ಬೆಂಗಳೂರು,ಜು.24- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಗೆ ತೆರಳಿದ್ದು, ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ಪುನಾರಚನೆ/ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಸಂಬಂಧ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ನಾಳೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕಾರ ಸ್ವೀಕರಿಸಲಿದ್ದು, ಬಿಜೆಪಿ ಸೇರಿದಂತೆ ಎನ್‍ಡಿಎ ಮೈತ್ರಿಕೂಟ ಆಡಳಿತವಿರುವ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಬೇಕೆಂದು ಹೈಕಮಾಂಡ್ ಸೂಚನೆ ಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರು ಮೂರು ದಿನಗಳ ಕಾಲ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದು, ನೆನೆಗುದಿಗೆ ಬಿದ್ದಿರುವ ರಾಜ್ಯದ ಯೋಜನೆಗಳ ಅನುಷ್ಠಾನ ಸಂಬಂಧ ವಿವಿಧ ಇಲಾಖೆಗಳ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‍ಷಾ, ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಕೆಲವು ಪ್ರಮುಖ ನಾಯಕರನ್ನು ಭೇಟಿಯಾಗುವ ಸಂಭವವಿದೆ.
ಮುಖ್ಯಮಂತ್ರಿ ಗಳು ತಮ್ಮ ಪ್ರವಾಸದ ಸಂದರ್ಭದಲ್ಲಿ ಪಕ್ಷದ ಯಾವ ನಾಯಕರನ್ನು ಭೇಟಿಯಾಗಲಿದ್ದಾರೆ ಎಂಬುದು ಈವರೆಗೂ ದೃಢಪಟ್ಟಿಲ್ಲ. ಮೂಲಗಳ ಪ್ರಕಾರ ನಾಳೆ ಸಂಜೆ ಜೆ.ಪಿ.ನಡ್ಡಾ ಮತ್ತು ಅಮಿತ್ ಷಾ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಬೆಳವಣಿಗೆ ಕುರಿತಂತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸಂಪುಟದಲ್ಲಿ ಸದ್ಯ ನಾಲ್ಕು ಸ್ಥಾನಗಳು ಖಾಲಿಯಿದ್ದು, ವರಿಷ್ಠರು ಸಮ್ಮತಿಸಿದರೆ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಪ್ರಸ್ತಾವವನ್ನು ಮುಂದಡಿಲಿದ್ದಾರೆ. ಚುನಾವಣಾ ವರ್ಷ ಆಗಿರುವುದರಿಂದ ಸಂಪುಟ ಪುನಾರಚನೆಗೆ ಅವಕಾಶ ನೀಡಬೇಕು ಹಾಗೂ ಕೆಲವು ಸಚಿವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜನೆ, ಕೆಲವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಅನುಮತಿ ನೀಡಬೇಕೆಂಬ ಬೇಡಿಕೆಯನ್ನು ಇಡಲಿದ್ದಾರೆ.
ಸಂಪುಟ ಪುನಾರಚನೆಗೆ ಶಾಸಕರಿಂದ ನಿರಂತರವಾಗಿ ಒತ್ತಡ ಕೇಳಿಬರುತ್ತಿರುವುದರಿಂದ ಪ್ರದೇಶವಾರು, ಜಾತಿ, ಸಂಘಟನೆ ಹಿನ್ನೆಲೆ, ಆರ್‍ಎಸ್‍ಎಸ್ ಹಿನ್ನೆಲೆ ಈ ಎಲ್ಲವನ್ನು ಮಾನದಂಡವಾಗಿಟ್ಟುಕೊಂಡು ಸಂಪುಟಕ್ಕೆ ತೆಗೆದುಕೊಳ್ಳಲು ಅನುಮತಿ ನೀಡಬೇಕೆಂದು ಬೊಮ್ಮಾಯಿ ಅವರು ಮನವಿ ಮಾಡಲಿದ್ದಾರೆ.
ಸಿ.ಡಿ ಪ್ರಕರಣದಲ್ಲಿ ಸಿಲುಕಿಕೊಂಡು ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದ ಕೆ.ಎಸ್.ಈಶ್ವರಪ್ಪ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಕುರಿತು ಚರ್ಚಿಸಲಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಎಸ್‍ಐಟಿ ನ್ಯಾಯಾಲಯಕ್ಕೆ ಬಿ ರಿಪೆÇೀರ್ಟ್ ಸಲ್ಲಿಸಿದ್ದರೂ ಸುಪ್ರೀಂಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿದೆ. ಈಶ್ವರಪ್ಪನವರ ಪ್ರಕರಣದಲ್ಲಿ ಬಿ ರಿಪೆÇೀರ್ಟ್ ಸಲ್ಲಿಕೆ ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದ ಈ ಇಬ್ಬರನ್ನು ಸಂಪುಟಕ್ಕೆ ತೆಗೆದುಕೊಂಡರೆ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಬಿಜೆಪಿ ಲೆಕ್ಕಾಚಾರವಾಗಿದೆ.
ಇನ್ನು ನಿಗಮ ಮಂಡಳಿ ಅಧ್ಯಕ್ಷರನ್ನು ಇತ್ತೀಚೆಗೆ ಕೈಬಿಟ್ಟಿರುವುದರಿಂದ ಖಾಲಿ ಇರುವ ನಿಗಮಕ್ಕೆ ನೇಮಕ ಮಾಡುವ ಕುರಿತಂತೆ ಮಾತುಕತೆ ನಡೆಯಲಿದೆ. ಸುಮಾರು 50ಕ್ಕೂ ಹೆಚ್ಚು ನಿಗಮ ಮಂಡಳಿ ಹಾಗೂ ವಿವಿಧ ಪ್ರಾಕಾರ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಪಕ್ಷ ನಿಷ್ಠರಿಗೆ ನೀಡಬೇಕೆಂದು ಬೊಮ್ಮಾಯಿ ಅವರು ಮನವಿ ಮಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಅಂತಿಮವಾಗಿ ವರಿಷ್ಠರ ಭೇಟಿಗೆ ಅವಕಾಶ ಸಿಕ್ಕರೆ ಮಾತ್ರ ಇದು ಚರ್ಚೆಗೆ ಬರಲಿದ್ದು, ಒಂದು ವೇಳೆ ಭೇಟಿ ಸಾಧ್ಯವಾಗದಿದ್ದರೆ ಹೋದ ಪುಟ್ಟ, ಬಂದ ಪುಟ್ಟ ಎಂಬ ಗಾದೆಯಂತಾಗುತ್ತದೆ.