ದಿಢೀರ್ ದೆಹಲಿಯತ್ತ ಸಿಎಂ ಬೊಮ್ಮಾಯಿ, ಸಚಿವಾಕಾಂಕ್ಷಿಗಳಲ್ಲಿ ಚಿಗುರಿದ ಆಸೆ

Social Share

ಬೆಂಗಳೂರು,ನ.28- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ದಿನಗಳ ಕಾಲ ದೆಹಲಿಗೆ ತೆರಳುತ್ತಿದ್ದು, ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಮತ್ತಿತರ ನಾಯಕರನ್ನು ಭೇಟಿ ಮಾಡಿ ನನೆಗುದಿಗೆ ಬಿದ್ದಿರುವ ನಿರೀಕ್ಷಿತ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆ ನಡೆಸುವ ಸಂಭವವಿದೆ.

ದೆಹಲಿಗೆ ಬರುವಂತೆ ಬುಲಾವ್ ಬಂದ ಬೆನ್ನಲ್ಲೇ ಬೊಮ್ಮಾಯಿಯವರ ಭೇಟಿ ನಿಗದಿಯಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಉಂಟಾಗಿರುವ ಗಡಿ ವಿವಾದ ಕುರಿತು ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರನ್ನು ಭೇಟಿ ಮಾಡಲಿದ್ದಾರೆ.

ಬೊಮ್ಮಾಯಿ ಅವರು ದಿಢೀರ್ ದೆಹಲಿಗೆ ತೆರಳುತ್ತಿರುವುದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿನ ಮತ್ತೆ ಆಸೆ ಗರಿಗೆದರಿದೆ. ಈ ಬಾರಿ ವಿಸ್ತರಣೆ ಅಥವಾ ಪುನರ್‍ರಚನೆ ಎರಡರಲ್ಲಿ ಯಾವುದೋ ಒಂದು ಆಗಿಯೇ ತೀರುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆಯ ವಿಚಾರವನ್ನು ಪ್ರಸ್ತಾಪಿಸಿದ್ದು, ಆಗಲಿ, ತ್ವರಿತವಾಗಿ ಮಾಡಿ, ಅದಕ್ಕೂ ಮುನ್ನ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಮಾತನಾಡಿ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಬೊಮ್ಮಾಯಿ ಸಂಪುಟದಲ್ಲಿ ಈಗ ಒಟ್ಟು 6 ಸಚಿವ ಸ್ಥಾನಗಳು ಖಾಲಿ ಇದ್ದು, ವಿಸ್ತರಣೆಗೆ ಹಸಿರು ನಿಶಾನೆ ಸಿಕ್ಕಿದರೆ ಯಾವುದೇ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಬಹುದು ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುತ್ತಿರುವುದು ಸಹಜವಾಗಿ ಸಂಪುಟ ವಿಸ್ತರಣೆ/ ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸಚಿವಾಕಾಂಕ್ಷಿಗಳು ಮತ್ತೆ ಕಣ್ಣರಳಿಸಿ ಕೂಡುವಂತೆ ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಿ ಸಚಿವ ಸಂಪುಟ ಪುನಾರಚನೆ ಕುರಿತು ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದರು.

ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೂರ್ನಾಲ್ಕು ದಿನಗಳಲ್ಲಿ ಸಂಪುಟ ಪುನಾರಚನೆಯಾಗುವ ವಿಶ್ವಾಸ ಇದೆ ಎಂದಿದ್ದರು.

ಒಂದು ವೇಳೆ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಎರಡು ಮೂರು ದಿನಗಳಲ್ಲಿ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಈ ಬಾರಿಯ ಸಿಎಂ ದೆಹಲಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಪಕ್ಷ ಸೇರ್ಪಡೆ ಚರ್ಚೆ ಸಾಧ್ಯತೆ:

ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಭೇಟಿಯಾದರೆ, ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾಗಲು ಅನೇಕ ನಾಯಕರು ಸಂಪರ್ಕ ಮಾಡುತ್ತಿದ್ದು, ಅಂತಹ ನಾಯಕರುಗಳ ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ಮುಖ್ಯಮಂತ್ರಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸದ್ಯ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇವೆ. ಇನ್ನೇನು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಸಂದರ್ಭದಲ್ಲಿ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡಲೇ ಬೇಕಾಗಿದೆ.

ಚಾಕೊಲೇಟ್ ತಿಂದ 9 ವರ್ಷದ ಬಾಲಕ ಉಸಿರುಗಟ್ಟಿ ಸಾವು

ಸದ್ಯ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಇವೆ. ಇನ್ನೇನು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಸಂದರ್ಭದಲ್ಲಿ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡಲೇ ಬೇಕಾಗಿದೆ.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಸಿದಂತೆ ಸಚಿವ ಸ್ಥಾನಕ್ಕೆ ಈಶ್ವರಪ್ಪ ಕೂಡಾ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನವನ್ನು ಭರ್ತಿ ಮಾಡಬೇಕಾಗಿದೆ.ಆದರೆ ಸದ್ಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಬದಲಾಗಿ ಸಂಪುಟ ಪುನಾರಚನೆಗೆ ಹೈಕಮಾಂಡ್ ಹೆಚ್ಚಿನ ಒಲವು ತೋರಿಸುತ್ತಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.

ಕೆಲವು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಇತರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲೂ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ದೆಹಲಿ ಪ್ರವಾಸವೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

#BasavarajBommai, #CabinetExpansion, #DelhiVisit

Articles You Might Like

Share This Article