ಕಾಂಗ್ರೆಸ್ ಬೇಜವಾಬ್ದಾರಿ ವಿರೋಧ ಪಕ್ಷ : ಸಿಎಂ ವಾಗ್ದಾಳಿ

Social Share

ಬೆಂಗಳೂರು,ಫೆ.22- ಕರ್ನಾಟಕದ ಇತಿಹಾಸದಲ್ಲೇ ಕಾಂಗ್ರೆಸ್ ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಾಗಿದ್ದು, ಅವರಿಗೆ ಇದು ಕಪ್ಪುಚುಕ್ಕೆಯಾಗಿ ಪರಿಣಮಿಸಲಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಈ ಸದನವು ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿವೆ. ಅನೇಕ ಸಂದರ್ಭಗಳಲ್ಲಿ ಸದಸ್ಯರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ ಇಡೀ ಕಲಾಪಕ್ಕೆ ಅಡ್ಡಿಪಡಿಸಿ ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸಿದ್ದು ನಾನು ನೋಡಿರಲಿಲ್ಲ. ಜನತೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ನಾನೂ ಕೂಡ ಅನೇಕ ಪ್ರತಿಭಟನೆ, ಹೋರಾಟ ಮಾಡಿರುವುದನ್ನು ನೋಡಿದ್ದೇನೆ. ಜನರ ಹಿತಕ್ಕಾಗಿ ಕೆಲವು ಸಂದರ್ಭಗಳಲ್ಲಿ ಅಹೋರಾತ್ರಿ ಧರಣಿಗಳು ನಡೆದಿವೆ. ಆದರೆ ತನ್ನ ರಾಜಕೀಯ ಹಿತಕ್ಕಾಗಿ ಕಲಾಪಕ್ಕೆ ಅಡ್ಡಿಪಡಿಸಿರುವುದು ಇದೇ ಮೊದಲು. ಜನತೆ ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕರು ತಮ್ಮ ಜವಾಬ್ದಾರಿ ಮರೆತು ಈ ರೀತಿ ಕಲಾಪಕ್ಕೆ ಅಡ್ಡಿಪಡಿಸುವುದು ಶೋಭೆ ತರುವುದಿಲ್ಲ. ಒಂದು ಕಡೆ ನೀವು ಜನತೆಯಿಂದಲೂ ತಿರಸ್ಕøತಗೊಂಡಿದ್ದೀರಿ. ಆಡಳಿತದಲ್ಲೂ ಇಲ್ಲ ಕಡೆಪಕ್ಷ ವಿರೋಧ ಪಕ್ಷದಲ್ಲಿರಲು ಕೂಡ ನೈತಿಕತೆ ಕಳೆದುಕೊಂಡಿದ್ದೀರಿ. ಇದು ಅತ್ಯಂತ ಬೇಜಾಬ್ದಾರಿ ವಿರೋಧ ಪಕ್ಷ ಎಂದು ಕಿಡಿಕಾರಿದರು.
ನಿಮ್ಮ ಪ್ರತಿಭಟನೆಯು ಜನಪರವಾಗಿದ್ದರೆ ಖಂಡಿತವಾಗಿಯೂ ಸರ್ಕಾರ ಸ್ಪಂದಿಸುತ್ತಿತ್ತು. ಕೇವಲ ರಾಜಕೀಯ ಲಾಭಕ್ಕಾಗಿ ನಿಮ್ಮ ಸ್ವಾರ್ಥ ಸಾಧನೆಗಾಗಿ ಕಳೆದ 5 ದಿನಗಳಿಂದ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದೀರಿ. ಖಂಡಿತವಾಗಿಯೂ ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ನಿಮ್ಮ ಸಾಧನೆಗಳ ಮೇಲೆ ಬನ್ನಿ, ನಾವು ನಮ್ಮ ಸಾಧನೆಗಳ ಮೇಲೆ ಬರುತ್ತೇವೆ. ಜನತೆ ಯಾರನ್ನು ಆಶೀರ್ವಾದ ಮಾಡುತ್ತಾರೆ ನೋಡೇ ಬಿಡೋಣ ಎಂದು ಸವಾಲು ಹಾಕಿದರು.
ವಿರೋಧ ಪಕ್ಷದವರು ಸರ್ಕಾರ ಏನು ಮಾಡುತ್ತದೆ ಎಂದು ಕೇಳಬೇಕಿತ್ತು. ನೀವು ಯಾವುದಾದರೂ ಸಲಹೆಸೂಚನೆಗಳನ್ನು ನೀಡಬಹುದೆಂದು ನಿರೀಕ್ಷೆ ಮಾಡಿದ್ದೆವು. ಆದರೆ ಎಲ್ಲವನ್ನು ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದೀರಿ. ನಿಮಗೆ ಖಂಡಿತವಾಗಿಯೂ ಇದು ಶೋಭೆ ತರುತ್ತದೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು.
ನೀವು ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ. ಸಚಿವ ಈಶ್ವರಪ್ಪನವರು ರಾಷ್ಟ್ರ ಧ್ವಜಕ್ಕೆ ಎಲ್ಲಿಯೂ ಅಪಚಾರ ಎಸಗಿಲ್ಲ. ಅವರು ಒಬ್ಬ ದೇಶ ಭಕ್ತ. ತಪ್ಪು ಮಾಡದೇ ಇರುವಾಗಿ ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಇಂದು ಅತ್ಯಂತ ಪ್ರಕ್ಷುಬ್ದ ಸ್ಥಿತಿ ಉಂಟಾಗಿದೆ. ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕಗ್ಗೊಲೆಯಾಗಿದೆ. ಇಂತಹ ಸಂದರ್ಭದಲ್ಲಿ ನೀವು ನಮ್ಮ ಜೊತೆ ಕೈಜೋಡಿಸುತ್ತೀರಿ ಎಂಬ ನಿರೀಕ್ಷೆ ಮಾಡಿದ್ದೆವು. ಆದರೆ ನಿಮ್ಮ ಸ್ವಾರ್ಥ ಸಾಧನೆಗೆ ಇಡೀ ಸದನದ ವಾತಾವರಣವನ್ನೇ ಹಾಳು ಮಾಡುತ್ತಿದ್ದೀರಿ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಶಾಸಕರು ತಮ್ಮ ಜವಾಬ್ದಾರಿ ಮರೆತು ಗದ್ದಲ ಮಾಡುತ್ತಿರುವುದು ಬಹಳ ನೋವಿನ ಸಂಗತಿ. ಕಾಂಗ್ರೆಸ್ ನವರು ನಾವು ಏನು ಮಾಡ್ತೇವೆ ಅಂತ ಕೇಳಬೇಕಾಗಿತ್ತು. ರಾಜ್ಯದ ಜನತೆಯ ಹಿತಾಸಕ್ತಿ ವಿರುದ್ದವಾಗಿ ನಡೆದುಕೊಂಡು ಜನತೆಗೆ ಕಾಂಗ್ರೆಸ್ ದ್ರೋಹ ಮಾಡುತ್ತಿದೆ ಎಂದು ದೂರಿದರು.
ಈ ಪ್ರತಿಭಟನೆ ಕೈ ಬಿಡಿ, ರಾಜ್ಯದ ಮಕ್ಕಳಿಗೆ ಒಳ್ಳೆಯ ಸಂದೇಶ ಕೊಡಬೇಕು. ಜನರ ಸಮಸ್ಯೆ ಬಂದಾಗ ಎಲ್ಲರು ಒಟ್ಟಾಗಬೇಕು, ಇವರ ಗದ್ದಲದ ವಾತಾವರಣದಿಂದ ಶಿವಮೊಗ್ಗದಲ್ಲಿ ಕೊಲೆ ಆಗಿದೆ. ಈ ಕೊಲೆಗೆ ಯಾರು ಕಾರಣ.? ಇಂತಹ ಸಂದರ್ಭದಲ್ಲಿ ವಿಪಕ್ಷವಾಗಿ ಹೇಗೆ ನಡೆದುಕೊಳ್ಳಬೇಕು, ಶಾಂತಿ ಭಂಗ ಮಾಡುವ ನಿಮ್ಮನ್ನು ಜನರು ಎಂದೆಂದಿಗೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು.

Articles You Might Like

Share This Article