ಬೆಂಗಳೂರು,ಸೆ.25- ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸೇವೆಯನ್ನು ತಕ್ಷಣ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 108 ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೂ ಸೂಚನೆ ನೀಡಿ ಆ್ಯಂಬುಲೆನ್ಸ್ ಸೇವೆ ಯಥಾರೀತಿ ಆರಂಭಿಸಲು ನಿರ್ದೇಶಿಸಲಾಗುವುದು ಎಂದರು.
ಇದನ್ನೂ ಓದಿ : ನಾಳೆ ವಿಶ್ವವಿಖ್ಯಾತ ಮೈಸೂರು ದಸರಾಗೆ ರಾಷ್ಟ್ರಪತಿ ಮುರ್ಮು ಅಧಿಕೃತ ಚಾಲನೆ
ಇದೇ ಸಂದರ್ಭದಲ್ಲಿ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಸಾವಿರ ಬಾರಿ ಸುಳ್ಳು ಹೇಳಿದರೂ ಸುಳ್ಳಾಗಿಯೇ ಇರುತ್ತದೆ ಎಂದು ಕಾಂಗ್ರೆಸ್‍ನ ಪೇ ಸಿಎಂ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಕಾಲ ಎಲ್ಲದಕ್ಕೂ ಉತ್ತರ ನೀಡಲಿದೆ. ರಾಜ್ಯದ ಕೋಟ್ಯಂತರ ರೈತರ ಪರವಾಗಿ ಮುಖ್ಯಮಂತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಸರಾ ಉತ್ಸವ ಆರಂಭವಾಗುತ್ತಿದ್ದು, ಚಾಮುಂಡೇಶ್ವರಿಯ ಆರ್ಶೀವಾದ ಕೋರಲು ಹೋಗುತ್ತಿದ್ದಾರೆ ಎಂದು ಹೇಳಿದರು.