ಬೆಂಗಳೂರು,ಮಾ.9-ಅಧಿವೇಶನದಲ್ಲಿ ಯಾವುದೇ ವಿಚಾರಗಳ ಚರ್ಚೆಗೆ ನಿರ್ಬಂಧವಿಲ್ಲ. ಬಜೆಟ್ ಮೇಲೆ ಸಮಗ್ರ ಚರ್ಚೆಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು. 2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದಾಗ ಕಾಂಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆಯುತ್ತಿದ್ದಾಗ ಮಧ್ಯಪ್ರವೇಶಿಸಿ ಮುಖ್ಯಮಂತ್ರಿ ಮಾತನಾಡಿದರು.
ಆಯವ್ಯಯ ಎಂಬುದು ಒಂದು ಪ್ರಮುಖ ದಾಖಲೆ. ಯಾವ ವರ್ಗಕ್ಕೆ ಯಾವ ಬಾಬ್ತಿಗೆ ಖರ್ಚು ಮಾಡಲಾಗುತ್ತದೆ ಎಂಬ ಚರ್ಚೆಯಾಗಲಿ ಒಂದು ತಿಂಗಳ ಕಾಲ ಚರ್ಚೆಯಾಗುತ್ತದೆ. ಎಲ್ಲ ಸದಸ್ಯರಿಗೂ ಚರ್ಚೆಯಲ್ಲಿ ಪಾಲ್ಗೊಳ್ಳುವ ಹಕ್ಕಿದೆ ಎಂದರು.
ವಿರೋಧ ಪಕ್ಷದ ನಾಯಕರು ಎರಡು ದಿನಗಳ ಕಾಲ ಬಜೆಟ್ ಮೇಲೆ ಮಾತನಾಡಿದ್ದಾರೆ. ಕೆಲವೊಂದು ಮೂಲಭೂತ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. 13 ಬಜೆಟ್ ಮಂಡಿಸಿದವರು. ನಮ್ಮ ಬಜೆಟ್ಗಿಂತ ಅವರ ಬಜೆಟ್ ಬಗ್ಗೆಯೇ ಹೆಚ್ಚು ಹೇಳಿದ್ದಾರೆ. ಅವರು ಸೇರಿದಂತೆ ಎಲ್ಲ ಸದಸ್ಯರು ಮಾತನಾಡಿದ್ದಕ್ಕೆ ಉತ್ತರ ಕೊಡುತ್ತೇವೆ.
ಕುಮಾರಸ್ವಾಮಿ ಅವರು 2 ಬಾರಿ ಮುಖ್ಯಮಂತ್ರಿಯಾಗಿದ್ದವರು. ಜೆಡಿಎಸ್ ಶಾಸಕಾಂಗದ ನಾಯಕರು ಬಜೆಟ ಮಂಡಿಸಿದವರು. ವಿರೋಧ ಪಕ್ಷದ ನಾಯಕರು ಯಾವ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದರೋ ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದಾರೆ ಅಡ್ಡಿಪಡಿಸುವುದು ಬೇಡ ಎಂದರು.
ಕಳೆದ ಎರಡು ವರ್ಷದಲ್ಲಿ ಉಂಟಾದ ಆರ್ಥಿಕ ಹಿಂಜರಿತ ಅದರ ನಂತರ ಬಜೆಟ್ ಹೆಂಗಿರಬೇಕು, ಸುಸ್ಥಿತಿಗೆ ಹೇಗೆ ತರಬೇಕು ಎಂಬ ಬಗ್ಗೆ ಚರ್ಚೆಯಾಗಲಿ ಒಳ್ಳಯ ಸಲಹೆಯನ್ನು ಸ್ವೀಕಾರ ಮಾಡುತ್ತೇವೆ. ಬಜೆಟ್ನಲ್ಲಿ ಬದಲಾವಣೆಗೆ ಮುಕ್ತವಾಗಿದ್ದೇವೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರು ಸಂಪೂರ್ಣವಾಗಿ ಮಾತನಾಡಿರುವುದನ್ನು ಕೇಳಿದ್ದೇವೆ. ಕುಮಾರಸ್ವಾಮಿ ಅವರು ಮಾತನಾಡಲಿ. ಎಲ್ಲರೂ ಮಾತನಾಡಿದಾಗ ಅಧಿವೇಶನಕ್ಕೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.
