ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ತೀವ್ರ ತರಾಟೆ

Social Share

ಬೆಂಗಳೂರು,ಅ.17- ರಾಜ್ಯದಲ್ಲಿ ಉಂಟಾದ ಅತಿವೃಷ್ಟಿ, ಪ್ರವಾಹದಿಂದ ಹಾನಿಗೀಡಾಗಿರುವ ಮನೆ ಹಾಗೂ ಬೆಳೆ ಪರಿಹಾರ ವಿತರಣೆ ತೃಪ್ತಿಕರವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ನಡೆದ ಜಿಲ್ಲಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಕಾರ್ಯವನ್ನು ಕೈಗೊಂಡಿಲ್ಲ. ಇದರಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಜಿಲ್ಲಾಧಿಕಾರಿಗಳು ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪ್ರಯೋಜನಗಳು ದೊರೆಯುವಂತೆ ಮಾಡಬೇಕು. ಆದರೆ ಜಿಲ್ಲಾಧಿಕಾರಿಗಳು ಕಚೇರಿ ಬಿಟ್ಟು ಕದಲುತ್ತಿಲ್ಲ ಎಂದು ಗರಂ ಆದರು.

ಮನೆ ಹಾನಿ ಹಾಗೂ ಬೆಳೆ ಹಾನಿಗೆ ಸಂಬಂಧಿಸಿದ ಪರಿಹಾರವಲ್ಲದೆ ಇತ್ತೀಚೆಗೆ ಕಾಣಿಸಿಕೊಂಡಿರುವ ಜಾನುವಾರುಗಳ ಚರ್ಮಗಂಟು ರೋಗ ನಿಯಂತ್ರಣಕ್ಕೆ ಕೈಗೊಂಡ ಕ್ರಮ ಹಾಗೂ ಪರಿಹಾರ ವಿತರಣೆ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನು ಮುಖ್ಯಮಂತ್ರಿ ಪಡೆದುಕೊಂಡರು.

ಮನೆ ಹಾಗೂ ಬೆಳೆ ಹಾನಿಯ ಪರಿಹಾರದ ಸಮೀಕ್ಷೆಗೆ ಅಕ್ಟೋಬರ್ ಅಂತ್ಯದವರೆಗೂ ಕಾಲಾವಕಾಶ ನೀಡಲಾಗಿದೆ. ಅಲ್ಲಿಯವರೆಗೂ ಅರ್ಹ ಫಲಾನುಭವಿಗಳ ಹೆಸರನ್ನು ವೆಬ್‍ಪೋರ್ಟಲ್‍ಗೆ ಸೇರಿಸಲು ಅವಕಾಶ ಕಲ್ಪಿಸಲಾಗಿದೆ.

ಹೀಗಾಗಿ ತಡ ಮಾಡದೆ ತ್ವರಿತಗತಿಯಲ್ಲಿ ಪ್ರವಾಹ, ಅತಿವೃಷ್ಟಿ, ಮಳೆಹಾನಿಗೆ ಸಂಭವಿಸಿದ ಸಮೀಕ್ಷೆಯನ್ನು ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಆಡಳಿತವನ್ನು ಚುರುಕುಗೊಳಿಸಬೇಕು ಎಂದು ಸೂಚಿಸಿದರು.

ಬಜೆಟ್ ಸೇರಿದಂತೆ ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿಯ ಬಗ್ಗೆಯೂ ಜಿಲ್ಲಾವಾರು ಮಾಹಿತಿ ಪಡೆದು ಸಲಹೆಸೂಚನೆಗಳನ್ನು ಮುಖ್ಯಮಂತ್ರಿ ನೀಡಿದರು. ಜಿಲ್ಲಾಧಿಕಾರಿಗಳು ಸಮಯೋಚಿತ ತೀರ್ಮಾನಗಳ ಮೂಲಕ ಜನರಿಗೆ ನೆರವಾಗಬೇಕು. ಸಮಯಪ್ರಜ್ಞೆ, ಸ್ಥಿತಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಒಬ್ಬ ಐಎಎಸ್ ಅಧಿಕಾರಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಮಹತ್ವಪೂರ್ಣ ಅವಕಾಶ. ಜಿಲ್ಲೆಯಲ್ಲಿ ನೀವು ಯಾವ ರೀತಿ ಹೆಜ್ಜೆ ಗುರುತು ಬಿಡುತ್ತೀರಿ ಎನ್ನುವುದು ಮುಖ್ಯವಾದುದು. ಈಗ ಬಹಳಷ್ಟು ಅಧಿಕಾರಿಗಳು ಜಿಲ್ಲಾಧಿಕಾರಿ ಹುದ್ದೆಯ ಅಧಿಕಾರ ಭಾಗವನ್ನಷ್ಟೇ ನೋಡುತ್ತಾರೆ. ಆ ಹುದ್ದೆಯ ಜವಾಬ್ದಾರಿ ಮತ್ತು ಆಡಳಿತದ ಪರಿಣಾಮವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ನೀವು ಆಡಳಿತದ ಭಾಗವಾಗಿದ್ದೀರಿ. ನಿಮಗೆ ಹೆಚ್ಚಿನ ಅಧಿಕಾರವೂ ಇದೆ. ನೀವು ಕೈಗೊಳ್ಳುವ ನಿರ್ಣಯಗಳು ಆಡಳಿತ ನಿರ್ವಹಣೆಯಲ್ಲಿ ಬಹಳ ಮುಖ್ಯ ಎಂದು ತಿಳಿಸಿದರು.

ಯಾವುದೇ ಕೆಲಸ ಮಾಡಬಾರದು ಅಂದುಕೊಂಡರೆ 101 ಕಾರಣಗಳನ್ನು ನೀಡಬಹುದು. ಒಂದು ಒಳ್ಳೆಯ ಕೆಲಸ ಮಾಡಬೇಕೆಂದರೆ ಒಂದೇ ಕಾರಣ ಸಾಕು. ಆದ್ದರಿಂದ ಸಕಾಲಿಕ ತೀರ್ಮಾನಗಳನ್ನು ಕೈಗೊಂಡು ಉತ್ತಮ ಆಡಳಿತ ನೀಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ತಾಕೀತು ಮಾಡಿದರು.

ಸಮಸ್ಯೆಗಳಿದ್ದರೆ, ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮಾರ್ಗದರ್ಶನ ಪಡೆಯಬೇಕು. ಎಲ್ಲ ಜಿಲ್ಲಾಧಿಕಾರಿಗಳು ಮುಕ್ತವಾಗಿ ತಮ್ಮ ಅನುಭವ ಹಂಚಿಕೊಳ್ಳಬೇಕು. ಆಗ ಸರ್ಕಾರ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ ಎಂದು ಸಭೆಯ ಆರಂಭದಲ್ಲಿ ತಿಳಿಸಿದರು.

ಆಯವ್ಯಯ ಅನುಷ್ಠಾನ ಕುರಿತಂತೆ ಸರ್ಕಾರಿ ಆದೇಶಗಳಾಗಿವೆ. ತಳಹಂತದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಂಡು, ವರ್ಷಾಂತ್ಯದಲ್ಲಿ ಗುರಿ ಸಾಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಸಚಿವರಾದ ಆರ್. ಅಶೋಕ್, ಜೆ.ಸಿ. ಮಾಧುಸ್ವಾಮಿ, ವಿ.ಸುನಿಲ್‍ಕುಮಾರ್, ಸಿ.ಸಿ.ಪಾಟೀಲ್, ವಿ.ಸೋಮಣ್ಣ, ಬಿ.ಶ್ರೀರಾಮುಲು, ಕೆ.ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Articles You Might Like

Share This Article