ನೇಮಕಾತಿ ಅಕ್ರಮಗಳನ್ನು ತಡೆಯುವಂತೆ ಸಿಎಂ ಬೊಮ್ಮಾಯಿ ಖಡಕ್ ಸೂಚನೆ

Social Share

ಬೆಂಗಳೂರು,ಡಿ.11- ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇಲಾಖೆಯ ನೇಮಕಾತಿ ವೇಳೆ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಮುಂದಾಗಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜಭವನದ ಗಾಜಿನ ಅರಮನೆಯಲ್ಲಿ ನಡೆದ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ವೇಳೆ ಒಂದಿಲ್ಲೊಂದು ಎಡವಟ್ಟುಗಳಿಂದಾಗಿ ಅಕ್ರಮಗಳು ನಡೆದಿರುವುದು ಇಲಾಖೆಗೆ ಶೋಭೆ ತರುವುದಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಎಂತಹ ಅಪರಾಧವಿರಲಿ, ಅಕ್ರಮವೇ ಇರಲಿ ಕಾಲಮಿತಿ ಯೊಳಗೆ ಪತ್ತೆಹಚ್ಚಬಹುದು. ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೇಮಕಾತಿಯಲ್ಲಿ ಉಂಟಾಗುವ ಲೋಪದೋಷಗಳಿಗೆ ಕಡಿವಾಣ ಹಾಕಬೇಕು, ಅಧಿಕಾರಿಗಳು ಗಂಭೀರ ಚಿಂತನೆ ನಡೆಸಬೇಕೆಂದು ಸಲಹೆ ಮಾಡಿದರು.

ಆಂದ್ರದಲ್ಲಿ ಸದ್ದು ಮಾಡುತ್ತಿರುವ ಪ್ರತಿಷ್ಠಿತ ಕುಟುಂಬಗಳ ಹೆಣ್ಣು ಮಕ್ಕಳು

ತಂತ್ರಜ್ಞಾನದ ಮೂಲಕ ಇತ್ತೀಚಿನ ದಿನಗಳಲ್ಲಿ ಅಪರಾಧ ಕೂಡ ಹೆಚ್ಚಾಗುತ್ತಿದೆ. ಅದೇ ತಂತ್ರಜ್ಞಾನ ಅಪರಾಧವನ್ನು ಪತ್ತೆಹಚ್ಚಲು ಅನುಕೂಲವಾಗುತ್ತದೆ. ಕೆಲವು ಸಂದರ್ಭದಲ್ಲಿ ಅಪರಾಧ ಎಸಗುವವರು ಒಂದು ಸಾಕ್ಷ್ಯ ಬಿಟ್ಟು ಹೋಗಿರುತ್ತಾರೆ. ಅದರ ಮೂಲಕ ಇಡೀ ಪ್ರಕರಣವನ್ನು ಪತ್ತೆಹಚ್ಚಬಹುದು ಎಂದರು.

ಗೃಹ ಇಲಾಖೆಗೆ ಇನ್ನು ಹೆಚ್ಚಿನ ತಂತ್ರಜ್ಞಾನ ಅಗತ್ಯವಿದೆ ಎಂಬುದು ನನಗೆ ಗೊತ್ತಾಗಿದೆ. ನಿಮಗೆ ಬೇಕಾದ ಪರಿಣಿತರನ್ನು ಸೇರಿಸಿಕೊಳ್ಳಿ. ಅದಕ್ಕೆ ಬೇಕಾದ ಅನುದಾನವನ್ನು ಮುಂದಿನ ಬಜೆಟ್‍ನಲ್ಲಿ ನೀಡುತ್ತೇನೆ ಎಂದು ಭರವಸೆ ನೀಡಿದರು.

ಪೊಲೀಸ್ ಇಲಾಖೆಯನ್ನು ಸುಧಾರಿಸಲು ನಾವು ಸಾಕಷ್ಟು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದೇವೆ. ವಿಧಿವಿಜ್ಞಾನ ಪ್ರಯೋಗಾಲಯ, ಆಧುನಿಕರಣ ಮಾಡಿದ್ದೇವೆ. ದೇಶದ ಯಾವುದೇ ಭಾಗದಲ್ಲೂ ಕೂಡ ಇಂತಹ ವ್ಯವಸ್ಥೆ ಇಲ್ಲ. ಹುಬ್ಬಳ್ಳಿ, ಬಳ್ಳಾರಿಯಲ್ಲೂ ಕೂಡ ಇದು ಅನುಷ್ಠಾನಕ್ಕೆ ಬಂದಿದೆ ಎಂದು ಹೇಳಿದರು.

ವಿಧಿವಿಜ್ಞಾನ ಪ್ರಯೋಗಾಲಯ ಸದ್ಯಕ್ಕೆ ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇದು ಕನಿಷ್ಟ ಪಕ್ಷ ವಲಯದಲ್ಲಾದರೂ ಇರಬೇಕೆಂದು ಅಧಿಕಾರಿಗಳು ನನಗೆ ಸಲಹೆ ನೀಡಿದ್ದಾರೆ. ಎರಡು ವಿಧಿವಿಜ್ಞಾನ ಪ್ರಯೋಗಾಲಯ ತೆರೆಯಲು ಸರ್ಕಾರ ಸಿದ್ದವಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆ ಇರುವುದೇ ಅಕ್ರಮಗಳನ್ನು ತಡೆಗಟ್ಟಲು. ಆದರೆ ಇಲ್ಲಿಯೇ ಅಕ್ರಮಗಳು ನಡೆದರೆ ಇಲಾಖೆ ಮೇಲೆ ಜನರು ವಿಶ್ವಾಸವನ್ನು ಉಳಿಸಿಕೊಳ್ಳುತ್ತಾರೆಯೇ ಎಂದು ಅಕಾರಿಗಳಿಗೆ ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡಿದರು.

ಕ್ರೈಂ ಲೀಡ್ ಲಾ ಎಂಬ ಮಾತು ಇಲಾಖೆಯಲ್ಲಿದೆ. ಇದು ಬದಲಾಗಿ ಲಾ ಲೀಡ್ ಆಗಬೇಕು. ಆ ನಿಟ್ಟಿನಲ್ಲಿ ಪೊಲೀಸರು ಅಪರಾಧವನ್ನು ತಡೆಗಟ್ಟಲು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಇಲಾಖೆಗೆ ಬೇಕಾದ ಸೌವಲತ್ತುಗಳು, ಸೌಲಭ್ಯ ಎಲ್ಲವನ್ನು ಕೊಡಲು ಸಿದ್ದವಿದ್ದೇವೆ ಎಂದು ಭರವಸೆ ನೀಡಿದರು.

ತಳಹಂತ ಮತ್ತು ಐಪಿಎಸ್ ತರಬೇತಿ ಚೆನ್ನಾಗಿ ನಡೆಯುತ್ತದೆ. ಎನ್‍ಡಿಎ ಮಾದರಿಯಲ್ಲಿ ತರಬೇತಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಜೊತೆಗೆ ಕೆಲವು ಸುಧಾರಣೆಗಳನ್ನು ತರಲು ನಾನು ಅಕಾರಿಗಳಿಗೆ ಸೂಚಿಸಿದ್ದೇನೆ. ಇಡೀ ದೇಶದಲ್ಲಿಯೇ ಪೊಲೀಸ್ ಇಲಾಖೆ ನಂ.1 ಸ್ಥಾನದಲ್ಲಿದೆ ಎಂದು ಪ್ರಸಂಶಿಸಿದರು.

ರಾಜ್ಯಪಾಲರ ಕಾರು ಚಾಲಕ ಹೃದಯಾಘಾತದಿಂದ ಸಾವು

ಕಾನೂನು ನಿಮಗೆ ತಂದೆ ಇದ್ದಂತೆ ಕರ್ತವ್ಯ ನಿಮಗೆ ತಾಯಿ ಇದ್ದಂತೆ ಎಂಬ ಧೋರಣೆಯಲ್ಲಿ ಕೆಲಸ ಮಾಡಿದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುರುತಿಸುತ್ತವೆ. ಪ್ರಶಸ್ತಿ ಪಡೆದವರೆಲ್ಲರೂ ಈ ಪದಕಗಳಿಗೆ ಅರ್ಹರಿದ್ದೀರಿ ಎಂದರು.

ತರಬೇತಿ ಉತ್ತಮವಾಗಿಲ್ಲ: ರಾಜ್ಯದಲ್ಲಿ ಕೆಳ ಹಂತದಲ್ಲಿ ನೇಮಕವಾಗುವ ಪೊಲೀಸ್ ಕಾನ್ಸ್‍ಸ್ಟೇಬಲ್, ಡಿಎಆರ್ ಮತ್ತು ರಿಸರ್ವ್ ಪೊಲೀಸ್ ನೇಮಕಾತಿ ಮತ್ತು ಅವರ ತರಬೇತಿ ಕಠಿಣ ಮತ್ತು ಉತ್ತಮವಾಗಿದೆ. ಇನ್ನು ಕೇಂದ್ರ ಸರ್ಕಾರದ ನೇಮಕಾತಿಯಿಂದ ಆಯ್ಕೆಯಾಗಿ ಬರುವ ಐಪಿಎಸ್ ಅಧಿಕಾರಿಗಳ ತರಬೇತಿಯೂ ಅತ್ಯುತ್ತಮವಾಗಿದೆ.

ಆದರೆ ಮಧ್ಯಮ ಕ್ರಮಾಂಕದಲ್ಲಿ ನಡೆಯುವ ಪೊಲೀಸರ ನೇಮಕಾತಿ ಮತ್ತು ತರಬೇತಿ (ಪಿಎಸ್‍ಐ) ಹಂತವೇ ಆಶಿಸ್ತಿನಿಂದ ಕೂಡಿದೆ. ಈ ಹಂತದಲ್ಲಿ ಇನ್ನಷ್ಟು ಶಿಸ್ತಿನಿಂದ ತರಬೇತಿ ನಡೆಯಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ರಾಷ್ಟ್ರಪತಿ ಪದಕ ಪಡೆದ ಸುಬ್ರಹ್ಮಣೇಶ್ವರ ರಾವ್, ಅರುಣ್ ಚಕ್ರವರ್ತಿ, ಅನುಚೇತ್ ಹಾಗೂ ಅಕಾರಿಗಳು, ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 90 ಮಂದಿಗೆ 2020ನೇ ಸಾಲಿನ ಗಣರಾಜೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಘೋಷಣೆಯಾದ ಪದಕ ಮತ್ತು 2021ನೇ ಸಾಲಿನಲ್ಲಿ ಗಣರಾಜ್ಯೋತ್ಸವ ಹಾಗೂ ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದ ಪದಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತಿತರರು ಪದಕ ಪ್ರದಾನ ಮಾಡಿದರು.

2023 ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಪಟ್ಟಿ

ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

CM Bommai, Police, Recruitment,

Articles You Might Like

Share This Article