ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಕುರಿತಂತೆ ವರಿಷ್ಠರ ಜೊತೆ ಮಾತನಾಡುತ್ತೇನೆ : ಸಿಎಂ

Social Share

ಬೆಂಗಳೂರು,ಅ.18- ವರಿಷ್ಠರ ಸಮಯ, ಅವಕಾಶ ಸಿಕ್ಕ ತಕ್ಷಣ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮಾತುಕತೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರ ಭೇಟಿಗೆ ಸಮಯಾವಕಾಶ ಕೇಳಿದ್ದೇನೆ. ಶೀಘ್ರದಲ್ಲೇ ಸಿಗುವ ವಿಶ್ವಾಸವಿದೆ. ಜನಸಂಕಲ್ಪ ಯಾತ್ರೆ ಮಧ್ಯೆಯೇ ದೆಹಲಿಗೆ ತೆರಳುತ್ತೇನೆ. ವಾರಾಂತ್ಯದೊಳಗೆ ಆಗಬಹುದು ಎಂದರು.

ಸಂಪುಟ ವಿಸ್ತರಣೆಯಾಗಬೇಕೆಂಬ ಬೇಡಿಕೆ ಇದೆ. ಹಲವಾರು ಆಕಾಂಕ್ಷಿಗಳು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಎಲ್ಲವನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಹೇಳಿದರು. ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಡಾ.ನಿರ್ಮಲಾನಂದನಾಥ ಸ್ವಾಮಿಗಳ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸಮುದಾಯದ ಮೀಸಲಾತಿಯನ್ನು ಹೆಚ್ಚಳ ಮಾಡಬೇಕಾದರೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.

ಆಯೋಗವು ನೀಡುವ ಶಿಫಾರಸ್ಸಿನ ಮೇಲೆ ಸರ್ಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಒಕ್ಕಲಿಗ ಸಮುದಾಯ ಸೇರಿದಂತೆ ಬೇರೆ ಬೇರೆ ಸಮುದಾಯದವರು ಕೂಡ ಬೇಡಿಕೆ ಇಟ್ಟಿದ್ದಾರೆ. ಸರ್ಕಾರ ಎಲ್ಲವನ್ನು ಕೂಲಂಕುಷವಾಗಿ ಕಾನೂನು ಚೌಕಟ್ಟು ಮತ್ತು ಸಂವಿಧಾನದಡಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಇದಕ್ಕೆ ಈಗಾಗಲೇ ಅವೇಶನದಲ್ಲಿ ಉತ್ತರ ನೀಡಲಾಗಿದೆ. ಎಲ್ಲಾ ಸಮುದಾಯಗಳಿಗೆ ಆಕಾಂಕ್ಷೆ ಹೆಚ್ವಾಗಿದ್ದು ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಕಾನೂನಿನ ಚೌಕಟ್ಟಿನಲ್ಲಿ ಮಾಡಬೇಕು. ಹಿಂದುಳಿದ ವರ್ಗಗಳ ಆಯೋಗದ ವರದಿ ಬರಲಿ ಎಂದರು.

ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ಮಹಿಳೆ ಸಾವನ್ನಪ್ಪಿದ ಪ್ರಕರಣದ ಕುರಿತಂತೆ ವಿಸ್ತೃತ ವರದಿ ನೀಡಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ. ಯಾವ ಕಾರಣಕ್ಕಾಗಿ ಅಪಘಾತವಾಗಿದೆ. ಗುಂಡಿಗಳನ್ನು ಮುಚ್ಚಿರಲಿಲ್ಲವೇ ಎಂಬುದರ ಕುರಿತು ವರದಿ ನೀಡಬೇಕೆಂದು ಕೇಳಲಾಗಿದೆ.

ಪಾಲಿಕೆ ಆಯುಕ್ತರು ನೀಡುವ ವರದಿ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಗುಂಡಿ ಮುಚ್ಚಿದ್ದರೂ ಕೆಲವು ಕಡೆ ಡಾಂಬರು ಕಿತ್ತು ಬಂದಿರುವ ಬಗ್ಗೆ ಗಮನಕ್ಕೆ ಬಂದಿದೆ. ತಪ್ಪಿತಸ್ಥರು ಯಾರೇ ಇರಲಿ ಕಾನೂನಿನ ಪ್ರಕಾರ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೊಮ್ಮಾಯಿ ಎಚ್ಚರಿಕೆ ಕೊಟ್ಟರು.

ಬಿಬಿಎಂಪಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಸ್ತೆ ಸರಿಪಡಿಸುವುದು ಒಂದು ಭಾಗವಾದರೆ ಪೊಲೀಸರು ಯಾವ ಕಾರಣಕ್ಕಾಗಿ ಅಪಘಾತವಾಗಿದೆ ಎಂದು ಪ್ರಾಥಮಿಕ ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ರಸ್ತೆ ಗುಂಡಿಗಳನ್ನು ಅಡ್ಡಾಡಿದ್ದಿಯಾಗಿ ಹಾಕಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಮಟ್ಟ ಮಾಡಲು ಸೂಚಿಸಲಾಗುವುದು ಎಂದು ಹೇಳೀದರು.

Articles You Might Like

Share This Article