ಪಂಚರಾಜ್ಯಗಳ ಫಲಿತಾಂಶ : ಸಿಎಂ ಬೊಮ್ಮಾಯಿಗೆ ಸಿಹಿ-ಕಹಿ..!

Social Share

ಬೆಂಗಳೂರು, ಮಾ.10- ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಸಿಹಿ- ಕಹಿ ಎರಡನ್ನೂ ಉಂಟು ಮಾಡಿದೆ. ಮೇಲ್ನೋಟಕ್ಕೆ ಪಕ್ಷ ಗೆದ್ದಿರುವುದಕ್ಕೆ ಖುಷಿ ಪಡುತ್ತಿದ್ದರೂ ಒಳಗೊಳಗೆ ಫಲಿತಾಂಶವು ತಮ್ಮ ಕುರ್ಚಿಗೆ ಕಂಟಕ ತರಬಹುದು ಎಂಬ ಆತಂಕವೂ ಕಾಡುತ್ತಿದೆ.
ಈ ಫಲಿತಾಂಶದಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬೊಮ್ಮಯಿ ನಾಯಕತ್ವ ಬದಲಾವಣೆ ಆಗುವುದೇ ಇಲ್ಲ ಎಂದು ಬಿಜೆಪಿಯ ಯಾವೊಬ್ಬ ನಾಯಕರೂ ಗಟ್ಟಿ ದನಿಯಲ್ಲಿ ಹೇಳುವ ಧೈರ್ಯ ತೋರುತ್ತಿಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದು ಪಂಚರಾಜ್ಯಗಳ ಚುನಾವಣೆಯಲ್ಲಿ ಸಾಬೀತಾಗಿದೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲವೇ ನಮಗೆ ಗೆಲುವಿಗೆ ಸಾಕು ಎಂಬ ಮಾತು ಕಮಲ ಪಾಳಯದಲ್ಲಿ ಹಬ್ಬಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇದೇ 17 ಇಲ್ಲವೇ 18ರಂದು ಬಿಜೆಪಿಯಲ್ಲಿ ದೊಡ್ಡಮಟ್ಟದ ಭಾರೀ ಬದಲಾವಣೆ ಆಗಲಿದೆ ಎಂಬ ಗುಸು ಗುಸು ಕೇಳಿ ಬರುತ್ತಿದೆ.
ಒಂದು ವೇಳೆ ಐದು ರಾಜ್ಯಗಳ ಪೈಕಿ ಬಿಜೆಪಿಗೆ ಹಿನ್ನಡೆಯಾಗಿದ್ದರೆ ಖಂಡಿತವಾಗಿಯೂ ಬೊಮ್ಮಯಿ ನಾಯಕತ್ವ ಮುಂದಿನ ವಿಧಾನಸಭೆ ಚುನಾವಣೆವರೆಗೂ ಅವರ ಕುರ್ಚಿ ಗಟ್ಟಿಯಾಗಿರುತ್ತಿತ್ತು. ಆದರೆ, ಇದೀಗ ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಬಿಜೆಪಿ ಪರ ಫಲಿತಾಂಶ ಬಂದಿರುವುದು ಅವರಿಗೆ ಸಮಾಧಾನ ತಂದಂತೆ ಕಾಣುತ್ತಿಲ್ಲ.
ರಾಜ್ಯ ವಿಧಾನಸಭೆ ಚುನಾವಣೆಗೆ ಸರಿಯಾಗಿ ಇನ್ನೊಂದು ವರ್ಷ ಬಾಕಿ ಇದೆ. ಹೊಸ ತಂತ್ರ ಪ್ರಯೋಗ ಮಾಡಬೇಕು ಎಂಬ ದೃಷ್ಟಿಯಿಂದ ಬೊಮ್ಮಾಯಿ ಅವರನ್ನೂ ಬದಲಾಯಿಸಿ ಮತ್ತೊಬ್ಬರನ್ನು ಅಧಿಕಾರದಲ್ಲಿ ಕೂಡಿಸಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ, ಟೆಂಡರ್ ಪ್ರಕ್ರಿಯೆಗಳಲ್ಲಿ ಹಗರಣ ಮತ್ತು ಶೇ.40ರಷ್ಟು ಕಮಿಷನ್ ಹಗರಣಗಳು ಬಹುವಾಗಿ ಸದ್ದು ಮಾಡಿವೆ. ಇವು ಆಗಲೇ ಬಸವರಾಜ ಬೊಮ್ಮಾಯಿ ಅವರ ಕುರ್ಚಿಗೆ ಕಂಟಕ ತಂದಿದ್ದವು.
ಆದರೆ, ಕೇಂದ್ರ ನಾಯಕರ ಬಲದಿಂದಾಗಿ ಅಕಾರ ಉಳಿಸಿಕೊಂಡಿದ್ದಾರೆ. ಇಂತಹ ವಿಷಯಗಳು ಚುನಾವಣಾ ಅಸ್ತ್ರ ಆಗಬಾರದು ಎಂಬ ಮುಂದಾಲೋಚನೆಯಿಂದ ಬೊಮ್ಮಾಯಿ ಅವರ ಕುರ್ಚಿಗೂ ಕುತ್ತು ತರಬಹುದು ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿವೆ.
ಹಾಗೇನಾದರೂ ಒಂದು ವೇಳೆ ಅಂತಹ ಸಂದರ್ಭ ಎದುರಾದರೆ ಬಸವರಾಜ ಬೊಮ್ಮಾಯಿ ಅವರು ಅದಕ್ಕೆ ತಲೆಬಾಗುತ್ತಾರೆ ಹೊರತು ಕೇಂದ್ರ ನಾಯಕರನ್ನು ಎದುರು ಹಾಕಿಕೊಂಡು ಅಕಾರದಲ್ಲಿ ಗಟ್ಟಿಯಾಗಿ ಕೂಡುತ್ತಾರೆ ಎಂಬ ನಿರೀಕ್ಷೆಗಳೂ ಯಾರಲ್ಲಿಯೂ ಇಲ್ಲ. ನಿರೀಕ್ಷೆಯಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಕಾರ ಹಿಡಿಯುತ್ತಿರುವುದರಿಂದ ಪಕ್ಷವನ್ನು ಕಟ್ಟಿ ನಿಲ್ಲಿಸುವವರಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ.
ಕೋವಿಡ್ ನಿರ್ವಹಣೆ, ಆರ್ಥಿಕ ಕುಸಿತ, ನಿರುದ್ಯೋಗ, ಬೆಲೆ ಏರಿಕೆ ಇಂತಹ ಎಲ್ಲ ವಿಷಯಗಳ ಹೊರತಾಗಿಯೂ ಜನಸಮುದಾಯ ಬಿಜೆಪಿ ಪರ ಗುರುತಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ ಅಥವಾ ಬಿಜೆಪಿ ವಿರುದ್ಧವಾಗಿ ಪರ್ಯಾಯ ಆಯ್ಕೆಗಳಿಲ್ಲದೆ ಅನಿವಾರ್ಯವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ವಿಮರ್ಶಿಸಲೂಬಹುದು.
ಅದೇನೆ ಇದ್ದರೂ ಸಹ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಓಟಕ್ಕೆ ಲಗಾಮು ಇಲ್ಲ ಎಂಬ ಸಂದೇಶವಂತೂ ಖಚಿತವಾಗಿದೆ. ಬಳಿಕ ಅವರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಯಾರೂ ಎದುರುತ್ತರ ಎಲ್ಲದೆ ಪಾಲಿಸುವಂತಹ ಅನಿವಾರ್ಯತೆ ಸೃಷ್ಟಿಯಾದರೂ ಅಚ್ಚರಿಯಿಲ್ಲ.
ಚುನಾವಣೆ ವರ್ಷದಲ್ಲಿಯೇ ಬಿಜೆಪಿ ಉತ್ತರಾಖಂಡದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲು ಮಾಡಿದೆ. 2017ರಲ್ಲಿ ಅಕಾರಕ್ಕೆ ಬಂದಾಗ ಬಿಜೆಪಿಯಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಪೂರೈಸಲು ಕೆಲವು ದಿನಗಳು ಬಾಕಿ ಇರುವಾಗಲೇ 2021ರ ಮಾರ್ಚ್ 9ರಂದು ಅವರ ರಾಜೀನಾಮೆ ಪಡೆಯಲಾಯಿತು.
ಬಳಿಕ ಪೌರಿ ಗರ್ವಾಲ್ ಕ್ಷೇತ್ರದ ಸಂಸದ ತೀರಥ್ ಸಿಂಗ್ ರಾವತ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ತೀರಥ್ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಅಕಾರ ವಹಿಸಿಕೊಂಡ 116 ದಿನದೊಳಗೆ ಅವರನ್ನು ಬದಲಾಯಿಸಿ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಹೀಗೆ ಚುನಾವಣೆ ಮುಂಚಿತವಾಗಿ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಮೂಲಕ ಧೈರ್ಯವಾಗಿ ಬದಲಾಯಿಸಿತ್ತು.
ರಾಜ್ಯದಲ್ಲಿ ಒಂದು ವೇಳೆ ಮುಖ್ಯಮಂತ್ರಿ ಹುದ್ದೆ ಖಾಲಿಯಾದರೆ ಅಲ್ಲಿ ಬಿಜೆಪಿ ಹೈಕಮಾಂಡ್ ಯಾರನ್ನು ಕೂಡಿಸುತ್ತದೆ ಎಂಬುದೂ ಮುಖ್ಯ. ಐದು ರಾಜ್ಯಗಳ ಚುನಾವಣೆಯಲ್ಲಿ ಜನಸಾಮಾನ್ಯರ ವಿಷಯಗಳ ಹೊರತಾಗಿಯೂ ಹಿಂದುತ್ವದ ನಿಲುವೇ ಮುಖ್ಯವಾಗಿರುವುದು ಕಂಡುಬಂದಲ್ಲಿ, ಕರ್ನಾಟದಲ್ಲಿಯೂ ಆರ್‍ಎಸ್‍ಎಸ್ ಮತ್ತು ಪಕ್ಷಕ್ಕೆ ನಿಷ್ಟರಾಗಿರುವವರನ್ನು ಮುಖ್ಯಮಂತ್ರಿ ಖುರ್ಚಿಯಲ್ಲಿ ಕೂಡಿಸುವುದು ಖಚಿತವಾಗುತ್ತದೆ.
ಬಹುತೇಕ ಎರಡು ವರ್ಷ ಅಧಿಕಾರದಲ್ಲಿದ್ದ ಯಡಿಯೂರಪ್ಪ ಅವರನ್ನು ಬದಲಾಯಿಸಿ 2021ರ ಜುಲೈನಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ.

Articles You Might Like

Share This Article