ವಿಜಾಪುರ,ಸೆ.30- ದೇಶವನ್ನು ಇಬ್ಭಾಗ ಮಾಡಿದವರೇ ಕಾಂಗ್ರೆಸ್ ಪಕ್ಷದವರು. ಈಗ ಭಾರತ್ ಜೋಡೊ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವನ್ನು ಒಡೆದು ದೇಶವನ್ನು ಕತ್ತರಿಸಿದವರು ಕಾಂಗ್ರೆಸಿಗರು. ಭಾರತ್ ಜೋಡೋ ಬದಲಿಗೆ ಕಾಂಗ್ರೆಸ್ ಚೋಡೊ ಮಾಡಿದ್ದರೆ ಅರ್ಥ ಬರುತ್ತಿತ್ತು ಎಂದು ವ್ಯಂಗ್ಯವಾಡಿದರು.
ಯಾವ ಪುರುಷಾರ್ಥಕ್ಕೆ ಭಾರತ್ ಜೋಡೋ ನಡೆಸುತ್ತಿದ್ದಾರೊ ಗೊತ್ತಿಲ್ಲ. ಇದರಲ್ಲಿ ರಾಜಕೀಯ ಲಾಭ ಬಿಟ್ಟರೆ ಬೇರೇನೂ ಇಲ್ಲ. ದೇಶವನ್ನು ಒಗ್ಗೂಡಿಸುತ್ತೇವೆ ಎನ್ನುವವರಿಗೆ ದೇಶದ ಇತಿಹಾಸ ಗೊತ್ತಿದೆಯೇ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರಮೋದಿ ಅಧಿಕಾರ ಅವಯಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ತತ್ವದಡಿ ಜಾತಿ ಧರ್ಮ, ಬೇಧಭಾವ ಮಾಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶ ಮುನ್ನಡೆಸುತ್ತಿದ್ದಾರೆ.
ಸಾಲು ಸಾಲು ಚುನಾವಣೆ ಸೋತು ಮೂಲೆಗುಂಪಾಗಿರುವ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ನಡೆಸುತ್ತಿರುವ ಸರ್ಕಸ್. ಇಂತಹ ನಾಟಕಗಳನ್ನು ಕರ್ನಾಟಕದ ಜನ ತುಂಬ ನೋಡಿದ್ದಾರೆ. ನೀವು ಏನೆ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಬೊಮ್ಮಾಯಿ ಗುಡುಗಿದರು.
ರಾಹುಲ್ ಗಾಂಧಿ ಮೊದಲು ಕಾಂಗ್ರೆಸ್ ಜೋಡಿಸುವ ಕೆಲಸವನ್ನು ಮಾಡಲಿ. ಇಲ್ಲಿ ಒಬ್ಬರಿಗೊಬ್ಬರು ಕತ್ತಿ ಮೆಸೆಯುವ ಕೆಲಸ ಮಾಡುತ್ತಿದ್ದಾರೆ. ಮೊದಲು ನಿಮ್ಮ ಪಕ್ಷದ ಹುಳುಕುಗಳನ್ನು ಸರಿಪಡಿಸಿಕೊಂಡು ನಂತರ ದೇಶ ಕಟ್ಟುವ ಕೆಲಸ ಮಾಡಿ ಎಂದು ವ್ಯಂಗ್ಯವಾಡಿದರು.
ನಾವು ಕೂಡ ಸದ್ಯದಲ್ಲೇ ರಾಜ್ಯಾದ್ಯಂತ ಪ್ರವಾಸ ಆರಂಭಿಸುತ್ತೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ನೇತೃತ್ವದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಲಿದ್ದೇನೆ. ಕಾಂಗ್ರೆಸ್‍ನ ಯಾವುದೇ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ಹೇಳಿದರು.