ಕಮಿಷನ್ ದಂಧೆ 40ರಿಂದ ಶೇ.50ಕ್ಕೆ ಹೆಚ್ಚಳ, ಸಿಎಂಗೆ ಮತ್ತೆ ಪತ್ರ ಬರೆದ ಗುತ್ತಿಗೆದಾರರು

Social Share

ಬೆಂಗಳೂರು,ಆ.24- ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘಟನೆಗಳು ಮತ್ತೊಮ್ಮೆ ಸಮರ ಸಾರಿವೆ. ಬಾಕಿ ಬಿಲ್ ಪಾವತಿ ಮಾಡದೆ ಇದ್ದರೆ ಅನಿರ್ದಿಷ್ಟಾವ ಹೋರಾಟ ನಡೆಸುವ ಜೊತೆ, ಆತ್ಮಹತ್ಯೆ ಮಾಡಿ ಕೊಳ್ಳುವ ಬೆದರಿಕೆಯನ್ನು ಗುತ್ತಿಗೆದಾರರ ಸಂಘ ಮಾಡಿದೆ. ಮತ್ತೊಂದೆಡೆ ಕಮಿಷನ್ ದಂಧೆ ಶೇ.50ಕ್ಕೆ ಹೆಚ್ಚಾಗಿದೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ 100ಕ್ಕೂ ಹೆಚ್ಚು ಕಟ್ಟಡಗಳನ್ನು ನಿರ್ಮಿಸಿರುವ ವಸತಿ ಶಿಕ್ಷಣ ಶಾಲೆಗಳ ಸಂಘದ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಬಾಕಿ ಇರುವ 1200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದೆ.

ಹಲವು ವರ್ಷಗಳಿಂದ ಸಾಲ ಮಾಡಿ ಕೆಲಸ ಮಾಡಿದ್ದೇವೆ. ಸರ್ಕಾರದಿಂದ ಬಾಕಿ ಪಾವತಿಯಾಗದೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣಕಾಸಿನ ಸಮಸ್ಯೆಯಿಂದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರಿಗೆ ಹಾಗೂ ಕಚ್ಚಾ ಸರಕು ಖರೀದಿಯ ಹಣ ಪಾವತಿ ಮಾಡಲಾಗಿಲ್ಲ. ಸಾಲದ ಬಡ್ಡಿ ಪಾವತಿಸಲಾಗುತ್ತಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಬಾಕಿ ಬಿಲ್ ಪಾವತಿಸುವಂತೆ ಸಮಾಜ ಕಲ್ಯಾಣ ಸಚಿವ ಕೋಟಾಶ್ರೀನಿವಾಸ ಪೂಜಾರಿ, ಇಲಾಖೆಯ ಅಧಿಕಾರಿಗಳು ಸೇರಿ ಎಲ್ಲರನ್ನು ಭೇಟಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಹಣ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದ್ದಾರೆ.

ಕಮಿಷನ್ ಶೇ.50ಕ್ಕೆ ಹೆಚ್ಚಳ: ಬಿಬಿಎಂಪಿಯಲ್ಲಿರುವ ಶೇ.50ರಷ್ಟು ಕಮಿಷನ್ ರದ್ದುಗೊಳಿಸಬೇಕು ಹಾಗೂ ಬಾಕಿ ಇರುವ ಗುತ್ತಿಗೆದಾರರ ಸಾವಿರಾರು ಕೋಟಿ ಬಾಕಿ ಬಿಲ್ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ, ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.

ನಿನ್ನೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಅವರು, ನಮ್ಮ ಬೇಡಿಕೆ ಈಡೇರದಿದ್ದರೆ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಬಿಬಿಎಂಪಿಯಲ್ಲಿರುವ ಶೇ.40 ಅಲ್ಲ ಶೇ.50 ರಷ್ಟು ಕಮಿಷನ್ ಕೊಡಬೇಕು. ಲಂಚ ಕೊಡದಿದ್ದರೆ, ಬಿಬಿಎಂಪಿ ಅಧಿಕಾರಿಗಳು ಪ್ರತಿಯೊಂದಕ್ಕೂ ಕಿರಿ ಕಿರಿ ಮಾಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಬಿಬಿಎಂಪಿಯ ಹೊಸ ಆದೇಶಗಳಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ನಿರ್ವಹಣೆ ಮಾಡಿದ ಕಾಮಗಾರಿಯ ಫೈಲ್ ಕ್ಲಿಯರ್ ಮಾಡಿಸಿಕೊಳ್ಳಲು ಇರುವ ಟೇಬಲ್ ಸಂಖ್ಯೆ ಇಳಿಸುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಮೊದಲು ಏಳರಿಂದ ಎಂಟು ಹಂತಗಳಲ್ಲಿ ಫೈಲ್ ಕ್ಲಿಯರ್ ಆಗುತ್ತಿತ್ತು. ಇದೀಗ 38 ಹಂತದ ಟೇಬಲ್ ದಾಟಿದರಷ್ಟೇ ಬಿಲ್ ಕ್ಲಿಯರ್ ಆಗುತ್ತಿದೆ. ಅಧಿಕಾರಿಗಳ ಹೊಸ ಆದೇಶಗಳಿಂದಾಗಿ ಕಡತ ಹೆಚ್ಚಳವಾಗಿ ಕಮಿಷನ್‍ಪ್ರಮಾಣ ಏರಿಕೆಯಾಗುತ್ತಿದೆ ಎಂದು ಅವರು ದೂರಿದ್ದಾರೆ.

ನಿಯಮದ ಪ್ರಕಾರ ಕಾಮಗಾರಿ ಪೂರ್ಣಗೊಂಡರೂ ಬೇರೆ ಕಚೇರಿ ಅಧಿಕಾರಿಗಳಿಂದ ಮತ್ತೊಮ್ಮೆ ಪರಿಶೀಲನೆ ನಡೆಸುತ್ತಿರುವುದು ಕಮಿಷನ್ ಏರಿಕೆಗೆ ಮತ್ತೊಂದು ಕಾರಣ ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ಕಳೆದ ಎರಡು ವರ್ಷಗಳಿಂದ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡುತ್ತಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಸಾವಿರ ಕೋಟಿ ರೂ. ಹಾಗೂ ಸಿಎಂ ನಗರೋತ್ಥಾನ ಫಂಡ್ ಯೋಜನೆಯ 600 ಕೋಟಿ ರೂ.ಗಳು ಸೇರಿದಂತೆ ಮೂರುವರೆ ಸಾವಿರ ಕೋಟಿ ರೂ.ಗಳ ಬಿಲ್ ಬಿಡುಗಡೆ ಮಾಡಬೇಕಿದ್ದು, ಕೂಡಲೇ ಅಧಿಕಾರಿಗಳು ಬಾಕಿ ಬಿಲ್ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮಂಜುನಾಥ್ ಎಚ್ಚರಿಸಿದ್ದಾರೆ.

Articles You Might Like

Share This Article