ ದಿನಾಂಕವನ್ನು ನಿಗದಿಪಡಿಸಿಕೊಂಡಿದ್ದರು. ಇದೀಗ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿದೆಯೇ? ಎಂಬ ಕುತೂಹಲ ಎಲ್ಲರಲ್ಲಿಯೂ ಕೆರಳಿದೆ.
CM Bommai, CD case, CBI, ramesh jarkiholi,