ಬೆಂಗಳೂರು,ಫೆ.7- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ರಾಜ್ಯದ ಸಂಸದರು, ಕಾನೂನು ತಜ್ಞರು ಜೊತೆಗೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ಪುನಾರಚನೆ/ವಿಸ್ತರಣೆ, ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ ಕುರಿತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಉನ್ನತ ನಾಯಕರ ಭೇಟಿಗೆ ಅವಕಾಶ ಕೇಳಲಾಗಿದ್ದು, ಈ ವೇಳೆ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲಾಗುತ್ತದೆ. ಇತ್ತ ರಾಜ್ಯದಲ್ಲಿ ಸಚಿವಾಕಾಂಕ್ಷಿ ಶಾಸಕರ ಲಾಬಿ ಮುಂದುವರಿದಿದೆ. ಮಾಜಿ ಸಚಿವ ರಮೇಶ್ರಜಾಕಿಹೊಳಿಗೆ ಸಚಿವ ಸ್ಥಾನದ ಬಗ್ಗೆ ಕೇಂದ್ರ ನಾಯಕರು ನಿರ್ಣಯ ಮಾಡುತ್ತಾರೆ. ಇತ್ತ ಸಿಡಿ ಕೇಸ್‍ನಲ್ಲಿ ಕ್ಲೀನ್‍ಚಿಟ್ ಪಡೆದ ರಮೇಶ್ ಜಾರಕಿಹೊಳಿ ಬಿಜೆಪಿ ಪ್ರಬಲ ನಾಯಕರ ಮೂಲಕ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಪಕ್ಷದ ವರಿಷ್ಠ ಜೊತೆಗಿನ ಚರ್ಚೆಯ ಬಳಿಕ ಸಂಪುಟ ವಿಸ್ತರಣೆಯೇ ಅಥವಾ ಪುನಾರಚನೆಯೇ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಸದ್ಯ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ಗಂಭೀರವಾಗಿ ತೊಡಗಿಸಿಕೊಂಡಿರುವುದರಿಂದ ಸಂಪುಟದ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತಕ್ಷಣಕ್ಕೆ ಆಗುವುದು ಅನುಮಾನ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ಸದ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಗೆ ಸಮಯ ನಿಗದಿಯಾಗಿದ್ದು, ಇನ್ನು ಕೆಲ ಸಚಿವರ ಸಮಯ ಇನ್ನಷ್ಟು ನಿಗದಿಯಾಗಬೇಕಿದೆ.ಇದರ ಜೊತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಗೆ ಸಿಎಂ ಸಮಯಾವಕಾಶ ಕೋರಿದ್ದಾರೆ.
ಆದರೆ ಇನ್ನು ಸಮಯ ಲಭ್ಯವಾಗಿಲ್ಲ, ಅವಕಾಶ ಸಿಕ್ಕಲ್ಲಿ ಬಹುತೇಕ ಸಚಿವ ಸಂಪುಟ ವಿಷಯ ಬಜೆಟ್ ಅವೇಶನದ ನಂತರ ಕೈಗೆತ್ತಿಕೊಳ್ಳಲು ವರಿಷ್ಠರು ಸೂಚಿಸಲಿದ್ದು, ನಿಗಮ ಮಂಡಳಿ ಕುರಿತು ನಿರ್ಧಾರವಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿನ ವಿದ್ಯಮಾನಗಳ ಬಗ್ಗೆ ಎಲ್ಲ ಮಾಹಿತಿಯನ್ನೂ ವರಿಷ್ಠರ ಮುಂದಿಡಲು ಮುಖ್ಯಮಂತ್ರಿಗಳು ಮುಂದಾಗಿದ್ದು, ಒಟ್ಟಾರೆ ಸಂಪುಟದ ಬಗ್ಗೆ ವರಿಷ್ಠರೇ ಸೂಕ್ತ ನಿರ್ಣಯ ಕೈಗೊಳ್ಳಲಿ ಎಂಬ ನಿಲವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದಿದ್ದಾರೆ ಎನ್ನಲಾಗಿದೆ. ಅಂತರ್ ರಾಜ್ಯ ಜಲ ವಿವಾದ ಕುರಿತು ಚರ್ಚೆ ನಡೆಸಲು ಕಾನೂನು ತಜ್ಞರನ್ನೂ ಭೇಟಿ ಮಾಡಲಾಗುತ್ತದೆ.
ಮಾರ್ಚ್ ತಿಂಗಳಿನಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಲಾಗುತ್ತಿದ್ದು, ಕೇಂದ್ರ ಬಜೆಟ್ ಕುರಿತಂತೆಯೂ ನಾಯಕರೊಂದಿಗೆ ಚರ್ಚೆ ನಡೆಸಲಾಗುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿ, ಜಿಎಸ್‍ಟಿ ಪರಿಹಾರದ ಕುರಿತು ಮಾತುಕತೆ ನಡೆಸಲಾಗುತ್ತದೆ. ವಿತ್ತ ಸಚಿವರ ಭೇಟಿಗೆ ಅವಕಾಶ ಕೇಳಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿದ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಿದೆ. ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಎಂಎಲ್‍ಸಿ ಆರ್.ಶಂಕರ್, ಆನಂದ್ ಮಾಮನಿ ಮತ್ತಿತರ ಕೆಲವು ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆದಲ್ಲಿ ತಮಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಎರಡು ದಿನಗಳ ದೆಹಲಿ ಭೇಟಿ ಸಂದರ್ಭದಲ್ಲಿ ಬೊಮ್ಮಾಯಿ ಅವರು ವಿತ್ತ ಸಚಿವೆ ಸೀತಾರಾಮನ್ ಅವರ ಕೇಂದ್ರ ಬಜೆಟ್‍ನಲ್ಲಿ ನದಿ ಜೋಡಣೆ ಯೋಜನೆಗೆ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಭೇಟಿ ವೇಳೆ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಬೆಂಬಲವನ್ನು ಕೋರಬಹುದು. ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಹಣವನ್ನು ಮಂಜೂರು ಮಾಡಿದ್ದಕ್ಕಾಗಿ ಮತ್ತು ರಾಜ್ಯಗಳಿಗೆ ಹಣಕಾಸಿನ ನೆರವು ಹೆಚ್ಚಿಸಿದ್ದಕ್ಕಾಗಿ ಅವರು ಕೇಂದ್ರಕ್ಕೆ ಧನ್ಯವಾದ ಹೇಳುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.
ರಾಜ್ಯ ಬಜೆಟ್‍ಗೂ ಮುನ್ನ ಕೇಂದ್ರ ಸಚಿವರು, ರಾಜ್ಯದ ಸಂಸದರು ಹಾಗೂ ಪಕ್ಷದ ಮುಖಂಡರನ್ನು ಭೇಟಿ ಮಾಡಲು ಬೊಮ್ಮಾಯಿ ನವದೆಹಲಿಗೆ ಭೇಟಿ ನೀಡುತ್ತಿದ್ದಾರೆ. ರಾಜ್ಯ ಬಜೆಟ್‍ಗೂ ಮುನ್ನ ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡುವ ಸಂಪ್ರದಾಯಗಳಿವೆ. ಬೊಮ್ಮಾಯಿ ಅವರ ದೆಹಲಿ ಭೇಟಿಗೆ ಬೇರೆ ಬಣ್ಣ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ನಾಳೆ ಬೆಳಗ್ಗೆ 8 ಗಂಟೆಗೆ ಅಂತಾರಾಜ್ಯ ಜಲವ್ಯಾಜ್ಯಗಳ ಕುರಿತು ದೆಹಲಿಯಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಸುತ್ತಿರುವ ಹಿರಿಯ ವಕೀಲರು, ಕಾನೂನು ತಜ್ಞರ ಜೊತೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ, ಮೇಕೆದಾಟು ಯೋಜನೆಗಳ ಕುರಿತು ಚರ್ಚಿಸಲಿದ್ದು, ನದಿ ಜೋಡಣೆ ವಿಷಯದಲ್ಲಿಯೂ ರಾಜ್ಯದ ನಿಲುವು ಯಾವ ರೀತಿ ಇರಬೇಕು ಎಂದು ಸಮಾಲೋಚನೆ ನಡೆಸಲಿದ್ದಾರೆ.
