ಬೆಂಗಳೂರು, ಜ.27- ಹಲವು ಚುನಾವಣೆ ಅಗ್ನಿ ಪರೀಕ್ಷೆಗಳ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸಲು ಸಿದ್ಧರಾಗುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಆರು ತಿಂಗಳ ನಂತರ ಬಜೆಟ್ ಮಂಡನೆಯ ಹೊಸ ಸವಾಲು ಎದುರಾಗಿದೆ. ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗುವ ನಿರೀಕ್ಷೆಯಿದೆ.
ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಬೊಮ್ಮಾಯಿ ಅವರು ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೊನೆಯ ಬಜೆಟ್‍ಗಾಗಿ ಪೂರ್ಣ ಪ್ರಮಾಣದ ಸಭೆಗಳನ್ನು ಇನ್ನೂ ಪ್ರಾರಂಭಿಸಿಲ್ಲ. ಕೃಷಿಯೊಂದಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವರು ಬಜೆಟ್ ಬೇಡಿಕೆಗಳನ್ನು ಪಟ್ಟಿ ಮಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಆರೋಗ್ಯವೇ ಪ್ರಮುಖ ಕೇಂದ್ರಬಿಂದುವಾಗಿದೆ.
ಕೋವಿಡ್ ಸೋಂಕಿನಿಂದ ಸಂಪನ್ಮೂಲಗಳ ಕೊರತೆ ಎದುರಾಗಿದೆ. ಬಜೆಟ್ ಮಂಡಿಸುವಾಗ ನಾವು ಅತಿ ಹೆಚ್ಚು ಜಾಗರೂಕರಾಗಿರಬೇಕು. ಕೇಂದ್ರದಿಂದ ಹೆಚ್ಚಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೆಸರು ಹೇಳಲು ಬಯಸದ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತಲೇ ಜನರಿಗೆ ಹೊರೆಯಾಗದಂತೆ ಬಜೆಟ್ ನೀಡಬೇಕು. ನಾವು 2023ರಲ್ಲಿ ಚುನಾವಣೆ ಎದುರಿಸುತ್ತಿರುವ ಕಾರಣ ಈ ಬಜೆಟ್ ನಮಗೆ ನಿರ್ಣಾಯಕವಾಗಿದೆ ಎಂದು ನಾಯಕ ಹೇಳುತ್ತಿದ್ದಾರೆ. ಪ್ರತಿಯೊಂದು ಇಲಾಖೆಯು ಕರಡು ಬಜೆಟ್‍ನಲ್ಲಿ ಅನೇಕ ಹೊಸ ಯೋಜನೆ ಸೇರಿಸಲು ಚಿಂತಿಸಲಾಗಿದ್ದು, ಗಣರಾಜ್ಯೋತ್ಸವದ ನಂತರ ಈ ವಾರದಿಂದ ಆಂತರಿಕವಾಗಿ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
