ಅವಧಿಗೂ ಮುನ್ನ ಚುನಾವಣೆ..? ಸಿಎಂ ಬೊಮ್ಮಾಯಿ ಹೇಳಿದ್ದೇನು..?

Spread the love

ಶಿವಮೊಗ್ಗ,ಏ.20- ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅವಧಿಗೂ ಮುನ್ನ ವಿಧಾನಸಭಾ ಚುನಾವಣೆ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಅನಗತ್ಯವಾಗಿ ಅವಧಿಗೂ ಮುನ್ನ ಚುನಾವಣೆ ಬರುತ್ತದೆ ಎಂದು ಪುಕಾರು ಹಬ್ಬಿಸುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆಯೇ ನಡೆದಿಲ್ಲ. ನಮಗೆ ಅಂತಹ ಆಲೋಚನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನಾನು ಹೇಳುವುದೇನೆಂದರೆ, ತಾವು ಆತಂಕಕ್ಕೆ ಒಳಗಾಗುವುದುಬೇಡ. ಕಾನೂನು ಬದ್ಧವಾಗಿಯೇ ಎಲ್ಲಾ ತನಿಖೆ ಆಗುತ್ತದೆ ಎಂದು ಹುಬ್ಬಳ್ಳಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದರು. ಗಲಭೆಗೆ ಕಾರಣವಾಗಿರುವ ಆರೋಪಿಗಳ ವಿರುದ್ಧ ಮುಲಾಜ್ ಇಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ತನಿಖೆ ಮಾಡುವ ಸಂದರ್ಭದಲ್ಲಿ ಬೇರೆ-ಬೇರೆ ರೀತಿ ಹೇಳಿಕೆ ನೀಡಿ ತನಿಖಾಧಿಕಾರಿಗಳಿಗೆ ಪ್ರಭಾವ ಬೀರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಹುಬ್ಬಳ್ಳಿ ಪ್ರಕರಣದ ತನಿಖೆ ಕಾನೂನು ಬದ್ಧವಾಗಿ, ಸಾಕ್ಷಿ ಆಧಾರದ ಮೇಲೆ ನಡೆಯುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್‍ನವರು ಏಕೆ ಆತಂಕಗೊಂಡಿದ್ದಾರೋ ನನಗೆ ಗೊತ್ತಿಲ್ಲ. ಸತ್ಯ ಎಲ್ಲವೂ ಹೊರಗೆ ಬರುತ್ತದೆ. ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಘಟನೆಯೇ ಈಗ ಹುಬ್ಬಳ್ಳಿಯಲ್ಲಿ ಆಗಿದೆ ಎಂದು ಹೇಳಿದರು.

ದಿಂಗಾಲೇಶ್ವರ ಶ್ರೀಗಳ 30% ಕಮೀಷನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸ್ವಾಮೀಜಿಗಳ ಬಳಿ ಕಮೀಷನ್ ಕೊಟ್ಟಿರುವುದಕ್ಕೆ ಏನಾದರೂ ದಾಖಲೆಗಳಿದ್ದರೆ ಸರ್ಕಾರಕ್ಕೆ ಕೊಡಲಿ. ಅವರು ಹೇಳಿದ ರೀತಿಯೇ ನಾವು ತನಿಖೆ ಮಾಡಿಸಲು ಸಿದ್ದವಿದ್ದೇ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಆರೋಪಕ್ಕೆ ಯಾವುದಾದರೂ ಆಧಾರ ನೀಡಿದಲ್ಲಿ ಖಂಡಿತ ತನಿಖೆ ಮಾಡಿಸುತ್ತೇನೆ. ಅವರ ಕಾಲದಲ್ಲಿ ಸಾಕಷ್ಟು ಆರೋಪ ಬಂದಿತ್ತು. ಆಧಾರ ಇದ್ದರೆ ಅಷ್ಟೇ ಮಾತನಾಡಬೇಕು. ಆಧಾರ ಇಲ್ಲದಿದ್ದರೆ ಮಾತನಾಡಬಾರದು.

ಮಠದ ಕೆಲಸಗಳಿಗೆ ನಾವು ಅನುದಾನ ಕೊಡುತ್ತೇವೆ. ಜಿಲ್ಲಾಕಾರಿಗಳು ಹಣ ಬಿಡುಗಡೆ ಮಾಡುತ್ತಾರೆ. ಸ್ವಾಮೀಜಿಯೊಬ್ಬರು ಹೇಳಿಬಿಟ್ಟರು ಎಂಬ ಕಾರಣಕ್ಕೆ ಕಾಂಗ್ರೆಸ್‍ನವರು ಬಹಳ ಹತಾಶರಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯದಲ್ಲೇ ಪ್ರಾಥಮಿಕ ತನಿಖಾ ವರದಿ ಬರಲಿದೆ. ನಂತರ ಯಾವ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂಬುದನ್ನು ಸರ್ಕಾರ ತೀರ್ಮಾನಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಇದರಲ್ಲಿ ಯಾರನ್ನೂ ಕೂಡ ರಕ್ಷಣೆ ಮಾಡುವುದಿಲ್ಲ. ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಸೂಚಿಸಲಾಗಿದೆ. ಅಧಿಕಾರಿಗಳು ತನಿಖೆ ನಡೆಸಲು ಸಹಕಾರ ನೀಡಬೇಕು ಎಂದು ಸಿಎಂ ಮನವಿ ಮಾಡಿದರು.

Facebook Comments