ಕಾಂಗ್ರೆಸ್‍ನಿಂದ ಗೊಂದಲದ ಟ್ವಿಟ್ : ಸಿಎಂ ಬೊಮ್ಮಾಯಿ ಕಿಡಿ

Social Share

ಬೆಂಗಳೂರು,ಆ.11- ಕಾಂಗ್ರೆಸ್ ನಾಯಕರ ಟೀಕೆಗಳು ನನಗೆ ಆಶೀರ್ವಾದವಿದ್ದಂತೆ. ನಾನು ಈಗಲೂ ಕೂಡ ಸ್ಥಿತಪ್ರಜ್ಞೆಯಲ್ಲಿದ್ದೇನೆ. ರಾಜ್ಯದ ಜನತೆ ನನ್ನ ಬಗ್ಗೆ ನಂಬಿಕೆ ಇಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಧಿಕಾರ ಕಳೆದುಕೊಂಡು ಹತಾಶ ಸ್ಥಿತಿಯಲ್ಲಿರುವ ಕಾಂಗ್ರೆಸ್, ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಗೊಂದಲ ಸೃಷ್ಟಿಸುವುದು ಹೊಸದೇನಲ್ಲ. ಅವರಿಗೆ ಮಾಡಲು ಬೇರೆ ಕೆಲಸಗಳಿಲ್ಲ. ಹೀಗಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನತೆ ಖಂಡಿತವಾಗಿಯೂ ನಂಬುವುದಿಲ್ಲ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯ ಏನೆಂಬುದು ನನಗೆ ಗೊತ್ತಿದೆ. ನನ್ನ ಕುರ್ಚಿ ಗಟ್ಟಿ ಇದೆ ಇಲ್ಲವೇ ಎಂಬುದು ನನಗೆ ಗೊತ್ತು. ನಾನು ಈಗಲೂ ಕೂಡ ಸ್ಥಿತಪ್ರಜ್ಞನಾಗಿದ್ದೇನೆ. ನನಗೆ ಇನ್ನು 2 ಗಂಟೆ ಹೆಚ್ಚು ಕೆಲಸ ಮಾಡಲು ಕಾಂಗ್ರೆಸ್ ಪ್ರೇರಣೆ ನೀಡಿದೆ ಎಂದು ಕುಹುಕವಾಡಿದರು.

ಕಾಂಗ್ರೆಸ್ ಈ ರೀತಿ ಟ್ವೀಟ್‍ಗಳನ್ನು ಮಾಡುವುದು, ಜನರಲ್ಲಿ ಗೊಂದಲ ಸೃಷ್ಟಿಸುವುದು ಹೊಸದೇನಲ್ಲ. ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ ಎಷ್ಟೇ ಟೀಕೆ ಟಿಪ್ಪಣಿಗಳನ್ನು ಮಾಡಲಿ. ನಾನು ಇಂತಹ ವಿಷಯಗಳಿಗೆ ಗಮನಕೊಡುವುದಿಲ್ಲ. ರಾಜ್ಯದ ಅಭಿವೃದ್ಧಿ, ಜನತೆಯ ಕಲ್ಯಾಣವೇ ನಮ್ಮ ಮೊದಲ ಗುರಿ ಎಂದು ಹೇಳಿದರು.

ಕಾಂಗ್ರೆಸ್ ಎಷ್ಟು ಹತಾಶವಾಗಿದೆ ಎಂಬುದು ಇದರಿಂದಲೇ ತಿಳಿಯುತ್ತದೆ. ಅವರ ಟ್ವೀಟ್‍ನಿಂದ ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ. ವರಿಷ್ಠರ ಸಂದೇಶ ಏನೆಂಬುದು ನನಗೆ ಗೊತ್ತು. ನಮ್ಮ ಪಕ್ಷ ಸಂಪುಟದ ಸಹೋದ್ಯೋಗಿಗಳು ನನ್ನ ಬೆಂಬಲಕ್ಕೆ ಇರುವಾಗ ಪ್ರತಿಪಕ್ಷಗಳ ಆಧಾರ ರಹಿತ ಆರೋಪಕ್ಕೆ ಉತ್ತರ ಕೊಡುವ ಅಗತ್ಯವೂ ಇಲ್ಲ ಎಂದರು.

ರಾಜ್ಯದ ಜನತೆ ನಮ್ಮ ಕೆಲಸದ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಅವರ ಟ್ವೀಟ್‍ಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅವರಲ್ಲೇ ಬಣ ಬಡಿದಾಟ ಶುರುವಾಗಿದೆ. ಅದನ್ನು ಮರೆಮಾಚಿಕೊಳ್ಳಲು ಬಿಜೆಪಿ ಮೇಲೆ ಬಾಣ ಬಿಟ್ಟಿದ್ದಾರೆ. ಇದು ಅವರಿಗೆ ತಿರುಗು ಬಾಣವಾಗಲಿದೆ ಎಂದು ಎಚ್ಚರಿಕೆ ಕೊಟ್ಟರು.

ನಾನು ಸ್ಥಿತಪ್ರಜ್ಞನಾಗಿರುವುದರಿಂದಲೇ ಸ್ಥಿರವಾಗಿದ್ದೇನೆ. ಕೆಲವು ಆರೋಪಗಳಿಗೆ ಉತ್ತರಿಸಬಾರದು ಎಂದು ಸುಮ್ಮನಿದ್ದೆ. ಆದರೆ ಆಧಾರರಹಿತ ಆರೋಪ ಮತ್ತು ಗೊಂದಲ ಸೃಷ್ಟಿಸಿದ್ದರಿಂದ ಮಾತನಾಡಬೇಕಾಯಿತು. ಮಾಡಲು ಕೆಲಸವಿಲ್ಲದವರ ಬಗ್ಗೆ ಮಾತನಾಡಿದರೆ ನಾನು ಕೂತಿರುವ ಕುರ್ಚಿಗೂ ಬೆಲೆ ಇರುವುದಿಲ್ಲ ಎಂದು ಬೊಮ್ಮಾಯಿ ತಿರುಗೇಟು ಮಾಡಿದರು.

ಕಾಂಗ್ರೆಸ್ ಮಾಡಿರುವ ಟ್ವೀಟ್‍ನಲ್ಲೇ ಗೊಂದಲಗಳಿವೆ. ಅವರ ಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗುತ್ತಿದೆ. ಆದರೆ ತಾವು ಅಧಿಕಾರಕ್ಕೆ ಬಂದೇಬಿಟ್ಟೆವು ಎಂಬ ಭ್ರಮೆಯಲ್ಲಿದ್ದಾರೆ. ವಾಸ್ತವಚಿತ್ರಣ ಬೇರೆ ಇದೆ ಎಂದು ಹೇಳಿದರು.

ಇದೇ 21ರಿಂದ ನಾನು ರಾಜ್ಯಾದ್ಯಂತ ನಾನು ಪ್ರವಾಸ ಕೈಗೊಳ್ಳುತ್ತೇನೆ. ನಾವು ಅಧಿಕಾರಕ್ಕೆ ಬಂದ ಮೇಲೆ ಮಾಡಿರುವ ಸಾಧನೆಗಳು ಹಾಗೂ ಬಜೆಟ್‍ನಲ್ಲಿ ಘೋಷಣೆ ಮಾಡಿರುವ ಯೋಜನೆಗಳನ್ನು ಜನರಿಗೆ ತಲುಪಿಸುತ್ತೇವೆ. 2023ಕ್ಕೆ ಮತ್ತೆ ಪಕ್ಷವನ್ನು ಅಕಾರಕ್ಕೆ ತರುವ ಸಂಕಲ್ಪ ನಮ್ಮದಾಗಿದೆ ಎಂದು ಶಪಥ ಮಾಡಿದರು.

ಚಾಮರಾಜಪೇಟೆಯ ವಿವಾದಾತ್ಮಕ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದೆ. ಇಲ್ಲಿ ಯಾವುದೇ ಸಭೆ-ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಸ್ಪಷ್ಪಪಡಿಸಿದರು.

ಇಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಲು ಅವಕಾಶ ನೀಡುವುದಿಲ್ಲ ಎಂಬ ಶಾಸಕ ಜಮೀರ್ ಅಹಮ್ಮದ್ ಹೇಳಿಕೆಗೆ, ಯಾರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ಕಾನೂನಿನ ಪ್ರಕಾರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

Articles You Might Like

Share This Article