ವೋಟರ್ ಲಿಸ್ಟ್ ಅಕ್ರಮ ಆರೋಪ : ಸಿಎಂ ಬೊಮ್ಮಾಯಿ ಮೊದಲ ಪ್ರತಿಕ್ರಿಯೆ

Social Share

ಬೆಂಗಳೂರು, ನ.17- ಮತದಾರರ ಡೇಟಾವನ್ನು ಕಾನೂನು ಬಾಹಿರವಾಗಿ ಸಂಗ್ರಹ ಮಾಡಲಾಗಿದೆ ಎಂಬ ಪ್ರತಿಪಕ್ಷ ಕಾಂಗ್ರೆಸ್ ಆರೋಪ ಕುರಿತಾಗಿ ಸಮಗ್ರವಾಗಿ ತನಿಖೆಗೆ ಸೂಚನೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸೇರಿದಂತೆ ಮತ್ತಿತರ ಸರ್ಕಾರ ಮತ್ತು ನನ್ನ ಮೇಲೆ ಗುರುತರವಾದ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತು ನಾನು ಸಮಗ್ರ ತನಿಖೆ ನಡೆಸಲು ಸಂಬಂಧ ಪಟ್ಟ ಅಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಕಾಂಗ್ರೆಸ್ ಮಾಡಿರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದದ್ದು, ಸರ್ಕಾರ ಮತ್ತು ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಇದರಲ್ಲಿ ನಾನಾಗಲಿ, ನಮ್ಮ ಸಂಪುಟದ ಸಚಿವರು ಸೇರಿದಂತೆ ಯಾರೂ ಕೂಡ ಭಾಗಿಯಾಗಿಲ್ಲ. ಎಲ್ಲವೂ ಕಪೋಲ ಕಲ್ಪಿತ ಎಂದು ಸ್ಪಷ್ಟಪಡಿಸಿದರು.

ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿಯೊಬ್ಬರೂ ಕೂಡ ಮತದಾರರ ಮಾಹಿತಿಯನ್ನು ಕಲೆ ಹಾಕುತ್ತಾರೆ. ಆದರೆ ಅವರ ವೈಯಕ್ತಿಕ ವಿಷಯಗಳನ್ನು ತೆಗೆದುಕೊಳ್ಳುವುದಿಲ್ಲ. ಕಾಂಗ್ರೆಸ್ ನವರು ನಾವೇನೊ ಸಾಸಿಬಿಟ್ಟಿದ್ದೇವೆಂಬ ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

BIG NEWS : ಮತ್ತೊಂದು ಬೃಹತ್ ಅಕ್ರಮದ ಬಾಂಬ್ ಸಿಡಿಸಿದ ಕಾಂಗ್ರೆಸ್..!

ನಾನು ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿರುವುದು ತುಂಬಾ ಹಾಸ್ಯಾಸ್ಪದ. ಒಂದು ವೇಳೆ ಇದರಲ್ಲಿ ಸತ್ಯಾಂಶವಿದ್ದಿದ್ದರೆ ಕಾಂಗ್ರೆಸ್‍ನವರು ಮೂರು ಬಾರಿ ಜೈಲಿಗೆ ಹೋಗಬೇಕಿತ್ತೆಂದು ಬೊಮ್ಮಾಯಿ ತಿರುಗೇಟು ನೀಡಿದರು.

ದೇಶದೆಲ್ಲೆಡೆ ಸಾಲು ಸಾಲು ಚುನಾವಣೆಗಳನ್ನು ಸೋತು ದಿವಾಳಿಯಾಗಿರುವ ಕಾಂಗ್ರೆಸ್ ನನ್ನ ರಾಜೀನಾಮೆಗೆ ಒತ್ತಾಯಿಸಿರುವುದು ಬೌದ್ಧಿಕವಾಗಿ ದಿವಾಳಿಯಾಗಿರುವುದೆಂಬುದಕ್ಕೆ ನಿದರ್ಶನ ಎಂದು ವಾಗ್ದಾಳಿ ನಡೆಸಿದರು.
ಇದು ಚುನಾವಣಾ ಆಯೋಗ, ಬಿಬಿಎಂಪಿ ಹಾಗೂ ಎನ್‍ಜಿಒಗೆ ಸಂಬಂಧಪಟ್ಟ ವಿಷಯ. ಒಂದು ವೇಳೆ ಅಕ್ರಮವೆಸಗಿದ್ದರೆ ಚುನಾವಣಾ ಆಯೋಗ ಬಿಬಿಎಂಪಿ ಆಯುಕ್ತರು ಸೇರಿದಂತೆ ಯಾರಿಗಾದರೂ ದೂರು ಕೊಡಲಿ ಸತ್ಯಾಂಶ ಹೊರಬರಲಿದೆ ಎಂದರು.

ನಾವೇನೂ ತನಿಖೆಗೆ ಹೆದರುವುದಿಲ್ಲ.

ಸಚಿವ ಅಶ್ವಥ್ ನಾರಾಯಣ, ಹೊಂಬಾಳೆ ಸಂಸ್ಥೆ ಅಥವಾ ಇನ್ನು ಯಾರೇ ಭಾಗಿಯಾಗಿದ್ದರೂ ತನಿಖೆಯಾಗಲಿ, ಸತ್ಯಾಂಶ ಹೊರಬರಬೇಕೆಂಬ ಇಚ್ಛೆ ನಮಗೂ ಇದೆ ಎಂದರು.

ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ ಅವರು ತಮ್ಮ ನಿವಾಸಕ್ಕೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಕರೆಸಿಕೊಂಡು ಪ್ರಕರಣ ಕುರಿತು ಮಾಹಿತಿ ಪಡೆದರು.

ಹೊಂಬಾಳೆ ಸಂಸ್ಥೆಗೆ ಕೊಟ್ಟಿದ್ದು ಯಾರು, ಅದರ ಹಿನ್ನೆಲೆಯಲ್ಲಿ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂಬುದೂ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದರು.

Articles You Might Like

Share This Article