ಬೆಂಗಳೂರು,ಫೆ.16- ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಬಂದಿದ್ದ ಸಾರ್ವಜನಿಕರಿಗೆ ಪ್ರವೇಶಿಸಲು ಅಡ್ಡಿಪಡಿಸಿದ ಪೊಲೀಸರನ್ನು ಸಿಎಂ ಬೊಮ್ಮಾಯಿ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ಬೆಳಗ್ಗೆ ನಡೆದಿದೆ. ಬೆಂಗಳೂರಿನ ಆರ್.ಟಿ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಬಳಿ ಕುಂದುಕೊರತೆಗಳನ್ನು ಹೇಳಿ ಪರಿಹಾರ ಪಡೆದುಕೊಳ್ಳಲು ಸಾರ್ವಜನಿಕರು ಆಗಮಿಸಿದ್ದರು.
ಆದರೆ ಭದ್ರತಾ ಹಿತದೃಷ್ಟಿಯಿಂದ ಪೊಲೀಸರು ಸಾರ್ವಜನಿಕರಿಗೆ ಸಿಎಂ ಭೇಟಿ ಮಾಡಲು ಅವಕಾಶ ಕೊಡಲಿಲ್ಲ. ಇದರಿಂದ ಕುಪಿತರಾದ ಜನರು ಮುಖ್ಯಮಂತ್ರಿಗಳು ಬರುತ್ತಿದ್ದಂತೆ ಪೊಲೀಸರ ವಿರುದ್ಧ ದೂರು ನೀಡಿದರು. ಕೆರಳಿ ಕೆಂಡವಾದ ಸಿಎಂ ಸಾರ್ವಜನಿಕರನ್ನು ಬಿಡದ ಪೊಲೀಸರ ಮೇಲೆ ಸಿಎಂ ಗರಂ ಆಗಿ, ರೀ ಯಾಕ್ರೀ ಅವರನ್ನು ಬಿಟ್ಟಿಲ್ಲ ಎಂದು ಪೊಲೀಸರ ವಿರುದ್ಧ ಗುಡುಗಿದರು.
ನನ್ನನ್ನು ಭೇಟಿ ಮಾಡಲು ಬಂದವರನ್ನು ಭದ್ರತಾ ನೆಪವೊಡ್ಡಿ ಅಡ್ಡಿಪಡಿಸುವುದು ಸರಿಯಲ್ಲ. ಅವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ನಮ್ಮ ಬಳಿ ಬರುತ್ತಾರೆ. ನೀವು ಬಿಡದಿದ್ದರೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಇನ್ನು ಮುಂದೆ ಈ ರೀತಿ ಪದೇ ಪದೇ ದೂರು ಬಂದರೆ ನಾನು ಸಹಿಸುವುದಿಲ್ಲ. ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಸಾರ್ವಜನಿಕರನ್ನು ಬಿಡದೆ ದೂರ ನಿಲ್ಲಿಸಿದ್ದ ಪೊಲೀಸರ ಬಗ್ಗೆ ಅಸಮಾಧಾನಗೊಂಡ ಸಿಎಂ, ಯಾಕ್ರೀ ಅವರನ್ನು ದೂರ ನಿಲ್ಲಿಸಿದ್ದೀರಿ.. ಕರೀರಿ ಅವರನ್ನು ಇಲ್ಲಿಗೆ ಎಂದು ಪೊಲೀಸರಿಗೆ ತಾಕೀತು ಮಾಡಿದಾಗ ಪೊಲೀಸರು ಪ್ರವೇಶಕ್ಕೆ ಅವಕಾಶ ಕೊಟ್ಟರು.
