ಮತ್ತೆ ದೆಹಲಿಯತ್ತ ಸಿಎಂ, ಸಂಪುಟ ವಿಸ್ತರಣೆಯೋ..?ಪುನಾರಚನೆಯೊ..?

Social Share

ಬೆಂಗಳೂರು,ನ.5- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮತ್ತೆ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮಯಾವಕಾಶ ಕೋರಿದ್ದು,ಅವಕಾಶ ಸಿಕ್ಕಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ವಿಚಾರ ಕುರಿತು ಚರ್ಚಿಸಲಿದ್ದಾರೆಂದು ತಿಳಿದು ಬಂದಿದೆ.

ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಕೆಲವು ಬದಲಾವಣೆಗಳನ್ನು ಮಾಡಲು ವರಿಷ್ಠರು ಬಯಸಿದ್ದಾರೆ ಎಂದು ಮೂಲಗಳು ಹೇಳಿವೆ. ಸದ್ಯಕ್ಕೆ ಆರು ಸಚಿವರ ಸ್ಥಾನಗಳು ಖಾಲಿ ಇವೆ.
ಕೇವಲ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಅನುಮತಿ ಕೊಡುತ್ತಾರೋ ಅಥವಾ ಕೆಲವು ಹಿರಿಯ ಸಚಿವರಿಂದ ರಾಜೀನಾಮೆ ಪಡೆದು ಪುನಾರಚನೆ ಮಾಡುತ್ತಾರೋ ಕಾದು ನೋಡಬೇಕಿದೆ.

ಸರ್ಕಾರ ರಚನೆಯಾಗಿ ವರ್ಷ ಕಳೆದರೂ ಸಂಪುಟ ವಿಸ್ತರಣೆ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ. ಹೈಕಮಾಂಡ್ ನಾಯಕರ ಭೇಟಿಗಾಗಿ ಅಲೆದಾಡಿ ಸಾಕಾಗಿರುವ ಸಿಎಂ ಒಂದಿಲ್ಲೊಂದು ಕಾರಣಗಳಿಂದ ಬರಿಗೈಯಲ್ಲೇ ವಾಪಸ್ಸಾಗುತ್ತಿದ್ದರು.

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿ ರಿಪೋರ್ಟ್ ಸಿಕ್ಕ ಹಿನ್ನೆಲೆಯಲ್ಲಿ ಮತ್ತೆ ಸಂಪುಟ ಸೇರಲು ರಮೇಶ್ ಜಾರಕಿಹೊಳಿ ತೀವ್ರ ಒತ್ತಡ ಹೇರುತ್ತಿದ್ದಾರೆ. ಇತ್ತ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದು ಮತ್ತೆ ಸಂಪುಟಕ್ಕೆ ರೀ ಎಂಟ್ರಿ ಕೊಡಲು ಕೆ.ಎಸ್.ಈಶ್ವರಪ್ಪ ಒತ್ತಡ ಹೇರುತ್ತಿದ್ದಾರೆ.

ಇವರ ಜೊತೆ ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಮತ್ತಷ್ಟು ನಾಯಕರು ಸಂಪುಟ ಸೇರಲು ಕಸರತ್ತು ನಡೆಸುತ್ತಿದ್ದು, ಇವರೆಲ್ಲರ ಮನವೊಲಿಕೆ ಕಾರ್ಯ ಸಿಎಂ ಬೊಮ್ಮಾಯಿಗೆ ಕಷ್ಟದ ಕೆಲಸವಾಗಿದೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಪದೇ ಪದೇ ಹೈಕಮಾಂಡ್ ನಾಯಕರ ಭೇಟಿ ಮಾಡಿ ಸಿಎಂ ಸಂಪುಟ ವಿಸ್ತರಣೆ ಸರ್ಕಸ್ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕಾರ ವಹಿಸಿಕೊಂಡ ನಂತರ ಬಹುತೇಕ ಪ್ರತಿ ತಿಂಗಳು ದೆಹಲಿಗೆ ಭೇಟಿ ನೀಡಿದ್ದಾರೆ. ಒಮ್ಮೊಮ್ಮೆ ತಿಂಗಳಲ್ಲೇ ಎರಡುಮೂರು ಬಾರಿ ಭೇಟಿ ನೀಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹೈಕಮಾಂಡ್ ನಾಯಕರನ್ನು ಎರಡು ವರ್ಷದಲ್ಲಿ ಭೇಟಿ ಮಾಡಿದ್ದಕ್ಕಿಂತ ನಾಲ್ಕಾರು ಪಟ್ಟು ಹೆಚ್ಚಿಗೆ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಆದರೆ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳುವಲ್ಲಿ ಇನ್ನು ಸಫಲರಾಗಿಲ್ಲ.

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಐದಾರು ಬಾರಿ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಿದರೂ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿಲ್ಲ.

ಮೋದಿ, ಜೆ.ಪಿ.ನಡ್ಡಾ, ಅಮಿತ್ ಶಾ ರಾಜ್ಯಕ್ಕೆ ಬಂದಾಗಲೂ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆದರೂ ಅನುಮತಿ ಮಾತ್ರ ಸಿಕ್ಕಿಲ್ಲ. ಖುದ್ದು ಅಮಿತ್ ಶಾ ಮಲ್ಲೇಶ್ವರಂ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಿ ಸಚಿವ ಸಂಪುಟ ವಿಸ್ತರಣೆ ಕುರಿತು ಎಲ್ಲ ರೀತಿಯ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು.

ದೆಹಲಿಗೆ ಹೋಗಿ ಮಾಹಿತಿ ನೀಡುವುದಾಗಿ ತಿಳಿಸಿ ನಿರ್ಗಮಿಸಿದ ಅಮಿತ್ ಶಾ ಇಲ್ಲಿಯವರೆಗೂ ಸಂಪುಟ ವಿಸ್ತರಣೆ ವಿಚಾರದಲ್ಲಿ ತುಟಿ ಬಿಚ್ಚಿಲ್ಲ. ಮೋದಿ ಬಳಿ ಹೋದರೆ ಅಮಿತ್ ಶಾ ಬಳಿ ಹೋಗಿ ಎನ್ನುವ ಉತ್ತರ, ಅಮಿತ್ ಶಾ ಬಳಿ ಹೋದರೆ ನಡ್ಡಾ ಜೊತೆ ಚರ್ಚಿಸಿ ಎನ್ನುವ ಉತ್ತರ, ನಡ್ಡಾ ಬಳಿ ಹೋದರೆ ಚರ್ಚಿಸಿ ಹೇಳುತ್ತೇವೆ ಎಂಬ ಉತ್ತರ ಸಿಗುತ್ತಿದೆ.

ಶಾಲೆಗಳಲ್ಲಿ ಧ್ಯಾನ ವಿರೋಧಿಸಿದ ಸಿದ್ದುಗೆ ಸಚಿವ ಬಿ.ಸಿ.ನಾಗೇಶ್ ತಿರುಗೇಟು

ಪ್ರತಿ ಬಾರಿ ಇದೇ ಉತ್ತರದೊಂದಿಗೆ ಸಿಎಂ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಈ ಬಾರಿಯಾದರೂ ಸಚಿವ ಸಂಪುಟ ವಿಸ್ತರಣೆಗೆ ಅವಕಾಶ ಸಿಗುತ್ತದೆಯೇನೋ ಎಂಬ ನಿರೀಕ್ಷೆಯೊಂದಿಗೆ ಮತ್ತೊಮ್ಮೆ ದೆಹಲಿಗೆ ಹೊಡುತ್ತಿದ್ದಾರೆ.

# ವಿಸ್ತರಣೆಯೋ/ಪುನಾರಚನೆಯೊ:
ಬಹುನಿರೀಕ್ಷಿತ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ವರಿಷ್ಠರು ಸೂಚನೆ ಕೊಡುತ್ತಾರೋ ಇಲ್ಲವೇ ಪುನಾರಚನೆಗೆ ಅವಕಾಶ ನೀಡುತ್ತಾರೋ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಒಂದು ಮೂಲದ ಪ್ರಕಾರ ಕೆಲವು ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹಿಂದುತ್ವ ಹಾಗೂ ಆರ್‍ಎಸ್‍ಎಸ್ ನಿಷ್ಠರಿಗೆ ಮಣೆ ಹಾಕಬೇಕೆಂಬ ಅಭಿಪ್ರಾಯಗಳು ಕೇಳಿಬಂದಿದೆ.

ಪದೇ ಪದೇ ಅಕಾರದ ರುಚಿ ಅನುಭವಿಸಿರುವವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜನೆ ಮಾಡಬೇಕೆಂಬ ಒತ್ತಡವೂ ಇದೆ. ಇದಕ್ಕೆ ಏನಾದರೂ ವರಿಷ್ಠರು ಅನುಮತಿ ನೀಡಿದರೆ ಕನಿಷ್ಟ 6ರಿಂದ 8 ಸಚಿವರು ಕೋಕ್ ಪಡೆಯುವ ಸಾಧ್ಯತೆ ಇದೆ.

ಹಿರಿಯ ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಆರ್.ಅಶೋಕ್, ಕೋಟಾ ಶ್ರೀನಿವಾಸ್ ಪೂಜಾರಿ, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ ಸೇರಿದಂತೆ ಮತ್ತಿತರರನ್ನು ಸಂಪುಟದಿಂದ ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ.

ಶಾಸಕರಾದ ರಾಜುಗೌಡ ನಾಯಕ್, ಅರವಿಂದ್ ಬೆಲ್ಲದ್, ಎಂ.ಪಿ.ರೇಣುಕಾಚಾರ್ಯ, ಪಿ.ರಾಜೀವ್, ಪೂರ್ಣಿಮಾ ಶ್ರೀನಿವಾಸ್, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್ ಸೇರಿದಂತೆ ಮತ್ತಿತರ ಹೆಸರುಗಳು ಕೇಳಿಬಂದಿವೆ.

Articles You Might Like

Share This Article