ಬೆಂಗಳೂರು,ಜ.9- ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪಾದಯಾತ್ರೆ ನಡೆಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಿಸಲು ರಾಮನಗರ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.ಇಂದಿನ ಪಾದಯಾತ್ರೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರೆಲ್ಲರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ. ನಾವು ಕಾಂಗ್ರೆಸ್ನವರ ಪಾದಯಾತ್ರೆಯನ್ನು ತಡೆಯುವುದಿಲ್ಲ. ಆದರೆ ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲಿಸದೆ ಬಿಡುವುದಿಲ್ಲ. ಕಾನೂನು ಪ್ರಕಾರವಾಗಿ ಜಿಲ್ಲಾಡಳಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ರೇಸ್ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಬೊಮ್ಮಾಯಿ ಅವರೊಂದಿಗೆ ಸಚಿವರಾದ ಅರಗ ಜ್ಞಾನೇಂದ್ರ, ಸುಧಾಕರ್, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಸಚಿವರ ಜೊತೆ ಸಭೆ ನಡೆಸಿದರು. ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಕುರಿತಾಗಿ ಮಾತುಕತೆ ನಡೆಸಿದರು.
ಒಂದು ಕಡೆ ಹೆಚ್ಚುತ್ತಿರುವ ಕೋವಿಡ್ ಸೋಂಕು ತಡೆಗಟ್ಟಲು ಸರ್ಕಾರ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿರುವುದು ಮತ್ತೊಂದು ಕಡೆ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವುದರಿಂದ ಸರ್ಕಾರ ಗೊಂದಲಕ್ಕೆ ಸಿಲುಕಿದೆ.ಸಣ್ಣಪುಟ್ಟ ನಿಯಮಗಳನ್ನು ಉಲ್ಲಂಘಿಸಿದರೆ ಸಾರ್ವಜನಿಕರಿಗೆ ದಂಡ ಹಾಕಲಾಗುತ್ತದೆ. ಆದರೆ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಸೇರಿರುವ ಜನಸ್ತೋಮ, ಮಾಸ್ಕ್ ಹಾಕದಿರುವುದು, ಸಾಮಾಜಿಕ ಅಂತರ ಕಾಪಾಡದಿರುವುದು, ಸ್ಯಾನಿಟೈಸ್ ಬಳಕೆ ಮಾಡದಿರುವುದು ಸೇರಿದಂತೆ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಅಡ್ಡಿಪಡಿಸಿ ಕೆಲವು ನಾಯಕರನ್ನು ವಶಕ್ಕೆ ಪಡೆದರೆ ಸಹಜವಾಗಿ ಕಾಂಗ್ರೆಸ್ಗೆ ಇದು ಲಾಭ ತಂದುಕೊಡಲಿದೆ. ಹೀಗಾಗಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬೊಮ್ಮಾಯಿ ಅವರು ಸಚಿವರಿಂದ ಅಭಿಪ್ರಾಯ ಪಡೆದಿದ್ದಾರೆ.
ಪಾದಯಾತ್ರೆಗೆ ಅಡ್ಡಿಪಡಿಸಿದರೆ ಬೆಂಗಳೂರು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಸಹಜವಾಗಿ ಪ್ರತಿಭಟನೆ ನಡೆಸುತ್ತದೆ. ಇದರಿಂದ ಬಿಜೆಪಿಗೆ ಹಾನಿಗೆ ಮುಂದಿನ ದಿನಗಳಲ್ಲಿ ಕೈ ಪಕ್ಷಕ್ಕೆ ಲಾಭ ತಂದುಕೊಡಬಹುದು. ಇದನ್ನು ಕಾನೂನಾತ್ಮಕವಾಗಿ ಯಾವ ರೀತಿ ಎದುರಿಸಬೇಕು ಎಂಬುದರ ಕುರಿತಾಗಿ ವಿಸ್ತೃತವಾಗಿ ಚರ್ಚೆ ನಡೆಯಿತು.
ಈಗಾಗಲೇ ರಾಮನಗರ ಜಿಲ್ಲಾಕಾರಿ ಮೂಲಕ ನೋಟಿಸ್ ಜಾರಿ ಮಾಡಲಾಗಿದ್ದು, ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಆದರೆ ಇಂದು ನಡೆದ ಪಾದಯಾತ್ರೆಯಲ್ಲಿ ಯಾರೊಬ್ಬರು ಕೂಡ ನಿಯಮಗಳನ್ನು ಪಾಲನೆ ಮಾಡಿಲ್ಲ.
ಮುಂದಿನ ದಿನಗಳಲ್ಲಿ ಇದು ಸೋಂಕು ಹರಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಹೇಗಾದರೂ ಮಾಡಿ ಪಾದಯಾತ್ರೆಯನ್ನು ಕಾನೂನಿನ ಮೂಲಕವೇ ಹತ್ತಿಕ್ಕುವ ಬಗ್ಗೆ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲಿಸಿದರೂ ಕಷ್ಟ. ಬಿಟ್ಟರೂ ಮತ್ತಷ್ಟು ಕಷ್ಟ. ಈ ಎಲ್ಲ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆದಿದ್ದು, ಸರ್ಕಾರದ ನಡೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
