ಭಾರತ್ ಜೋಡೊ ಯಾತ್ರೆ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ : ಬೊಮ್ಮಾಯಿ

Social Share

ಬೆಂಗಳೂರು,ಅ.6- ರಾಜ್ಯದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯಿಂದ ಸರ್ಕಾರ ಅಥವಾ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದರು.

ನಗರದ ಕಬ್ಬನ್ ಉದ್ಯಾನ ವನದಲ್ಲಿ ಉಪ ಪೊಲೀಸ್ (ಕೇಂದ್ರ ವಲಯ) ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಭಾಗಿಯಾಗಿರುವುದು ಬಿಜೆಪಿ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಇದರಲ್ಲಿ ಕಾಂಗ್ರೆಸ್ ನಾಯಕರೆ ಭಾಗಿಯಾಗಿರುವುದರಿಂದ ವಿಶೇಷ ಪರಿಣಾಮ ಬೀರುವುದಿಲ್ಲ ಎಂದರು.

ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಯಾರೇ ಭಾಗಿಯಾದರೂ ಪ್ರಯೋಜನವಿಲ್ಲ. ಈಗಾಗಲೇ ಅರ್ಧ ಕಿ.ಮೀ. ಪಾದಯಾತ್ರೆ ಮುಗಿಸಿ ಸೋನಿಯಾ ಅವರು ಯಾತ್ರೆಯನ್ನು ಸ್ಥಗಿತಮಾಡಿದ್ದಾರೆ. ರಾಜಕೀಯವಾಗಿ ಇದಕ್ಕೆ ಮಹತ್ವ ನೀಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆಗೆ ಪರ್ಯಾಯವಾಗಿ ರ್ಯಾಲಿ ನಡೆಸುತ್ತಿದ್ದೇವೆ ಎಂಬುದರಲ್ಲಿ ಸತ್ಯಾಂಶವಿಲ್ಲ. ನಾವು ಒಂದು ತಿಂಗಳ ಮುಂಚೆಯೇ ಕಾರ್ಯಕ್ರಮವನ್ನು ನಿಗದಿಪಡಿಸಿದ್ದೆವು ಎಂದರು.ನಾನು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಂದು ತಿಂಗಳು ರಾಜ್ಯಾದ್ಯಂತ ಪ್ರವಾಸ ನಡೆಸಲು ಈ ಹಿಂದೆಯೇ ತೀರ್ಮಾನಿಸಿದ್ದೆವು.

ಆದರೆ, ವಿಧಾನಮಂಡಲದ ಅವೇಶನ, ದಸರಾಹಬ್ಬ ಬಂದಿದ್ದರಿಂದ ತಾಂತ್ರಿಕವಾಗಿ ಮುಂದೂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.ನಾವು ಕಾಂಗ್ರೆಸ್ ಪರ್ಯಾಯವಾಗಿ ಸಮಾವೇಶಗಳನ್ನು ನಡೆಸುವ ಅಗತ್ಯವಿಲ್ಲ. ನಮ್ಮ ಕಾರ್ಯಕ್ರಮಗಳ ಆಧಾರದ ಮೇಲೆ ಸಮಾವೇಶ ಮಾಡುತ್ತೇವೆ. ಸದ್ಯದಲ್ಲೇ ದಿನಾಂಕವನ್ನು ನಿಗದಿಪಡಿಸುತ್ತೇವೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ಕುರಿತಂತೆ ದೆಹಲಿಗೆ ತೆರಳುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಆ ಸಂದರ್ಭ ಬಂದರೆ ನಿಮಗೆ ಹೇಳಿಯೇ ಹೋಗುತ್ತೇನೆ ಎಂದು ಉತ್ತರಿಸಿದರು.

ಸೂಕ್ತ ಚಿಕಿತ್ಸೆ:

ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಅವರು ನಾಗರಹೊಳೆ ಅಭಯಾರಣ್ಯದಲ್ಲಿ ಆನೆ ಮರಿಯೊಂದು ಗಾಯಗೊಂಡಿದ್ದು ಅದಕ್ಕೆ ಚಿಕಿತ್ಸೆ ನೀಡಬೇಕೆಂದು ನನಗೆ ಪತ್ರ ಬರೆದಿದ್ದಾರೆ. ನಾನು ತತ್‍ಕ್ಷಣವೇ ಸಂಬಂಧಪಟ್ಟ ಅರಣ್ಯಾಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ.

ಆನೆ ಮರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ಬದುಕುಳಿಯುವ ಸಾಧ್ಯತೆ ಇದೆ ಎಂದು ರಾಹುಲ್‍ಗಾಂಧಿ ಮನವಿ ಮಾಡಿದ್ದಾರೆ. ನಾನು ಎಲ್ಲಾ ರೀತಿಯ ಚಿಕಿತ್ಸೆ ನೀಡಲು ಅಕಾರಿಗಳಿಗೆ ಸೂಚಿಸುತ್ತೇನೆ.

ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದಾಗಿ ಸಿಎಂ ಇದೇ ವೇಳೆ ತಿಳಿಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ರಿಜ್ವಾನ್ ಅರ್ಷದ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article