ಮಾಸಾಂತ್ಯಕ್ಕೆ ಸಿಎಂ ದೆಹಲಿಗೆ, ಮತ್ತೆ ಗರಿಗೆದರಿದ ಚಟುವಟಿಕೆ

Social Share

ಬೆಂಗಳೂರು,ನ.25- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ 29ರಂದು ನವದೆಹಲಿಗೆ ತೆರಳುತ್ತಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ವರಿಷ್ಠರ ಜೊತೆ ಚರ್ಚಿಸಲಿದ್ದಾರೆ.

ಬಹುದಿನಗಳ ನಂತರ ನವದೆಹಲಿಗೆ ಸಿಎಂ ತೆರಳುತ್ತಿರುವುದರಿಂದ ಸಹಜವಾಗಿ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದ್ದು, ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಯಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗುವ ಸಾಧ್ಯತೆಯಿದ್ದು, ಬಹುತೇಕ ಈ ಬಾರಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಾಗುವ ಸಂಭವವಿದೆ.
ಈ ಹಿಂದೆ ದೆಹಲಿಗೆ ತೆರಳಲು ಸಿಎಂ ಬೊಮ್ಮಾಯಿ ಅವರು ವರಿಷ್ಠರ ಅನುಮತಿಯನ್ನು ಕೋರಿದ್ದರು. ಆದರೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದರಿಂದ ನೆನೆಗುದಿಗೆ ಬಿದ್ದಿತ್ತು.

ಕಾಂಗ್ರೆಸ್‌ ಸಭೆಯಲ್ಲೇ ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದನೂರು ನಿಧನ

ಬಹುತೇಕ ಬಿಜೆಪಿ ವರಿಷ್ಠರು ಎರಡೂ ರಾಜ್ಯಗಳಲ್ಲಿ ಪ್ರಚಾರ, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಕಾರ್ಯತಂತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ 29ರಂದು ದೆಹಲಿಗೆ ತೆರಳುತ್ತಿರುವುದರಿಂದ ಸಹಜವಾಗಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಲಿದೆ.

ಸರ್ಕಾರದ ಮೇಲೆ ಕೇಳಿಬಂದಿರುವ 40% ಕಮೀಷನ್ ಆರೋಪ, ಚಿಲುಮೆ ಸಂಸ್ಥೆಯು ಮತದಾರರ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಿದ್ದು, ಇದರಲ್ಲಿ ಸರ್ಕಾರದ ಕೈವಾಡವಿದೆ ಎಂಬ ಪ್ರತಿಪಕ್ಷಗಳ ಆರೋಪ ಹಾಗೂ ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳ ಭರ್ತಿ, ಸಾಧ್ಯವಾದರೆ ಹಿರಿಯರಿಗೆ ಕೋಕ್ ಕೊಟ್ಟು ಸಂಪುಟ ಪುನಾರಚನೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಚರ್ಚಿಸಲು ಬೊಮ್ಮಾಯಿ ತೀರ್ಮಾನಿಸಿದ್ದಾರೆ.

ಇನ್ನೇನು 2023ರ ವಿಧಾನಸಭೆ ಚುನಾವಣೆ ಕೇವಲ ಐದಾರು ತಿಂಗಳು ಬಾಕಿ ಇರುವುದರಿಂದ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನಾದರೂ ಭರ್ತಿ ಮಾಡಬೇಕೆಂದು ಆಕಾಂಕ್ಷಿಗಳು ಸಿಎಂ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ.

ಕೆಲವರಿಗೆ ಹೆಚ್ಚುವರಿಯಾಗಿ ಎರಡೆರಡು ಖಾತೆಗಳನ್ನು ನೀಡಿದ್ದು, ಅವರಿಗೂ ಕೂಡ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ನಿರಂತರವಾಗಿ ಅಧಿಕಾರದ ರುಚಿ ಕಂಡಿರುವ ಹಿರಿಯರನ್ನು ಸಂಪುಟದಿಂದ ಕೋಕ್ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನಿರ್ದೇಶನ ನೀಡಬೇಕೆಂಬ ಅಭಿಪ್ರಾಯವು ಕೇಳಿಬಂದಿದೆ.

ಆದರೆ ವರಿಷ್ಠರ ಅನುಮತಿ ಇಲ್ಲದೆ ಯಾವುದೇ ಪ್ರಮುಖ ನಿರ್ಣಯ ತೆಗೆದುಕೊಳ್ಳದಂತಹ ಅಸಹಾಯಕ ಸ್ಥಿತಿಯಲ್ಲಿರುವ ಬೊಮ್ಮಾಯಿ ಅವರು ಆಕಾಂಕ್ಷಿಗಳಿಗೆ ಇಂದು, ನಾಳೆ ಎನ್ನುತ್ತಲೇ ಕಿವಿ ಮೇಲೆ ಹೂ ಇಡುತ್ತಲೇ ಬಂದಿದ್ದಾರೆ.

ಬೆಲ್ಟ್ ಹಾಗೂ ದೊಣ್ಣೆಯಿಂದ ವಸತಿ ಶಾಲೆಯ ಮಕ್ಕಳ ಮೇಲೆ ಹಲ್ಲೆ

ಬೆರಳೆಣಿಕೆಯಷ್ಟು ಆಕಾಂಕ್ಷಿಗಳು ಮಾತ್ರ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೆ ಉಳಿದವರು ಕರೆದು ಕೊಡುತ್ತೇನೆ ಎಂದರೂ ಯಾರೊಬ್ಬರು ಮುಂದೆ ಬರುತ್ತಿಲ್ಲ. ಕಾರಣ ಇರುವ ಕ್ಷೇತ್ರವನ್ನು ಉಳಿಸಿಕೊಂಡರೆ ಸಾಕು ನಮಗೆ ಸಚಿವ ಸ್ಥಾನವೂ ಬೇಡ, ಯಾವುದೂ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಐದಾರು ತಿಂಗಳು ಚುನಾವಣೆ ಇರುವಾಗ ಇಲಾಖೆ ಮೇಲೆ ನಿಗಾವಹಿಸಲು ಸಾಧ್ಯವಾಗುವುದಿಲ್ಲ. ಕ್ಷೇತ್ರದಲ್ಲಿ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ.

ಅಲ್ಲದೆ ಈಗ ಪ್ರತಿಯೊಂದು ಇಲಾಖೆಯ ಮೇಲೆ ಒಂದಿಲ್ಲೊಂದು ಆರೋಪಗಳು ಕೇಳಿಬಂದಿವೆ. ಚುನಾವಣೆ ಹೊಸ್ತಿಲಲ್ಲಿರುವಾಗ ಸಣ್ಣದೊಂದು ಎಡವಟ್ಟಾದರೆ ಪ್ರತಿಪಕ್ಷಗಳು ಅದನ್ನೇ ಅಸ್ತ್ರ ಮಾಡಿಕೊಂಡು ಮುಗಿಬೀಳಬಹುದೆಂಬ ಆತಂಕವು ಬಹುತೇಕರನ್ನು ಕಾಡುತ್ತಿದೆ.

ಹೀಗಾಗಿ ಈ ಹಿಂದೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅನೇಕರು ಮುಂದಿನ ಬಾರಿ ಗೆದ್ದಾಗ ನೋಡೋಣ ಎನ್ನುತ್ತಿದ್ದಾರೆ. ಅಷ್ಟಕ್ಕೂ ವರಿಷ್ಠರು ವಿಸ್ತರಣೆ ಇಲ್ಲವೇ ಪುನಾರಚನೆಗೆ ಅವಕಾಶ ಕೊಡುತ್ತಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕೇಜ್ರಿವಾಲ್ ಹತ್ಯೆಗೆ ಸಂಚು ಆರೋಪ, ತನಿಖೆಗೆ ಬಿಜೆಪಿ ಆಗ್ರಹ

ಏನೇ ಆದರೂ ಗುಜರಾತ್ ಮತ್ತು ಹಿಮಾಚಲ ಚುನಾವಣೆ ಫಲಿತಾಂಶ ಪ್ರಕಟವಾಗುವವರೆಗೂ ದೆಹಲಿಯಿಂದ ಹಸಿರು ನಿಶಾನೆ ಬರುವ ಯಾವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ.

CM Bommai, Delhi, Tour,

Articles You Might Like

Share This Article