ಇಂದು ಸಂಜೆ ಸಿಎಂ ಮಹತ್ವದ ಸಭೆ, ಲಾಕ್ ಆಗುತ್ತಾ ಕರ್ನಾಟಕ..?

Social Share

ಬೆಂಗಳೂರು,ಜ.17-ರಾಜ್ಯದಲ್ಲಿ ಕಠಿಣ ನಿಯಮ ಜಾರಿಗೊಳಿಸಿದ್ದರೂ ಕೋವಿಡ್ ಸ್ಫೋಟ ಮುಂದುವರೆದಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸಂಜೆ ಮಹತ್ವದ ಸಭೆ ಕರೆದಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ, ಕಂದಾಯ ಸಚಿವ ಆರ್.ಅಶೋಕ್ ಮತ್ತು ಕೊವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆ ಅಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ನಿರ್ಬಂಧಗಳು ಜ.19ಕ್ಕೆ ಅಂತ್ಯವಾಗಲಿವೆ. ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಅಧಿಕಾರಿಗಳು ಮತ್ತು ಸಚಿವರು ಮಾಹಿತಿ ನೀಡಲಿದ್ದಾರೆ. ಎಲ್ಲಾ ಜಿಲ್ಲೆಯ ಕೊರೊನಾ ಸ್ಥಿತಿ ಬಗ್ಗೆ ಸಿಎಂ ವರದಿ ಪಡೆಯಲಿದ್ದಾರೆ.ನೈಟ್ ಕಫ್ರ್ಯೂ , ವೀಕೆಂಡ್ ಕಫ್ರ್ಯೂ ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.
1ರಿಂದ 9 ನೇ ತರಗತಿ ಶಾಲೆಗಳನ್ನು ಬಂದ್ ಮಾಡುವ ಚರ್ಚೆ ಸಾಧ್ಯತೆ ಇದೆ. ಕಠಿಣ ನಿಯಮಗಳನ್ನು ಮುಂದುವರಿಸುವ ಔಚಿತ್ಯ ಮತ್ತು ಫೆಬ್ರವರಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ರಾತ್ರಿ ನಿಷೇಧಾಜ್ಞಾ, ವಾರಾಂತ್ಯದ ನಿಷೇಧಾಜ್ಞಾ, ಸಿನಿಮಾ ಮಂದಿರ, ರೆಸ್ಟೋರೆಂಟ್ ಸೇರಿ ಎಲ್ಲಾ ಕಡೆ ಶೇ. 50ರ ನಿಯಮ ಜಾರಿ, ಮದುವೆ ಸಮಾರಂಭಗಳಿಗೆ ಜನರ ಮಿತಿ ಹೇರಲಾಗಿದೆ. ಮೂರನೇ ಅಲೆ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿರುವ ಹಿನ್ನೆಲೆ ಆನ್‍ಲೈನ್ ಕ್ಲಾಸ್ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಶಾಲೆ ಬಂದ್ ಮಾಡುವ ಜವಾಬ್ದಾರಿಯನ್ನು ಸರ್ಕಾರ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿದೆ.
ಇನ್ನು ಜಾರಿಗೆ ತಂದಿರುವ ಕಠಿಣ ನಿಯಮ, ವೀಕೆಂಡ್ ಕಫ್ರ್ಯೂ, 50-50 ರೂಲ್ಸ್ ಎಷ್ಟು ಪರಿಣಾಮಾಕಾರಿ ಆಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿಗಳು ಪಡೆಯಲಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನ ಕಠಿಣ ಕ್ರಮ ಮತ್ತು ವೀಕೆಂಡ್ ಕಫ್ರ್ಯೂಗೆ ಹೋಟೆಲ್ ಮಾಲೀಕರ ವಿರೋಧದ ಬಗ್ಗೆ ಇಂದು ನಡೆಯುವ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.
ಆದರೂ ಕೋವಿಡ್ ಸೋಂಕು ಪ್ರಕರಣಗಳು ಮಾತ್ರ ಏರುತ್ತಲೇ ಇದೆ. ಸದ್ಯ ನಿತ್ಯ 30 ಸಾವಿರ ಸಂಖ್ಯೆ ದಾಟಿದ್ದು, ಆತಂಕ ಮೂಡಿಸಿದೆ. ಈ ಕುರಿತು ಮಹತ್ವದ ಸಮಾಲೋಚನೆ ನಡೆಯಲಿದೆ. ಈಗಾಗಲೇ ಇರುವ ನಿಯಮವನ್ನು ಜನವರಿ 19ರ ಬದಲು ತಿಂಗಳಾಂತ್ಯದವರೆಗೂ ವಿಸ್ತರಿಸಲಾಗಿದೆ. ಮತ್ತಷ್ಟು ಬಿಗಿ ಕ್ರಮ ಅಗತ್ಯವಿದ್ದು, ಈ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.
ಲಾಕ್‍ಡೌನ್ ಮಾಡುವುದು ಬೇಡ ಎನ್ನುವುದೇ ಬಹುತೇಕರ ನಿಲುವಾಗಿದ್ದು, ಅದನ್ನು ಹೊರತುಪಡಿಸಿ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.

Articles You Might Like

Share This Article