ಇಂಧನ ದರ ಇಳಿಕೆ ಕುರಿತು ಶೀಘ್ರದಲ್ಲೇ ಸೂಕ್ತ ನಿರ್ಧಾರ : ಸಿಎಂ
ಬೆಂಗಳೂರು,ಮೇ28-ಶೀಘ್ರದಲ್ಲೇ ಹಣಕಾಸು ಇಲಾಖೆಯ ಅಧಿಕಾರಿಗಳ ಸಭೆ ಕರೆದು ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಕಡಿತಗೊಳಿಸುವ ಬಗ್ಗೆ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತ ಮಾಡಿದ ನಂತರ ಬೇರೆ ಬೇರೆ ರಾಜ್ಯಗಳು ಸಹ ಪ್ರತಿ ಲೀಟರ್ ಇಂಧನ ಬೆಲೆಯನ್ನು ಕಡಿತ ಮಾಡಿದೆ.
ರಾಜ್ಯದಲ್ಲೂ ಕೂಡ ದರವನ್ನು ಇಳಿಸಬೇಕೆಂಬ ಬೇಡಿಕೆ ಇದೆ. ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ ನಂತರ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವೋಸ್ ಪ್ರವಾಸದಲ್ಲಿದ್ದ
ಕಾರಣ ನಾನು ಅಧಿಕಾರಿಗಳ ಸಭೆ ಕರೆಯಲು ಸಾಧ್ಯವಾಗಿಲ್ಲ. ಅಲ್ಲದೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ದರ ಇಳಿಸುವ ಚರ್ಚೆಯೇ ಈವರೆಗೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಂಇಎಸ್ಗೆ ಎಚ್ಚರಿಕೆ:
ಭಾಷೆ ವಿವಾದವನ್ನು ಮುಂದಿಟ್ಟುಕೊಂಡು ಪದೇ ಪದೇ ಕನ್ನಡಿಗರ ಭಾವನೆಯನ್ನು ಕೆಣಕುತ್ತಿರುವ ಎಂಇಎಸ್ನವರು ತಮ್ಮ ಪುಂಡಾಟಗಳಿಗೆ ಕಡಿವಾಣ ಹಾಕಿಕೊಳ್ಳದಿದ್ದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದರು.
ಮದುವೆ ಸಮಾರಂಭದಲ್ಲಿ ಕನ್ನಡ ಹಾಡಿಗೆ ನೃತ್ಯ ಮಾಡಿರುವುದಕ್ಕೆ ಎಂಇಎಸ್ನ ಕೆಲವು ಕಿಡಿಗೇಡಿಗಳು ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ನಾನು ಈಗಾಗಲೇ ಅಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿ ಹೇಳಿದರು. ಕನ್ನಡಿಗರ ಮೇಲೆ ಹಲ್ಲೆ ಇಲ್ಲವೇ ದೌರ್ಜನ್ಯ ನಡೆದರೆ ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ಕನ್ನಡಿಗರ ಮೇಲೆ ಕರ್ನಾಟಕದಲ್ಲೇ ಹಲ್ಲೆ ಮಾಡುತ್ತಾರೆ ಎಂದರೆ ಸರ್ಕಾರ ಕೈ ಕಟ್ಟಿ ಕೂರುತ್ತದೆ ಎಂದು ಭಾವಿಸುವುದು ಬೇಡ. ಇಂತಹ ಪುಂಡಾಟಗಳನ್ನು ನಾವು ಸಹಿಸಿಕೊಳ್ಳವುದಿಲ್ಲ ಎಂದು ಗುಡುಗಿದರು.
ತಪ್ಪಿತಸ್ಥರು ಯಾರೇ ಇರಲಿ ಅವರ ಮೇಲೆ ಕ್ರಮ ಜರುಗಿಸಲು ಸೂಚಿಸಿದ್ದೇನೆ ಎಂದು ಅವರು ಹೇಳಿದರು.
ತಿರುಗೇಟು: ಆರ್ಎಸ್ಎಸ್ನವರು ಭಾರತದ ಮೂಲ ನಿವಾಸಿಗಳಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ಕೊಟ್ಟ ಬೊಮ್ಮಾಯಿ ಅವರು, ಮೊದಲು ಸಿದ್ದರಾಮಯ್ಯ ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಅವರು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಆರ್ಯರೋ ಅಥವಾ ದ್ರಾವಿಡರೋ ಎಂಬುದನ್ನು ಮೊದಲು ಹೇಳಲಿ. ನಂತರ ಆರ್ಎಸ್ಎಸ್ ಬಗ್ಗೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರಮೋದಿ ಹಾಗೂ ದೇಶದ ಮೊದಲ ಪ್ರಧಾನಿ ಪಂಡಿತ್ ಜವಹಾರ್ಲಾಲ್ ನೆಹರು ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಏಕೆಂದರೆ ನೆಹರು ಅವರು ತಮ್ಮ ಅಧಿಕಾರ ಅವಧಿಯಲ್ಲಿ ಭಾರತದ ಮೇಲೆ ಚೀನಾ ಆಕ್ರಮಣ ಮಾಡಿದಾಗ ದೇಶದ ಗಡಿಯನ್ನು ಬಿಟ್ಟುಕೊಟ್ಟವರು.
ನರೇಂದ್ರಮೋದಿ ಕಾಲದಲ್ಲಿ ಚೀನಾ ಆಕ್ರಮಣ ಮಾಡಲು ಬಂದಾಗ ಅದನ್ನು ದಿಟ್ಟವಾಗಿ ಎದುರಿಸಿ ಭಾರತಕ್ಕೆ ಸೇರಿದ ಒಂದೇ ಒಂದು ಇಂಚು ಜಾಗವನ್ನು ಬಿಟ್ಟುಕೊಡಲಿಲ್ಲ. ಭಾರತ ಇಂದು ವಿಶ್ವದಲ್ಲೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುವಂತೆ ಮೋದಿ ಮಾಡಿದ್ದಾರೆ. ಹೀಗಾಗಿ ನೆಹರು ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಬೊಮ್ಮಾಯಿ ಕುಹುಕವಾಡಿದರು.
ವಿದ್ಯಾಭ್ಯಾಸಕ್ಕೆ ಗಮನಕೊಡಿ:
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಿಜಾಬ್ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿಗಳು ಇಂತಹ ವಿಷಯಗಳ ಬಗ್ಗೆ ಗಮನಕೊಡದೆ ಮೊದಲು ನಿಮ್ಮ ವಿದ್ಯಾಭ್ಯಾಸಕ್ಕೆ ಗಮನಕೊಡಿ ಎಂದು ಸಲಹೆ ಮಾಡಿದರು. ಹಿಜಾಬ್ ವಿವಾದ ಈಗಾಗಲೇ ಮುಗಿದ ಅಧ್ಯಾಯ. ರಾಜ್ಯದ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಹೈಕೋರ್ಟ್ ನೀಡಿರುವ ಆದೇಶವನ್ನು ಪಾಲನೆ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಯಾವ ಸಮವಸ್ತ್ರ ಇರಬೇಕು ಎಂಬುದನ್ನು ಆಡಳಿತ ಮಂಡಳಿ ತೀರ್ಮಾನಿಸುತ್ತದೆ. ಶಾಲೆಗಳಲ್ಲಿ ಎಸ್ಡಿಎಂಸಿ, ವಿವಿಗಳಲ್ಲಿ ಸಿಂಡಿಕೇಟ್ ತೀರ್ಮಾನಿಸುತ್ತದೆ. ಇದನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ಹೇಳಿದರು.
ಬಹುತೇಕ ಎಲ್ಲ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್ ನೀಡಿರುವ ತೀರ್ಪನ್ನು ಶೇ.99.99ರಷ್ಟು ಪಾಲನೆ ಮಾಡುತ್ತಿದ್ದಾರೆ. ಉಳಿದ ಕಡೆಯು ಪಾಲನೆ ಮಾಡಬೇಕೆಂದು ಸೂಚಿಸಲಾಗಿದೆ. ಈಗಾಗಲೇ ನಾನು ಸಂಬಂಧಪಟ್ಟವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ವಿವಾದ ಬಗೆಹರಿದಿದೆ ಎಂದು ಹೇಳಿದರು.