ಬೆಂಗಳೂರು,ಜು.26- ರೈತರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಜನತೆಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟು ಸುತ್ತಮುತ್ತ ಟ್ರಯಲ್ ಬಾಂಬ್ ಬ್ಲಾಸ್ಟ್ ನಡೆಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಂಸದೆ ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಆಚಾರ್ ಹಾಲಪ್ಪ ಅವರುಗಳಿಗೆ ಪ್ರತ್ಯೇಕ ಪತ್ರ ಬರೆದಿರುವ ಸುಮಲತಾ ಅಂಬರೀಶ್ ತಕ್ಷಣವೇ ಕೆಆರ್‍ಎಸ್ ಸುತ್ತಮುತ್ತ ಟ್ರಯಲ್ ಬಾಂಬ್ ಬ್ಲಾಸ್ಟ್ ನಡೆಸದಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.
ಕೆಆರ್‍ಎಸ್ ವ್ಯಾಪ್ತಿಯ 20 ಕಿ.ಮೀ ಗಣಿನಿಷೇಧ ಪ್ರದೇಶವಾಗಿ ಯಥಾಸ್ಥಿತಿ ಕಾಪಾಡುವಂತೆ ಸಿಎಂ, ಗಣಿ ಸಚಿವರಿಗೆ ಅವರು ಮನವಿ ಮಾಡಿಕೊಂಡಿದ್ದಾರೆ. ಜಾರ್ಖಂಡ್‍ನಿಂದ ಆಗಮಿಸಿರುವ ಸಿಎಸ್‍ಐಆರ್ ಮತ್ತು ಸಿಐಎಂಎಫ್‍ಆರ್ ವಿಜ್ಞಾನಿಗಳು ಕಂಟ್ರೋಲ್ ಬಳಸಿ ಟ್ರಯಲ್ ಬ್ಲಾಸ್ಟ್ ಮಾಡುತ್ತಾರೆ. ಆ ಸಂಶೋಧನೆ ಕೇವಲ 200 ಮೀಟರ್ ವ್ಯಾಪ್ತಿಗಷ್ಟೇ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ತಿಳಿದುಬಂದಿದೆ.
ವರದಿ ಆಧರಿಸಿ ಕೆಆರ್‍ಎಸ್ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ಕೊಟ್ಟರೆ ರಿಗ್, ಬೋರ್, ಸೈಲೆಂಟ್ ಬ್ಲಾಸ್ಟ್ ಮಾಡುತ್ತಾರೆ. ಈ ಹಿಂದೆಯೇ ಇಂತಹ ಗಣಿಗಾರಿಕೆಯಿಂದ 2.4 ರಿಕ್ಟರ್ ಮಾಪನದಷ್ಟು ಭೂಕಂಪನವಾಗಿತ್ತು.
ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸಂಶೋಧನಾ ಸಂಸ್ಥೆಗಳು ಕೆಆರ್‍ಎಸ್ ಸುತ್ತಮುತ್ತಲ ಗಣಿಗಾರಿಕೆಯಿಂದ ಡ್ಯಾಂಗೆ ಆಗುತ್ತಿರುವ ಅಪಾಯದ ಬಗ್ಗೆ ವರದಿ ನೀಡಿವೆ. ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಕೆಆರ್‍ಎಸ್ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿ ಗಣಿಗಾರಿಕೆ ನಿಷೇಧದ ಪ್ರದೇಶವಾಗಿಯೆ ಇರಲಿ. ಇದೇ ನನ್ನ ಹಾಗೂ ರೈತ, ಪ್ರಗತಿಪರ ಸಂಘಟನೆಗಳ ನಿಲುವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.