ಬೆಂಗಳೂರು,ಆ.6- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬಹುನಿರೀಕ್ಷಿತ ದೆಹಲಿ ಪ್ರವಾಸ ರದ್ದುಗೊಂಡಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಅವರು, ನನಗೆ ಕೋವಿಡ್ ಪಾಸಿಟಿವ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕೊರೋನಾ ದೃಢಪಟ್ಟ ತಕ್ಷಣ ಪ್ರತ್ಯೇಕವಾಗಿದ್ದು ನನ್ನ ಸಂಪರ್ಕಕ್ಕೆ ಬಂದಿರುವವರೆಲ್ಲರೂ ಪರೀಕ್ಷೆ ಮಾಡಿಸಿಕೊಂಡು ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರು ದೆಹಲಿಗೆ ತೆರಳಬೇಕಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಅಕೃತ ಸಭೆಯಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಆದರೆ ಕೊರೋನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ರದ್ದಾಗಿದೆ.
ಆಜಾದಿ ಕಾ ಅಮೃತ ಮಹೋತ್ಸವ ಕುರಿತ ಸಭೆ ಮತ್ತು ನೀತಿ ಆಯೋಗದ ಸಭೆಗಳಲ್ಲಿ ಭಾಗವಹಿಸಬೇಕಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದರು.
ಆಗಸ್ಟ್ 7ರಂದು ದೆಹಲಿಯಿಂದ ಹಿಂದಿರುಗಲು ಕಾರ್ಯಸೂಚಿ ನಿಗದಿಯಾಗಿತ್ತು. ಅಷ್ಟರಲ್ಲೇ ಕೊರೊನಾ ಸೋಂಕು ದೃಢಪಟ್ಟಿದ್ದು, ದೆಹಲಿ ಪ್ರವಾಸ ರದ್ದಾಗಿದೆ. ಬೊಮ್ಮಾಯಿ ಅವರಿಗೆ ಕಳೆದ ಜನವರಿ ತಿಂಗಳಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ 2ನೇ ಬಾರಿಗೆ ಸೋಂಕಿಗೆ ತುತ್ತಾಗಿದ್ದರು.