ಬೊಮ್ಮಾಯಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಿಕೆ

Social Share

ಬೆಂಗಳೂರು, ಆ.18- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಡೆಸಲು ನಿರ್ಧರಿಸಿದ್ದ ಜನೋತ್ಸವ ಕಾರ್ಯಕ್ರಮವನ್ನು ಮತ್ತೆ ಮುಂದೂಡಲಾಗಿದೆ. ಒಂದಿಲ್ಲೊಂದು ಕಾರಣಕ್ಕೆ ಜನೋತ್ಸವ ಕಾರ್ಯಕ್ರಮದತ್ತ ಕಣ್ಣಿಟ್ಟು ನೋಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಬೊಮ್ಮಾಯಿ ಅವರಿಗೆ ಎದುರಾಗುತ್ತಿದ್ದು, ಜನೋತ್ಸವ ಈಗ ಮತ್ತೆ ಮುಂದೂಡಿಕೆಯಾಗಿದೆ.

ಈ ಹಿಂದೆ ಜನೋತ್ಸವ ಕಾರ್ಯಕ್ರಮ ನಿಗದಿಯಾಗಿದ್ದಾಗ ಪ್ರವೀಣ್ ನೆಟ್ಟಾರು ಹತ್ಯೆ ನಡೆಯಿತು. ಆಗ ಸರಕಾರ ವರ್ಷಾಚರಣೆ ಸಂಭ್ರಮ ನಡೆಸುವುದು ಬೇಡ ಎಂದು ಕಾರ್ಯಕರ್ತರು ಪಟ್ಟು ಹಿಡಿದರೂ ಬೊಮ್ಮಾಯಿ ಜನೋತ್ಸವದ ಜಪದಲ್ಲಿದ್ದರು. ತಡರಾತ್ರಿ ಹೈಕಮಾಂಡ್‍ನ ಹಿರಿಯರೊಬ್ಬರು ಕರೆ ಮಾಡಿ ಪ್ರಸಂಗಾವಧಾನತೆ ಎಂಬ ಶಬ್ದ ಕನ್ನಡದ ಡಿಕ್ಷನರಿಯಲ್ಲಿ ಇರುವುದು ಗೊತ್ತೇ? ಎಂದು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ.

ಈ ಮೊದಲು ಜುಲೈ 28ರಂದು ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತಾದರೂ ಆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಸಂಭವಿಸಿದ ಕಾರಣ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೆಚ್ಚಾಗಿದ್ದ ಕಾರಣ ಜನೋತ್ಸವವನ್ನು ಆಗಸ್ಟ್ 28ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೊಮ್ಮೆ ಜನೋತ್ಸವವನ್ನು ಮುಂದೂಡಲಾಗಿದೆ.

ಗೌರಿ-ಗಣೇಶ ಹಬ್ಬದ ಆಸುಪಾಸಿನಲ್ಲಿ ಕಾರ್ಯಕ್ರಮ ನಡೆಯುವುದರಿಂದ ಪಕ್ಷದ ನಾಯಕರು, ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳುವುದು ಕಷ್ಟ ಎನ್ನುವ ಕಾರಣಕ್ಕೆ ಮುಂದೂಡಲಾಗಿದೆ ಎನ್ನುವ ಕಾರಣವನ್ನು ಸರ್ಕಾರ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಜು.28ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಆಯೋಜಿಸಲಾಗಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದ್ದು, ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಕಾರ್ಯಕರ್ತರಿಂದಲೇ ಸರ್ಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜನೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

ಹೀಗಾಗಿ ಜಗವೆಲ್ಲ ಮಲಗಿರಲು ಎದ್ದ ಬುದ್ಧನ ರೀತಿ ಮಧ್ಯರಾತ್ರಿ 12 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಜನೋತ್ಸವವನ್ನು ರದ್ದುಗೊಳಿಸಿದ ನಿರ್ಧಾರ ಪ್ರಕಟಿಸಿದ್ದರು. ಈಗ ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ಆ.28ರಂದು ಜನೋತ್ಸವ ನಡೆಸುವುದಾಗಿ ಪ್ರಕಟಿಸಿದ್ದರು. ಆದರೆ, ಪಕ್ಷ ಅದಕ್ಕೆ ಮತ್ತೆ ತಡೆ ಒಡ್ಡಿದೆ. ನಾಡು ಗೌರಿ- ಗಣೇಶ ಹಬ್ಬದ ಸಂಭ್ರಮದಲ್ಲಿ ಇರುವಾಗ ಜನೋತ್ಸವ ಬೇಡ ಎಂದು ಕಾರಣ ನೀಡಲಾಗಿದೆ.

ಬೊಮ್ಮಾಯಿ ಅವರ ಪೊಲಿಟಿಕಲ್ ಬಾಸ್ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದ ಬೆನ್ನಲ್ಲೇ ಬೊಮ್ಮಾಯಿ ಅವರ ರಾಜಕೀಯ ಸಮಾವೇಶಕ್ಕೆ ಮತ್ತೊಮ್ಮೆ ಬ್ರೇಕ್ ಬಿದ್ದಿದೆ. ಕಾಕತಾಳೀಯವಾದರೂ ರಾಜಕೀಯವಾಗಿ ಇದು ಹಲವು ಲೆಕ್ಕಾಚಾರ ಹಾಗೂ ಸಂದೇಶ ರವಾನೆಗೆ ಕಾರಣವಾಗಿದ್ದು, ಜನೋತ್ಸವದಲ್ಲಿ ಜನರತ್ತ ವಿಕ್ಟರಿ ಸಿಂಬಲ್ ಬೀಸಲು ಕಾಯುತ್ತಿರುವ ಬೊಮ್ಮಾಯಿ ಅವರ ಜನೋತ್ಸವ ಚೌತಿ ಚಂದ್ರನ ದರ್ಶನದಂತಾಗಿದೆ.

Articles You Might Like

Share This Article